ಕೆ.ಆರ್.ಪೇಟೆ: ತಾಲೂಕಿನ ಕಾಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಸುಮಾರು ₹30 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಡೇರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷೆ ನವೀನಾ ಮಂಜೇಗೌಡ ಹಾಗೂ ಕಾರ್ಯದರ್ಶಿ ವರಲಕ್ಷ್ಮೀ ಶ್ರೀಕಂಠಾಚಾರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸಂಘದ ಹಣಕಾಸಿನ ವ್ಯವಹಾರಗಳ ಕುರಿತು ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಡೇರಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಆಡಿಟ್ ವರದಿಯನ್ನು ಮಂಡಿಸುವ ಬದಲು ಕೈಬರಹದಲ್ಲಿ ಸಿದ್ಧಪಡಿಸಿಕೊಂಡಿದ್ದ ಮತ್ತೊಂದು ಪಟ್ಟಿಯನ್ನು ಓದಲಾಗಿದೆ. ಅದರಲ್ಲಿ ನಮೂದಿಸಿರುವ ಖರ್ಚುಗಳಿಗೆ ಸಂಬಂಧಿಸಿದ ಓಚರ್ ಹಾಗೂ ಸೂಕ್ತ ದಾಖಲೆಗಳನ್ನು ನೀಡುವಂತೆ ಶೇರುದಾರರು ಮತ್ತು ಹಾಲು ಉತ್ಪಾದಕರು ಕೇಳಿದರೂ ದಾಖಲೆಗಳನ್ನು ನೀಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಂಘದಲ್ಲಿ ಅವ್ಯವಹಾರ ನಡೆದಿಲ್ಲವೆಂದಾದರೆ, ಕೇಳಿರುವ ಎಲ್ಲ ದಾಖಲೆಗಳನ್ನು ನೀಡಬೇಕು. ಖರ್ಚು ಮಾಡಿರುವ ಹಣಕ್ಕೆ ರಶೀದಿ ಒದಗಿಸಬೇಕು ಹಾಗೂ ಸಂಘದ ಸಂಪೂರ್ಣ ಲೆಕ್ಕಪತ್ರಗಳನ್ನು ಸದಸ್ಯರ ಮುಂದಿಡಬೇಕು ಎಂದು ಒತ್ತಾಯಿಸಿದರು.
ಲೆಕ್ಕಪತ್ರ ಹಾಗೂ ಅಗತ್ಯ ದಾಖಲೆಗಳನ್ನು ನೀಡುವವರೆಗೆ ಡೇರಿಯ ಬಾಗಿಲು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿ, ಡೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಗ್ರಾಮದ ಮುಖಂಡರಾದ ವರದರಾಜು, ಅಶೋಕ್, ಬಾಣೇಗೌಡ, ರಾಮಕೃಷ್ಣೇಗೌಡ, ಗಿರೀಗೌಡ, ಸ್ವಾಮೀಗೌಡ, ಯಶೋಧರ, ಮಂಜುನಾಥ್, ಅಶೋಕ್ ಕುಮಾರ್, ಗಂಗಾಧರ್, ಹರೀಶ್, ರಂಗಸ್ವಾಮಿ, ಪ್ರಕಾಶ್, ಕಾಂತರಾಜು, ಮಂಜು, ವಿನಯ್, ವರುಣ್, ರಾಮೇಗೌಡ, ಕಾಂತಾ, ನಾರಾಯಣ್, ಮರಿಯಯ್ಯ, ಕಿರಣ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.
