ಕೆ ಆರ್ ಪೇಟೆ : ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಸಾಂಸ್ಕೃತಿಕ ಕಲಾ ಸಂಘಗಳ ಪಾತ್ರ ನಿರ್ಣಾಯಕವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಮರೆಯಾಗಿ ನೇಪಥ್ಯಕ್ಕೆ ಸರಿಯುತ್ತಿರುವ ನಮ್ಮ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ರಂಗಭೂಮಿ ಚಟುವಟಿಕೆಗಳು ತಾಲ್ಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಯಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು

ಅವರು ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಅಂಬಿಗರಹಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಶ್ರೀ ಸಂಗಮೇಶ್ವರ ಸಾಂಸ್ಕೃತಿಕ ಕಲಾ ಸಂಘವನ್ನು ಉದ್ಘಾಟನೆ ಮಾಡಿ ಗ್ರಾಮದ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಅಂಬಿಗರಹಳ್ಳಿ ಗ್ರಾಮವು ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಕಲೆ ಸಾಹಿತ್ಯವನ್ನು ಹೊಂದಿರುವ ವಿಶಿಷ್ಟವಾದ ಗ್ರಾಮವಾಗಿದೆ. ಗ್ರಾಮೀಣ ಸಂಸ್ಕೃತಿಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದಾಶಯವನ್ನು ಇಟ್ಟುಕೊಂಡು ನಮ್ಮೆಲ್ಲರ ಆರಾಧ್ಯದೈವ ವಾಗಿರುವ ಸಂಗಮೇಶ್ವರ ಸ್ವಾಮಿಯ ಹೆಸರಿನಲ್ಲಿ ಆರಂಭವಾಗಿರುವ ಸಾಂಸ್ಕೃತಿಕ ಕಲಾಸಂಘವು ನಮ್ಮ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ವಿಶಿಷ್ಟವಾಗಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಬೆಳೆದು ಹೆಮ್ಮರವಾಗಲಿ ಎಂದು ಆಶಿಸಿದರಲ್ಲದೆ ಪವಿತ್ರ ತ್ರಿವೇಣಿ ಸಂಗಮದಲ್ಲಿರುವ ರಂಗಮಂಟಪವನ್ನು ಪೌರಾಣಿಕ ನಾಟಕಗಳು ಹಾಗೂ ರಂಗಭೂಮಿ ಚಟುವಟಿಕೆಗಳನ್ನು ನಡೆಸಲು ಅನುಕೂಲ ವಾಗುವಂತೆ ತಮ್ಮ ಶಾಸಕರ ಅನುದಾನದಿಂದ ವೇದಿಕೆಯನ್ನು ಎತ್ತರಗೊಳಿಸಿ ಸಹಾಯ ಮಾಡುವುದಾಗಿ ಶಾಸಕ ಮಂಜು ಭರವಸೆ ನೀಡಿದರು.
ಸಂಕಷ್ಟ ಪರಿಸ್ಥಿತಿಯಲ್ಲಿ ಶಾಸಕನಾಗಿರುವುದಕ್ಕೆ ಬೇಸರವಿದೆ… ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಸ್ತಿತ್ವದಲ್ಲಿದೆ ನಾನು ಜೆಡಿಎಸ್ ಪಕ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದು ವಿರೋಧ ಪಕ್ಷಕ್ಕೆ ಸೇರಿರುವುದರಿಂದ ಸರ್ಕಾರವು ತಾಲೂಕಿನ ಸಮಸ್ಯೆಗಳು ಹಾಗೂ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡದೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿರುವುದರಿಂದ ತಾಲೂಕಿನ ಜನತೆಯ ಅಗತ್ಯ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಅನುದಾನವು ದೊರೆಯದೆ ನನ್ನ ಕನಸಿನ ಕೃಷ್ಣರಾಜಪೇಟೆಯನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ.
ಸಂತೆ ಬಾಚಹಳ್ಳಿ ಹೋಬಳಿಯಲ್ಲಿ ಕೆರೆಕಟ್ಟೆಗಳು ಒಡೆದು ನಾಲ್ಕೈದು ವರ್ಷಗಳು ಕಳೆಯುತ್ತಿದ್ದರು ಇಂದಿಗೂ ಕೆರೆಯ ಏರಿಯನ್ನು ದುರಸ್ತಿ ಪಡಿಸಲು ಸಾಧ್ಯವಾಗಿಲ್ಲ ತಾಲೂಕಿನಾದ್ಯಂತ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ಗುಂಡಿ ಮುಚ್ಚಲು ಸರ್ಕಾರವು ಅನುದಾನವನ್ನು ನೀಡುತ್ತಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಸಂಕಷ್ಟವನ್ನು ಎದುರಿಸುತ್ತಿರುವ ನಾನು ಏತಕ್ಕಾದರೂ ಈ ಅವಧಿಯಲ್ಲಿ ಶಾಸಕನಾಗಿ ಆಯ್ಕೆಯಾದನೋ ಎಂದು ಸಂಕಟ ಪಡುವಂತಾಗಿದೆ ಶಾಸಕರ ಗೋಳನ್ನು ಸರ್ಕಾರವು ಆಲಿಸುತ್ತಿಲ್ಲ, ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯು ಶತಮಾನೋತ್ಸವದ ಸಂಭ್ರಮದಲ್ಲಿದ್ದು ವಿಶೇಷವಾದ ಕಾರ್ಯಕ್ರಮವನ್ನು ರೂಪಿಸಲು ಈ ಶಾಲೆಯಲ್ಲಿ ಅಭ್ಯಾಸ ಮಾಡಿದ ರಾಜ್ಯಸಭೆಯ ಮಾಜಿ ಉಪಸಭಾಪತಿ ಕೆ.ರೆಹಮಾನ್ ಖಾನ್ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಕೆಯುಐಡಿಎಫ್ಸಿ ಮಾಜಿ ಅಧ್ಯಕ್ಷ ಎಂ.ಡಿ. ಕೃಷ್ಣಮೂರ್ತಿ ಅವರ ನೇತೃತ್ವದ ನಿಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೇವಲ ಒಂದೆರಡು ಕೋಟಿರೂ ಅನುದಾನ ನೀಡಿ ಶತಮಾನೋತ್ಸವ ಸಂಭ್ರಮ ಆಚರಿಸಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಿದರೂ ಸ್ಪಂದಿಸದ ಮುಖ್ಯಮಂತ್ರಿಗಳು ನಾನು ನೀಡಿದ ಮನವಿಯನ್ನು ತೆಗೆದು ಪಕ್ಕಕ್ಕಿಟ್ಟು ಆಮೇಲೆ ನೋಡೋಣ ನಡೆಯಿರಿ ಎಂದು ಬೇಜವಾಬ್ದಾರಿಯ ಉತ್ತರ ನೀಡಿದರು.
ಕ್ಷೇತ್ರದ ಶಾಸಕನಾಗಿ ನನ್ನ ಮನಸ್ಸಿಗೆ ಈ ಘಟನೆಯಿಂದ ನೋವಾಗಿದ್ದರೂ ಕೂಡ ತಾಲೂಕಿನ ಸಮಗ್ರವಾದ ಅಭಿವೃದ್ಧಿಗಾಗಿ ಯಾರನ್ನು ಬೇಕಾದರೂ ಭೇಟಿಯಾಗಿ ಅನುದಾನ ಬಿಡುಗಡೆ ಮಾಡಿ ಕೊಡುವಂತೆ ಮನವಿ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ ಶಾಸಕ ಎಚ್.ಟಿ. ಮಂಜು ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದಿಂದ ನಾವು ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ ಕೇಂದ್ರ ಸರ್ಕಾರದಲ್ಲಿ ನಮ್ಮ ನಾಯಕರಾದ ಕುಮಾರಣ್ಣ ಅವರು ಸಚಿವರಾಗಿರು ವುದರಿಂದ ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಬಂದು ಭ್ರಗು ಮಹರ್ಷಿಗಳ ತಪೋಭೂಮಿ ಯಾಗಿರುವ ಹೇಮಗಿರಿ ಸುಕ್ಷೇತ್ರ ಮತ್ತು ಪವಿತ್ರ ತ್ರಿವೇಣಿ ಸಂಗಮದ ಅಭಿವೃದ್ಧಿ ಸೇರಿದಂತೆ ಕೃಷ್ಣರಾಜಸಾಗರ ಹಿನ್ನೀರಿಗೆ ಸೇರಿಕೊಂಡಂತಿರುವ ಬೆಳತೂರು ಪಕ್ಕದಲ್ಲಿರುವ ದ್ವೀಪದಿಂದ ಭೂವರಹನಾಥ ಕ್ಷೇತ್ರಕ್ಕೆ ಹಗ್ಗದ ಮೇಲ್ಸೇತುವೆ ನಿರ್ಮಿಸಲು ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಕೊಡುವಂತೆ ಕುಮಾರಣ್ಣ ಅವರಲ್ಲಿ ಮನವಿ ಮಾಡಿ ಒತ್ತಾಯಿಸಿದ್ದೇನೆ ಎಂದು ಮಂಜು ಹೇಳಿದರು.
ಶ್ರೀ ಸಂಗಮೇಶ್ವರ ಸಾಂಸ್ಕೃತಿಕ ಕಲಾ ಸಂಘದ ನಾಮಫಲಕ ವನ್ನು ಅನಾವರಣ ಮಾಡಿದ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾದ ಡಾ.ಪದ್ಮಾಶೇಖರ್ ಮಾತನಾಡಿ ಅಂಬಿಗರಹಳ್ಳಿ ಗ್ರಾಮದಲ್ಲಿ ಸಂಗಮೇಶ್ವರ ಸಾಂಸ್ಕೃತಿಕ ಕಲಾಸಂಘವು ಆರಂಭವಾಗಿ ರುವುದು ಒಳ್ಳೆಯ ಬೆಳವಣಿಗೆ ಯಾಗಿದೆ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ಸೇರಿದಂತೆ ಮೂರು ಜೀವಂತ ನದಿಗಳು ಒಂದಾಗಿ ಸೇರುವ ಪವಿತ್ರ ತ್ರಿವೇಣಿ ಸಂಗಮದ ಪಕ್ಕದಲ್ಲಿರುವ ಈ ಅಂಬಿಗರ ಹಳ್ಳಿ ಗ್ರಾಮವು ಸಾಂಸ್ಕೃತಿಕ ಗ್ರಾಮ ಮಾತ್ರವಲ್ಲದೆ ತಾಲೂಕಿನಲ್ಲಿಯೇ ಮಾದರಿ ಗ್ರಾಮವಾಗಿದೆ.
ಗ್ರಾಮದಲ್ಲಿ ಜನಪದ ಕಲೆಗಳು ಹಾಗೂ ರಂಗಭೂಮಿ ಚಟುವಟಿಕೆಗಳು ಇಂದಿಗೂ ಜೀವಂತವಾಗಿ ರುವುದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಸಂಘವು ರಚನಾತ್ಮಕವಾಗಿ ಕೆಲಸ ಮಾಡಿ ಅಭಿವೃದ್ಧಿಯ ಪಥದತ್ತ ಸಾಗಲಿ ಎಂದು ಪದ್ಮಶೇಖರ್ ಶುಭ ಹಾರೈಸಿದರು.
ಶ್ರೀ.ಸಂಗಮೇಶ್ವರ ಸಾಂಸ್ಕೃತಿಕ ಕಲಾ ಸಂಘದ ಕಚೇರಿಯನ್ನು ಉದ್ಘಾಟನೆ ಮಾಡಿದ ಬೆಂಗಳೂರಿನ ಸಾಯಿಪ್ರಸಾದ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಎಲ್. ಹರಪ್ರಸಾದ್ ರವರು ಮಾತನಾಡಿ ಹುಟ್ಟೂರಿಗೆ ಬಂದು ಇಲ್ಲಿ ನಡೆಯುವ ಕಾರ್ಯಕ್ರಮಗಳು ಹಾಗೂ ಹಬ್ಬ ಹರಿದಿನಗಳಲ್ಲಿ ಭಾಗವಹಿಸುವುದೇ ಸಂತೋಷದ ಸಂಗತಿಯಾಗಿದೆ ಹಿಂದಿನ ಒತ್ತಡದ ಬದುಕಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ರಂಗಭೂಮಿ ಕಲಗಳಿಂದ ಮಾತ್ರ ನಾವು ಒತ್ತಡಗಳಿಂದ ಮುಕ್ತರಾಗಿ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಹೊಂದಲು ಸಾಧ್ಯವಿದೆ ಆದ್ದರಿಂದ ಸಾಂಸ್ಕೃತಿಕ ಕಲಾಸಂಘವು ನಮ್ಮ ಗ್ರಾಮದಲ್ಲಿ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ದ ವಿಶ್ರಾಂತ ಕನ್ನಡ ಭಾಷಾ ತಜ್ಞರಾದ ಡಾ.ಸೋಮಶೇಖರ ಗೌಡ, ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ, ಅಕ್ಕಿಹೆಬ್ಬಾಳು ರಘು, ಜೈನಹಳ್ಳಿ ದಿನೇಶ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ಡಾ.ಅಂಚಿ ಸಣ್ಣಸ್ವಾಮಿಗೌಡ, ಡಾ.ನಾ.ಗಂಗಾಧರಪ್ಪ, ವಿ.ಅಶೋಕ್ ಕುಮಾರ್, ಅಬಕಾರಿ ಇಲಾಖೆಯ ದ್ರುವಕುಮಾರ್ ಪ್ರಗತಿಪರ ಕೃಷಿಕರಾದ ಎಎಲ್ ಪ್ರಸನ್ನ ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರು, ಗ್ರಾಮದ ಮುಖಂಡರಾದ ವೆಂಕಟೇಶ್, ದೇವರಾಜು, ಕೃಷ್ಣಮೂರ್ತಿ, ನಾಗರಾಜು, ಜಗದೀಶ್, ಗಣೇಶ್, ಚಂದ್ರಯ್ಯ, ಪರಮೇಶ್, ಸತೀಶ್, ಹರೀಶ್, ಮಂಜುಳಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ನಿರ್ಮಲ ಭಾಗ್ಯಮ್ಮ, ಲಲಿತಾ, ಸುಗುಣ, ನಂದಿನಿ, ಶೋಭಾ, ಸುಧಾ, ಹೇಮಲತ, ಶಾಂತಮ್ಮ, ಲೀಲಾವತಿ, ಪೂರ್ಣಿಮಾ, ರಾಜಮ್ಮ, ಜಮುನಾ ಸೇರಿದಂತೆ ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಗ್ರಾಮದ ರಸ್ತೆಯಲ್ಲಿ ಎತ್ತಿನ ಗಾಡಿಗಳ ಮೆರವಣಿಗೆ ನಡೆಸಿ ಅತಿಥಿಗಳನ್ನು ವೇದಿಕೆಗೆ ಕರೆತರಲಾಯಿತು.ಇದೇ ಸಂದರ್ಭದಲ್ಲಿ ನವೋದಯ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರುವ ಗ್ರಾಮದ ವಿದ್ಯಾರ್ಥಿನಿ ಕೃಪಾ ಅವರನ್ನು ಗ್ರಾಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ವರದಿ : ಶ್ರೀನಿವಾಸ್, ಕೆ ಆರ್ ಪೇಟೆ
