ಕೆ.ಆರ್.ಪೇಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗೆ ₹30 ಸಾವಿರ ಸಹಾಯಧನ ವಿತರಣೆ ಮಾಡಲಾಯಿತು.
ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ವಲಯದ ನಾಟನಹಳ್ಳಿ ಗ್ರಾಮದ ಕುಮಾರ್ ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರ ಕುಟುಂಬದವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಧರ್ಮಾಧಿಕಾರಿಗಳಾದ ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕುಮಾರ್ ಅವರಿಗೆ ₹30 ಸಾವಿರ ಸಹಾಯಧನವನ್ನು ಮಂಜೂರು ಮಾಡಿದ್ದಾರೆ.
ಈ ಸಹಾಯಧನವನ್ನು ತಾಲೂಕು ಯೋಜನಾಧಿಕಾರಿ ಪ್ರಸಾದ್ ಅವರು ಕುಮಾರ್ ಅವರ ಮನೆಗೆ ತೆರಳಿ ಪ್ರಸಾದದ ರೂಪದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಸಾದ್ ಅವರು, ಧರ್ಮಾಧಿಕಾರಿಗಳು ರಾಜ್ಯದ ಬಡಜನರ ಅಭಿವೃದ್ಧಿಗಾಗಿ ಸದಾ ಮಿಡಿಯುತ್ತಿದ್ದು, ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ನಾಟನಹಳ್ಳಿ ಗ್ರಾಮದ ಕುಮಾರ್ ಅವರಿಗೆ ₹30 ಸಾವಿರ ಧನ ಸಹಾಯ ಮಾಡಲಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವಲಯ ಮೇಲ್ವಿಚಾರಕಿ ಗುಣಶ್ರೀ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದ ಸದಸ್ಯರಿಗೆ ಆರೋಗ್ಯ ಭದ್ರತೆಗಾಗಿ ಪ್ರತಿವರ್ಷ ಸಂಪೂರ್ಣ ಸುರಕ್ಷಾ ಆರೋಗ್ಯ ರಕ್ಷಾ ಯೋಜನೆಗಳನ್ನು ಮಾಡಿಸಲಾಗುತ್ತಿದ್ದು, ಸದಸ್ಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಮಾ ಹಾಗೂ ಗ್ರಾಮದ ಸದಸ್ಯರಾದ ದಿವ್ಯ, ಭಾಗ್ಯಮ್ಮ, ಮಂಗಳ ಲಕ್ಷ್ಮಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
