ಹಾಸನ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಹುದ್ದೆಯಲ್ಲಿ ಮುಂದುವರಿದುಕೊಂಡೇ ಚುನಾವಣಾ ಪ್ರಚಾರ ನಡೆಸುತ್ತಿರುವುದು ನೈತಿಕತೆಯ ವಿರುದ್ಧವಾಗಿದ್ದು, ಆಕಾಂಕ್ಷಿಗಳಾದವರು ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಳಿಕವೇ ಪ್ರಚಾರಕ್ಕೆ ಇಳಿಯಬೇಕು ಎಂದು ಕರ್ನಾಟಕ ರಾಜ್ಯ ಕೆಂಪೇಗೌಡ ವೇದಿಕೆ ಅಧ್ಯಕ್ಷ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆನಂದ್ ಕಾಳೇನಹಳ್ಳಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ನ ಹಾಲಿ ಆಡಳಿತ ಮಂಡಳಿಯ ಅವಧಿ ಇನ್ನೂ ಮುಕ್ತಾಯವಾಗದೇ ಇದ್ದರೂ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ಎಲ್. ಮಲ್ಲೇಶಗೌಡ ಮತ್ತು ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಅವರು ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿರುವುದು ಸರಿಯಲ್ಲ ಎಂದು ಟೀಕಿಸಿದರು. ಹುದ್ದೆಯಲ್ಲಿರುವ ಅಧಿಕಾರವನ್ನು ಬಳಸಿಕೊಂಡು ಪ್ರಚಾರ ನಡೆಸುವುದು ಇತರ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಮತ್ತು ಸಮಾನ ಅವಕಾಶದ ತತ್ವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದರು.
ಯಾರಾದರೂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದರೆ ನೈತಿಕ ಹೊಣೆಗಾರಿಕೆಯಿಂದ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅದನ್ನು ಬಿಟ್ಟು ಹುದ್ದೆಯನ್ನು ಉಳಿಸಿಕೊಂಡೇ ಪ್ರಚಾರ ನಡೆಸುವುದು ಅಧಿಕಾರ ದುರುಪಯೋಗದ ಸಂಕೇತವಾಗಿದೆ. ಜೊತೆಗೆ ಅವಧಿ ಮುಗಿಯುವ ಮುನ್ನವೇ ತಮ್ಮ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಿಸಲು ಯತ್ನಿಸುತ್ತಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಈ ಧೋರಣೆಯನ್ನು ಕೂಡಲೇ ಬದಲಿಸದಿದ್ದರೆ, ಅವರು ಪ್ರಚಾರಕ್ಕೆ ತೆರಳುವ ಎಲ್ಲ ಸ್ಥಳಗಳಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ನೈತಿಕತೆ ಕಾಪಾಡುವುದು ಅತ್ಯವಶ್ಯಕವಾಗಿದ್ದು, ಪರಿಷತ್ನ ಗೌರವವನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ ಎಂದು ಹೇಳಿದರು.
ತಾವು ಕೂಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದು, ಕನ್ನಡ ಪರ ಚಟುವಟಿಕೆಗಳನ್ನು ಬಲಪಡಿಸುವ ದೃಷ್ಟಿಯಿಂದ ಸ್ಪರ್ಧಿಸುತ್ತಿದ್ದೇನೆ. ಜಿಲ್ಲೆಯ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಸಂಘಟನೆಗಳ ಪ್ರತಿನಿಧಿಗಳು ತಮ್ಮನ್ನು ಬೆಂಬಲಿಸಿ ಕನ್ನಡ ಸೇವೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಕಾಳೇನಹಳ್ಳಿ ಆನಂದ್ ಕುಮಾರ್, ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಮುರಾಜಿ ಮಂಜಣ್ಣ, ದಲಿತ ಸೇನಾ ಪಡೆಯ ಜಿಲ್ಲಾಧ್ಯಕ್ಷರಾದ ದಂಡೋರ ಮಂಜುನಾಥ್, ಶ್ರವಣಬೆಳಗೊಳದ ಉದ್ಯಮಿಗಳಾದ ಎಸ್ ಎಮ್ ಆರ್ ರಮೇಶ್ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಶ್ರೀನಿವಾಸ್ ಆರ್.
