ಕೆ.ಆರ್.ಪೇಟೆ,ಮಾ.24: ಒಳ ಮೀಸಲಾತಿ ರಹಿತ ಹಳೆಯ ಮೀಸಲಾತಿಯನ್ನೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟ ದಿಂದ ಬೃಹತ್ ಪ್ರತಿಭಟನಾ ಸಮಾವೇಶವನ್ನು ಮಾ.25ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕೆ.ಆರ್.ಪೇಟೆ ತಾಲ್ಲೂಕಿನಿಂದ ಕನಿಷ್ಠ 2 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಛಲವಾದಿ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಹಾಗೂ ಪುರಸಭಾ ಸದಸ್ಯ ಡಿ.ಪ್ರೇಮ್ಕುಮಾರ್ ತಿಳಿಸಿದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳ ಮೀಸಲಾತಿಯು ಬಲಗೈ ಸಮುದಾಯದ ವಿರೋಧಿಯಾಗಿದ್ದು, ಇದನ್ನು ವಿರೋಧಿಸಿ ಈ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಪ್ರೇಮ್ಕುಮಾರ್ ಹಾಗೂ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ನಟರಾಜ್ ಇತರರು ಬಲಗೈ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಲಗೈ ಸಮುದಾಯದವರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿಯೇ ಅವೈಜ್ಞಾನಿಕವಾಗಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿದ್ದ 101 ಜಾತಿಗಳ ಸಮೀಕ್ಷೆ ನಡೆಸುವಾಗ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿಲ್ಲ. ಹಾಗಾಗಿ ಇವರ ವರದಿಯ ಅನ್ವಯ ನೀಡಿರುವ ಒಳ ಮೀಸಲಿನಲ್ಲಿ ಗೊಂದಲವಿದೆ. ಹಾಗಾಗಿ ಹಳೆಯ ಮೀಸಲಾತಿಯನ್ನೇ ಜಾರಿ ಮಾಡಬೇಕೆಂದು ಆಗ್ರಹಿಸಿದರು.
2025ರ ಸಮಾಜ ಕಲ್ಯಾಣ ಇಲಾಖೆಯ ಸುತ್ತೋಲೆಯಂತೆ ಪರಿಶಿಷ್ಟರಿಗೆ ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ ಎ, ಬಿ, ಮತ್ತು ಸಿ ಎಂದು ವರ್ಗೀಕರಿಸಿ ನೀಡಬೇಕೆಂಬ ಆದೇಶವನ್ನು ಹಿಂಪಡೆಯಬೇಕು. ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಡಿ.ಪ್ರೇಮ್ಕುಮಾರ್ ಆಗ್ರಹಿಸಿದರು.
ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ನಟರಾಜ್ ಮಾತನಾಡಿ ಒಳ ಮೀಸಲಾತಿ ಜಾರಿ ವಿಚಾರ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿಯೇ ಸೇರಿತ್ತು. ಡಾ.ಜಿ.ಪರಮೇಶ್ವರ್ ಪ್ರಣಾಳಿಕೆಯ ಸಮಿತಿಯ ಅಧ್ಯಕ್ಷರಾಗಿದ್ದರು. ಡಾ.ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ಖರ್ಗೆ ಸಹ ಇದ್ದರು. ಆ ಸಂದರ್ಭದಲ್ಲಿಯೇ ಇದನ್ನು ತಡೆದಿದ್ದರೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ. ಒಳ ಮೀಸಲಾತಿ ಜಾರಿಯಾಗಿ 3 ತಿಂಗಳಾಗಿದ್ದು, ಎಲ್ಲ ಇಲಾಖೆಯಲ್ಲಿ ಒಳ ಮೀಸಲಾತಿ ಅನ್ವಯ ಉದ್ಯೋಗ ಭರ್ತಿಯಾಗುತ್ತಿದ್ದರೂ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಕೇಳುವವರು ಇಲ್ಲದಂತಾಗಿರುವುದು ವಿಷಾಧನೀಯವಾದುದು ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಛಲವಾದಿ ಮಹಾಸಭಾ ಮಂಡ್ಯ ಮತ್ತು ಹಾಸನ ಉಸ್ತುವಾರಿ ಮಾಂಬಹಳ್ಳಿ ಜಯರಾಂ, ಛಲವಾದಿ ಮಹಾಸಭಾ ಗೌರವಾಧ್ಯಕ್ಷ ಸೋಮಸುಂದರ್, ಪ್ರಧಾನ ಕಾರ್ಯದರ್ಶಿ ಜೈನ್ನಹಳ್ಳಿ ಹರೀಶ್, ಡಿ.ಎಸ್.ಎಸ್. ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮೀ ಪುರ ರಂಗಸ್ವಾಮಿ, ತಾಲ್ಲೂಕು ಡಿಎಸ್ಎಸ್ ಸಂಚಾಲಕ ನಾಟನಹಳ್ಳಿ ಸೋಮರಾಜು, ಬಲಗೈ ಸಮುದಾಯದ ಮುಖಂಡರಾದ ಚೌಡೇನಹಳ್ಳಿ ದೇವರಾಜು, ನಾಟನಹಳ್ಳಿ ಎನ್.ಜೆ.ಮಂಜು, ಹರಿಹರಪುರ ನರಸಿಂಹ, ಆಲಂಬಾಡಿಕಾವಲು ಚನ್ನಕೃಷ್ಣ, ಚಟ್ಟೇನಹಳ್ಳಿ ರಾಮು, ನಗರೂರು ಮಂಜಯ್ಯ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸ್ ಆರ್.
