ಕೆ.ಆರ್.ಪೇಟೆ,ಮಾ.03: ಗ್ಯಾರಂಟಿಗಳು ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯ 26ನೇ ಕಂತು ಪ್ರತಿ ಅರ್ಹ ಮಹಿಳೆಯರ ಖಾತೆಗೆ ಡಿಬಿಟಿ ಮೂಲಕ ಬಿಡುಗಡೆಯಾಗಿದೆ. ಇದೂವರೆವಿಗೂ ಪ್ರತಿ ಕುಟುಂಬದ ಯಜಮಾನಿ ಮಹಿಳೆಯರಿಗೂ ಒಟ್ಟು ತಲಾ 52ಸಾವಿರ ರೂಗಳನ್ನು ಪಾವತಿ ಮಾಡಲಾಗಿದೆ. ನಮ್ಮ ತಾಲ್ಲೂಕಿನ ಒಟ್ಟು 68,307ಮಂದಿಗೆ ತಲಾ 52ಸಾವಿರ ರೂ ನಂತೆ ಸುಮಾರು 350ಕೋಟಿ ರೂಗಳನ್ನು ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಜಮಾ ಆಗಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಹಣದ ಸಹಾಯವಲ್ಲ. ರಾಜ್ಯದ ಜನತೆಗೆ ಗೌರವದ ಭರವಸೆಯಾಗಿದೆ. ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪಷ್ಟಪಡಿಸಿರುವಂತೆ ಈ ಐದೂ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಕೇವಲ ಗೃಹಲಕ್ಷ್ನೀ ಒಂದೇ ಯೋಜನೆಗೆ ಸುಮಾರು 62,345ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಲಾಗಿದೆ ಒಟ್ಟು 1ಲಕ್ಷದ 200 ಕೋಟಿ ರೂಪಾಯಿಗಳಷ್ಟು ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋನನೆಗಳ ಅನುಷ್ಠಾನ ಸಮಿತಿಯ ಮಾಹಿತಿಯನ್ನು ಉಲ್ಲೇಖಿಸಿ ಸಭೆಯಲ್ಲಿ ತಿಳಿಸಿದರು.
ಇದು ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಿವೆ ಎಂದರು. ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿರುವ ಬಿಜೆಪಿ ಪಕ್ಷವು ಬೇರೆ ಬೇರೆ ರಾಜ್ಯಗಳಲ್ಲಿ ಇದೇ ಮಾದರಿಯ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದೆ. ಹಾಗಾಗಿ ಬಿಜೆಪಿ ಮಿತ್ರ ಪಕ್ಷಗಳಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಅದೆಷ್ಟೋ ಕುಟುಂಬಗಳು ಪ್ರತಿ ತಿಂಗಳು ವಿದ್ಯುತ್ ಪಾವತಿಸಲು ಪರದಾಡುತ್ತಿದ್ದವು. ಈಗ ವಿದ್ಯುತ್ ಬಿಲ್ ಪಾವತಿಸುವ ಪ್ರಮೇಯವಿಲ್ಲದೇ ನೆಮ್ಮದಿಯಿಂದ ಮನೆಯಲ್ಲಿ ವಾಸ ಮಾಡುತ್ತಿವೆ. ತಿಂಗಳಿಗೊಮ್ಮೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ಬೇಳೆ ಸೇರಿದಂತೆ ಅಡುಗೆ ಸಾಮಗ್ರಿ ಒಳಗೊಂಡ ಇಂದಿರಾ ಕಿಟ್ ಅನ್ನು ಮಾರ್ಚ್ ತಿಂಗಳಿನಿಂದ ವಿತರಣೆ ಮಾಡುವುದರಿಂದ ಸಣ್ಣ ಕುಟುಂಬಗಳು ಯಾವುದೇ ಖರ್ಚಿಲ್ಲದೇ ಜೀವನ ನಡೆಸಲು ಸಾಧ್ಯವಾಗಲಿದೆ. ನಿರುದ್ಯೋಗಿಗಳು ಉದ್ಯೋಗ ಸಿಗುವತನಕ ನಿರುದ್ಯೋಗ ಭತ್ಯೆ ಪಡೆದು ಉದ್ಯೋಗ ಹುಡುಕಲು ಸಾಧ್ಯವಾಗಿದೆ. ಶಕ್ತಿ ಯೋಜನೆಯು ಮಹಿಳೆಯರು ರಾಜ್ಯಾದ್ಯಂತ ಪ್ರವಾಸಿ ತಾಣಗಳು, ದೇವಾಲಯಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದುಕೊಳ್ಳಲು ಅವಕಾಶವಾಗಿದೆ. ಇದರಿಂದ ಮಹಿಳೆಯರಿಗೆ ಗಾಂಧೀಜಿ ತಿಳಿಸಿದಂತೆ ಸ್ವಾತಂತ್ರ್ಯ ಸಿಕ್ಕಿದ್ದು ಸದ್ಬಳಕೆಯಾಗುತ್ತಿದೆ ಎಂದು ಎ.ಬಿ.ಕುಮಾರ್ ತಿಳಿಸಿದರು.
ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ ಮಾತನಾಡಿ ರೈತರು ತಮ್ಮ ಅಕ್ರಮ ಕೃಷಿ ಪಂಪ್ ಸೆಟ್ಗಳನ್ನು ರಿಯಾಯಿತಿ ದರದಲ್ಲಿ ಸಕ್ರಮ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಕ್ರಮ ಮಾಡಿಸಿಕೊಂಡರೆ ಅಗತ್ಯ ಸಾಮರ್ಥ್ಯದ ವಿದ್ಯುತ್ ಟೀಸಿಗಳನ್ನು ಅಳವಡಿಸಿಕೊಡಲಾಗುವುದು. ಹಾಗಾಗಿ ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಜೊತೆಗೆ ಬಾಡಿಗೆ ಮನೆಯನ್ನು ಬದಲಾಯಿಸಿದಾಗ ಹೊಸ ಮನೆಯ ಸಿ.ಆರ್.ವಿದ್ಯುತ್ ಬಿಲ್ ನೀಡಿ ಮತ್ತೊಮ್ಮೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಅವಕಾಶ ಇರುತ್ತದೆ ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಓ ರೂಪ, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಸಾರಿಗೆ ಡಿಪೋ ಅಧಿಕಾರಿ ನಾಗರಾಜು ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯ್ತಿ ಸಹಾಯಕ ಲೆಕ್ಕಾಧಿಕಾರಿ ಶಂಕರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ಮೆಣಸ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಬೊಮ್ಮೇನಹಳ್ಳಿ ಲತಾಹರೀಶ್, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
