ಕೆ.ಆರ್.ಪೇಟೆ: ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡರ ಸಮಯದಾಯ ಭವನದ ಮುಂಭಾಗ ನಡೆದ ರಸ್ತೆ ಅಪಘಾತದಲ್ಲಿ ಮದುವೆ ಬಂದಿದ್ದ ವ್ಯಕ್ತಿಯೊಬ್ಬನಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಡಿರುವ ಘಟನೆ ನಡೆದಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಕೊಪ್ಪಲು ಗ್ರಾಮದ ಕುಮಾರ್ (48) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ತಾಲ್ಲೂಕಿನ ಸಾಸಲು ಗ್ರಾಮದ ಅಶ್ವಿನಿ (ಶುಭ) ಮತ್ತು ಸುಹಾಸ್ ಜೆ ಅವರ ವಿವಾಹವು ಚಿಕ್ಕಣ್ಣಗೌಡ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಈ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಸಲು ಕೊಪ್ಪಲು ಗ್ರಾಮದ ಕುಮಾರ್ ಬಂದಿದ್ದರು. ಈ ವೇಳೆ ಸಮುದಾಯ ಭವನಕ್ಕೆ ಹೋಗಲು ರಸ್ತೆಹ ದಾಟುತ್ತಿದ್ದಾಗ ವೇಗವಾಗಿ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಕುಮಾರ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಕುಮಾರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕುಮಾರ್ ಅವರು ಅಪಘಾತದಲ್ಲಿ ಮೃತಪಟ್ಟಿರುವ ವಿಚಾರ ತಿಳಿದು ಆಸ್ಪತ್ರೆಯ ಶವಾಗಾರಕ್ಕೆ ಬೇಟಿ ನೀಡಿದ ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ತಾತ್ಕಾಲಿಕ ಪರಿಹಾರವಾಗಿ 25ಸಾವಿರ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ಜಿಲ್ಲಾ ಸಾರಿಗೆ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿ ಮೃತ ವ್ಯಕ್ತಿಯ ಕುಟುಂಬವು ಬಡತನದ ಜೀವನ ನಡೆಸುತ್ತಿರುವ ಕಾರಣ ತಾತ್ಕಾಲಿಕ ಪರಿಹಾರವನ್ನು 50 ಸಾವಿರ ರೂಪಾಯಿಗಳನ್ನು ಮಾನವೀಯ ನೆಲೆಗಟ್ಡಿನಲ್ಲಿ ನೀಡುವಂತೆ ಮನವಿ ಮಾಡಿದರು.

ಆಗ ಈ ಮನವಿಗೆ ಸಾರಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಿ 50ಸಾವಿರ ತಾತ್ಕಾಲಿಕ ರೂಪಾಯಿಗಳನ್ನು ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಿದರು. ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಮೃತ ಕುಮಾರ್ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದರು.
ನಂತರ ಸ್ವಗ್ರಾಮದಲ್ಲಿ ಮೃತ ಕುಮಾರ್ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಘಟನೆ ಕುರಿತು ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
