ಕೆ.ಆರ್.ಪೇಟೆ,ಫೆ.06: ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ವೀರಶೈವ-ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಎಚ್.ಟಿ.ಮಂಜು ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳ ಪರಿಶ್ರಮವನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವುದರಿಂದ ಅವರು ಉನ್ನತ ಗುರಿಗಳನ್ನು ಸಾಧಿಸಲು ಪ್ರೇರೇಪಿಸಿದಂತಾಗುತ್ತದೆ. ಸತತ ಪರಿಶ್ರಮ, ಗುರಿ ಮತ್ತು ಪೋಷಕರು ಹಾಗೂ ಶಿಕ್ಷಕರ ಬೆಂಬಲದ ಮೂಲಕ ಸಾಧಿಸಿದ ಯಶಸ್ಸನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವುದರಿಂದ ಸಾಧಕರ ಸಂಖ್ಯೆಯನ್ನು ಹೆಚ್ಚಿಸಬಹುದು. ಸಾಧನೆ ಮಾಡಿದವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಮತ್ತಷ್ಟು ಸಾಧನೆ ಮಾಡಲು ಸಹಕರಿಸುವುದು ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಹಾಗೂ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಹಲವು ವರ್ಷಗಳಿಂದ ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸುತ್ತಿರುವುದು ಸಾಧಕ ಹಿರಿಯರಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತಿರುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
111ವರ್ಷಗಳ ಸಾರ್ಥಕ ಬದುಕು ನಡೆಸಿದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮೀಜಿಯವರ ತ್ರಿವಿಧ ದಾಸೋಹ ಸೇವೆ ಶ್ಲಾಘನೀಯವಾದುದು. ಶ್ರೀಗಳು ಜೀವಿಸಿದ್ದ ಅವಧಿಯಲ್ಲಿ ನಾವೂ ಸಹ ಜೀವಿಸಿದ್ದು ನಮ್ಮೆಲ್ಲರ ಪುಣ್ಯವಾಗಿದೆ. ಲಿಂಗೈಕ್ಯ ಸಿದ್ದಗಂಗಾಶ್ರೀಗಳು ಮೈಗೂಡಿಸಿಕೊಂಡಿದ್ದ ಆದರ್ಶ ಗುಣಗಳಲ್ಲಿ ಶೇ.10ರಷ್ಟನ್ನಾದರೂ ನಾವು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಿಸಬಹುದಾಗಿದೆ. ಸಿದ್ದಗಂಗಾ ಶ್ರೀಗಳು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದರು. ಇಂತಹ ಮಹನೀಯರಿಗೆ ಕೆ.ಆರ್.ಪೇಟೆ ಪಟ್ಟಣದ ಪ್ರಮುಖ ವೃತ್ತದಲ್ಲಿ ಡಾ.ಶಿವಕುಮಾರಸ್ವಾಮೀಜಿಯವರ ಪುತ್ತಳಿಯನ್ನು ಸ್ಥಾಪನೆ ಮಾಡಲು ನಾನು ನಿಮ್ಮೊಂದಿಗೆ ಕೈಜೋಡಿಸುತ್ತೇನೆ ಎಂದು ಶಾಸಕ ಹೆಚ್.ಟಿ.ಮಂಜು ಅವರು ಭರವಸೆ ನೀಡಿದರು.
ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ತಾಲ್ಲೂಕು ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್.ಮಹಾದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಸುಜೇಂದ್ರಕುಮಾರ್, ಕಾಪನಹಳ್ಳಿ ಗವೀಮಠ ಶ್ರೀಗಳಾದ ಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧುಘಟ್ಟ ಅರವಿಂದ್, ತಾಲ್ಲೂಕು ವೀರಶೈವ ಮಹಾಸಭಾ ಮಾಜಿ ಅಧ್ಯಕ್ಷರುಗಳಾದ ಬ್ಯಾಂಕ್ ಪರಮೇಶ್, ತೋಟಪ್ಪಶೆಟ್ಟಿ, ಸಾಸಲು ಈರಪ್ಪ, ಕೆ.ಎಸ್.ನಾಗೇಶ್ಬಾಬು, ಶಿಕ್ಷಣ ಸಂಯೋಜಕ ಎಂ.ಎಸ್.ಸುರೇಶ್, ನಿವೃತ್ತ ಪ್ರಾಂಶುಪಾಲ ಡಿ.ಬಿ.ಸತ್ಯ, ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ದಿನೇಶ್, ಪುರಸಭಾ ಮಾಜಿ ಸದಸ್ಯ ಮಿತ್ರ ಗಿರೀಶ್, ಮುಖಂಡರಾದ ಮೋದೂರು ಮಂಜುನಾಥ್, ಎಸ್.ಇ.ಚನ್ನರಾಜು, ಬಿ.ಎಸ್.ಶಿವಸ್ವಾಮಿ, ವಿ.ಜಿ.ಮಲ್ಲಿಕಾರ್ಜುನಸ್ವಾಮಿ, ಎಸ್.ಎಂ.ಶಿವಕುಮಾರ್, ಬಿ.ಎಸ್.ಪ್ರಭುಸ್ವಾಮಿ, ಕೆ.ಬಿ.ಬಂಗಾರು, ಎಂ.ಎಸ್.ಭಾಸ್ಕರ್, ಬಿ.ಎಂ.ದೀಪ, ಎ.ಪಿ.ಅಣ್ಣಾಜಪ್ಪ, ಉಷಾ, ಪಿ.ಎಸ್.ಮಂಜಪ್ಪ, ಬಿ.ಎಸ್.ಮಹಾದೇವಸ್ವಾಮಿ, ಜಿ.ಎಸ್.ಮಹೇಶ್, ಎಂ.ಕೆ.ಲೋಕೇಶ್, ಬಸವಲಿಂಗಪ್ಪ, ವಕೀಲ ಪುರ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
