ಕೆ.ಆರ್.ಪೇಟೆ,ಜ.19: ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಮುಂಜಾನೆ ಬೈಕ್ ಮತ್ತು ಗೂಡ್ಸ್ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರಿಗೆ ತಲೆಯ ಭಾಗಕ್ಕೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕಾಪನಹಳ್ಳಿ ಗ್ರಾಮದ ಯೋಗೇಶ್ ಅವರ ಮಗ ವೈ.ನಂದನ್ (19) ಮೃತ ಯುವಕ. ಘಟನೆ ವಿವರ: ಮೃತ ವೈ.ನಂದನ್ ಸೋಮವಾರ ಮುಂಜಾನೆ ಸುಮಾರು 5.15ಗಂಟೆ ಸಮಯದಲ್ಲಿ ಮೈಸೂರಿಗೆ ಕಾಲೇಜಿಗೆ ಹೋಗುತ್ತಿದ್ದ ತನ್ನ ಸಹೋದರಿ ವೈ.ಅನು ಅವರನ್ನು ಕೆ.ಆರ್.ಪೇಟೆಯ ಬಸ್ ಸ್ಟಾಂಡಿಗೆ ಡ್ರಾಪ್ ಮಾಡಿ ವಾಪಸ್ ಊರಿಗೆ ಹೋಗುತ್ತಿದ್ದ ವೇಳೆ ಪ್ರವಾಸಿ ಮಂದಿರ ವೃತ್ತದಲ್ಲಿ ಚನ್ನರಾಯಪಟ್ಟಣ ಕಡೆಯಿಂದ ವೇಗವಾಗಿ ಬರುತ್ತಿದ್ದ ಗೂಡ್ಸ್ ವಾಹನವು ನಂದನ್ ಹೋಗುತ್ತಿದ್ದ ಬೈಕಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ನಂದನ್ ಡಾಂಬರು ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರಗಳಾಗಿ ಅಪಾರ ರಕ್ತಸ್ರಾವ ಉಂಟಾದ ಕಾರಣ ನಂದನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಗೂಡ್ಸ್ ವಾಹನದ ಚಾಲಕ ಅಪಘಾತ ನಡೆದ ಬಳಿಕ ಅನತಿ ದೂರದಲ್ಲಿ ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸುಮಾರಾಣಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವೈ.ನಂದನ್ ತಂದೆ ಯೋಗೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೆಲ್ಮೆಟ್ ಹಾಕಿದ್ದರೆ ಸಾಯುತ್ತಿರಲಿಲ್ಲ: ಇತ್ತೀಚಿಗೆ ತಾಲ್ಲೂಕಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿ ಸಾವುಗಳು ಸಂಭವಿಸಿವೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿರುವುದರಿಂದ ಹೆಚ್ಚಾಗಿ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವದಿಂದ ಸಾವು ನೋವುಗಳು ಹೆಚ್ಚಾಗುತ್ತಿವೆ. ಅಲ್ಲದೇ ದೊಡ್ಡ ವಾಹನಗಳು ಪಟ್ಟಣದಲ್ಲಿ ಅತೀ ವೇಗವಾಗಿ ಚಲಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.ಇದಕ್ಕೆ ಸಂಬಂಧಿಸಿದ ಪೋಲೀಸ್ ಇಲಾಖೆಗಳ ಅಧಿಕಾರಿಗಳು ಅತಿ ವೇಗವಾಗಿ ಚಲಿಸುವ ವಾಹನಗಳಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಂದು ನಡೆದ ಅಪಘಾತದಲ್ಲಿ ವೈ.ನಂದನ್ ಕೆಳಕ್ಕೆ ಬಿದ್ದ ತಕ್ಷಣ ತಲೆಯು ಡಾಂಬರು ರಸ್ತೆ ಬಡಿದ ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಸಾವು ಸಂಭವಿಸಿದೆ. ಒಂದು ವೇಳೆ ನಂದನ್ ಹೆಲ್ಮೆಟ್ ಧರಿಸಿದ್ದರೆ ಸಣ್ಣಪುಟ್ಟ ಗಾಯಗಳಾಗುತ್ತಿದ್ದವು. ಸಾವು ಸಂಭವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೊಲೀಸರು ಇನ್ನಾದರೂ ಪ್ರತಿಯೊಬ್ಬರ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ದರಿಸುವ ಮೂಲಕ ತಮ್ಮ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಆರ್.
