ಕೆ.ಆರ್.ಪೇಟೆ,ಜ.16: ಜಾನುವಾರುಗಳ ರಕ್ಷಕ ದೇವರಾದ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥಸ್ವಾಮಿ ಯವರ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮದಿಂದ ಇಂದು ನಡೆಯಿತು.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ, ಶಾಸಕ ಹೆಚ್.ಟಿ.ಮಂಜು, ಅಪರ ಜಿಲ್ಲಾಧಿಕಾರಿ ಶಿವನಂದಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ಡಾ.ಕೆ.ಶ್ರೀನಿವಾಸ್, ತಹಸೀಲ್ದಾರ್ ಎಸ್.ಯು.ಅಶೋಕ್ ಹಾಗೂ ಇತರೆ ಗಣ್ಯರು ಅವರು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾಗಿರುವ ಕಲ್ಯಾಣಿಯನ್ನು ಗಣ್ಯರು ಉದ್ಘಾಟಿಸಿದರು.

ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಜಾನುವಾರುಗಳ ರಕ್ಷಕ ಶ್ರೀ ರಂಗನಾಥಸ್ವಾಮಿಗೆ ಉಘೇ.. ಉಘೇ…ಶ್ರೀ ಗವಿರಂಗಪ್ಪನಿಗೆ ಉಘೇ.. ಉಘೇ.. ಎಂದು ರಥವನ್ನು ಎಳೆದು, ರಥಕ್ಕೆ ಹಣ್ಣು-ಜವನ ಅರ್ಪಿಸಿ ರಥವನ್ನು ತಮ್ಮ ಭಕ್ತಿ-ಭಾವ ಸಮರ್ಪಿಸಿದರು.

ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಅವರು ಜಾತ್ರೆ-ರಥೋತ್ಸವಗಳು ಹಾಗೂ ಹಬ್ಬ-ಹರಿದಿನಗಳು ನಮ್ಮ ಸಂಸ್ಕೃತಿ-ಪರಂಪರೆಯ ಪ್ರತೀಕವಾಗಿವೆ. ನಮ್ಮ ಹಿರಿಯರು ಗ್ರಾಮ ದೇವತೆ ಹಬ್ಬಗಳನ್ನು ಹಾಗೂ ರಥೋತ್ಸವ, ಜಾತ್ರೆಗಳನ್ನು ಪ್ರತಿ ವರ್ಷವೂ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಇದನ್ನು ನಾವು ಸಹ ಉಳಿಸಿ ಬೆಳಸಿಕೊಂಡ ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾನು ಶ್ರೀ ಕ್ಷೇತ್ರದ ಮಹಿಮೆಯ ಬಗ್ಗೆ ಕೇಳಿದ್ದೆನು. ಆದರೆ ಕ್ಷೇತ್ರಕ್ಕೆ ಬೇಟಿ ನೀಡಲು ಆಗಿರಲಿಲ್ಲ. ಈ ಭಾರಿ ಗವಿರಂಗನಾಥಸ್ವಾಮಿಯ ರಥೋತ್ಸವದಲ್ಲಿ ಭಾಗವಹಿಸಿದ್ದು ನನ್ನ ಪುಣ್ಯವಾಗಿದೆ. ಈ ಹಿಂದೆ ನಮ್ಮ ತಂದೆಯ ಕಾಲದಲ್ಲಿ ಮನೆಯಲ್ಲಿ ರಾಸುಗಳಿಗೆ ಯಾವುದೇ ಕಾಯಿಲೆಗಳು ಬಂದರೆ ಗವಿರಂಗಪ್ಪ ಸ್ವಾಮಿ ಕ್ಷೇತ್ರಕ್ಕೆ ಬರುತ್ತೇವೆ ಪೂಜೆ ಸಲ್ಲಿಸುತ್ತೇವೆ ಎಂದು ಹರಕೆ ಕಟ್ಟುತ್ತಿದ್ದರು. ಆಗ ಜಾನುವಾರುಗಳ ಕಾಯಿಲೆ ವಾಸಿಯಾಗುತ್ತಿತ್ತು. ನಂತರ ಕ್ಷೇತ್ರಕ್ಕೆ ಬಂದು ಹರಕೆ ತೀರಿಸಿದ ಬಗ್ಗೆ ನನ್ನ ತಂದೆ-ತಾಯಿಯವರು ಹೇಳುತ್ತಿದ್ದರು. ಇಂತಹ ಅಪರೂಪದ ಕ್ಷೇತ್ರಕ್ಕೆ ನನ್ನನ್ನು ಆಹ್ವಾನಿಸಿದ ಈ ಭಾಗದ ಮುಖಂಡರಿಗೆ ಶಾಸಕರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು.

ಕ್ಷೇತ್ರಕ್ಕೆ ಬೇಟಿ ನೀಡುವ ಭಕ್ತಾಧಿಗಳ ಅನುಕೂಲಕ್ಕಾಗಿ ಯಾತ್ರಿನಿವಾಸ್ ನಿರ್ಮಿಸಲು, ನೂತನವಾಗಿ ನಿರ್ಮಿಸಿರುವ ಕಲ್ಯಾಣಿಯ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಲು ಸೂಕ್ತ ಅನುಧಾನ ಕೊಡಿಸುವೆ. ಗವಿರಂಗನಾಥಸ್ವಾಮಿ ದೇವಾಲಯದ ಭೂಮಿಯಲ್ಲಿ ಅರಣ್ಯ ಎಂದು ನಮೂದಾಗಿದ್ದು ಕೂಡಲೇ ದೇವಾಲಯಕ್ಕೆ ಸೇರಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಹೆಚ್.ಟಿ.ಮಂಜು ಮಾತನಾಡಿ ಶ್ರೀ ಗವಿರಂಗನಾಥ ಕ್ಷೇತ್ರದ ಅಭಿವೃದ್ಧಿ ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು. ಗವಿರಂಗಪ್ಪ ಸ್ವಾಮಿಯನ್ನು ಜಾನುವಾರುಗಳಿಗೆ ರಕ್ಷಣೆ ನೀಡು ದೇವರೆಂದೇ ಐದಾರು ಜಿಲ್ಲೆಗಳ ಸಾವಿರಾರು ಭಕ್ತಾಧಿಗಳು ಪೂಜೆಸುತ್ತಾ ಬರುತ್ತಿದ್ದಾರೆ. ಗವಿರಂಗಪ್ಪ ದೇವರಿಗೆ ಕರು ಹಾಕಿದ ಹಸು, ಎಮ್ಮೆಗಳ ಮೊದಲ ದಿನದ ಹಾಲು ಮತ್ತು ಗಿಣ್ಣನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ. ಇಂತಹ ಶಕ್ತಿ ದೇವರಾಗಿರುವ ಶ್ರೀ ಗವಿರಂಗನಾಥಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ಧಿಗೆ ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಸೂಕ್ತ ಅನುಧಾನ ಹಾಗೂ ಮುಜರಾಯಿ ಇಲಾಖೆಯ ಅನುಧಾನದಿಂದ ಸೂಕ್ತ ಅನುಧಾನ ನೀಡುವ ಮೂಲಕ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವುದಾಗಿ ಹೆಚ್.ಟಿ.ಮಂಜು ತಿಳಿಸಿದರು.

ರಥೋತ್ಸವದಲ್ಲಿ ಶಾಸಕ ಹೆಚ್.ಟಿ.ಮಂಜು, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಆರ್.ಕುಮಾರ್, ಗೊರವಿ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್, ನಾಗರಘಟ್ಟ ದಿಲೀಪ್ಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಎಲ್.ದೇವರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್, ಮನ್ಮುಲ್ ನಿರ್ದೇಶಕ ಎಂ.ಬಿ.ಹರೀಶ್, ಜೆಡಿಎಸ್ ಮುಖಂಡ ಸಂತೇಬಾಚಹಳ್ಳಿ ಕುಮಾರ್, ಪುರಸಭಾ ಸದಸ್ಯ ರವೀಂದ್ರಬಾಬು, ಡಿ.ಪ್ರೇಮಕುಮಾರ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಮಾಳಗೂರು ಜಗದೀಶ್, ಗೊರವಿ ಕುಮಾರ್, ಜಿಲ್ಲಾ ಗ್ಯಾರಂಟಿ ಸಮಿತಿಯ ನಿರ್ದೇಶಕಿ ಆದಿಹಳ್ಳಿ ಮೀನಾಕ್ಷಿ, ತಾಲ್ಲೂಕು ಕೆಡಿಪಿ ಸದಸ್ಯ ಆಕಾಶ್, ಇಲ್ಯಾಸ್ ಅಹಮದ್, ಸಣ್ಣ ನೀರಾವರಿ ಇಲಾಖೆಯ ಎಇಇ ನಿರ್ಮಲೇಶ್, ಸಂತೇಬಾಚಹಳ್ಳಿ ನಾಡಕಚೇರಿ ಉಪತಹಸೀಲ್ದಾರ್ ಗೌರಮ್ಮ, ರಾಜಸ್ವ ನಿರೀಕ್ಷಕ ಹರೀಶ್, ಜ್ಞಾನೇಶ್, ಚಂದ್ರಕಲಾಪ್ರಕಾಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ನೂರಾರು ಗಣ್ಯರು ಹಾಗೂ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.
-ಶ್ರೀನಿವಾಸ್ ಆರ್.
