ಕೆ.ಆರ್.ಪೇಟೆ (ಏ.06) : ಆಸ್ತಿಯ ವಿಚಾರಕ್ಕೆ ಎರಡು ದಾಯಾದಿಗಳ ನಡುವೆ ಗುಂಪು ಘರ್ಷಣೆ ನಡೆದಿದ್ದು ಒಂದು ಗುಂಪು ಮತ್ತೊಂದು ಗುಂಪಿನವರಿಗೆ ಮಾರಕಾಸ್ತ್ರ ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ಮೂವರು ಗಂಭೀರವಾಗಿ ಗಾಯಗೊಂಡು ಮೈಸೂರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವವ ಘಟನೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಟನಹಳ್ಳಿ ಗ್ರಾಮದ ಸೋಮೇಗೌಡ, ವಸಂತ್, ನಿಶಾಂತ್ ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಮೈಸೂರಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ನಾಟನಹಳ್ಳಿ ಗ್ರಾಮದ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್, ಸೋಮೇಶ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಪಿತ್ರಾರ್ಜಿತ ಜಮೀನಿಗೆ ಹೋಗಲು ರಸ್ತೆ ಬಿಡುವ ವಿಚಾರವಾಗಿ ಈ ಎರಡು ಗುಂಪುಗಳ ನಡುವೆ ಪರಸ್ಪರ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್, ಸೋಮೇಶ್ ಎಂಬುವವರ ಗುಂಪು ಸೋಮೇಗೌಡ, ವಸಂತ್, ನಿಶಾಂತ್ ಎಂಬುವವರ ಮೇಲೆ ಮಚ್ಚು, ದೊಣ್ಣೆ, ರಾಡುಗಳಿಂದ ಹಲ್ಲೆ ನಡೆಸಿದ್ದಾರೆ ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಸೋಮೇಗೌಡ, ವಸಂತ್, ನಿಶಾಂತ್ ಅವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವ ಉಂಟಾಗಿ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿರುವ ಕಾರಣ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಘಟನೆ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ನಾಟನಹಳ್ಳಿ ಗ್ರಾಮದ ಉಗ್ರೇಗೌಡ, ವೇಣು, ನೂತನ್, ಪ್ರಕಾಶ್, ಸೋಮೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ವರದಿ : ಶ್ರೀನಿವಾಸ್ ಆರ್
===================
