ಕೆ.ಆರ್.ಪೇಟೆ,ಮಾ.23: ಮಲೆನಾಡಿನ ಗಿಡ್ಡ ಹಸುಗಳನ್ನು ಸಾಕಿ, ಅವುಗಳು ನೀಡುವ ಔಷಧೀಯ ಗುಣವುಳ್ಳ ಹಾಲು ಸೇವನೆಯಿಂದ ಹೆಚ್ಚು ಆಯಸ್ಸು, ಆರೋಗ್ಯ ಪಡೆದುಕೊಳ್ಳಬಹುದು ಈ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಅವರು ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಚಿಲ್ಲದಹಳ್ಳಿ ಗ್ರಾಮದಲ್ಲಿ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನದ ಅಡಿಯಲ್ಲಿ ನಾಡಿನ ವಿವಿಧ ಮಠಾಧೀಶರ ಮಾರ್ಗದರ್ಶನದಲ್ಲಿ ಮಲೆನಾಡು ಗಿಡ್ಡ ಗೋವಿನ ತಳಿ ಉಳಿಸುವ ಸಲುವಾಗಿ ರೈತರಿಗೆ ಉಚಿತವಾಗಿ ಐವರು ರೈತರಿಗೆ ಗಿಡ್ಡ ಹಸುಗಳನ್ನು ವಿತರಣೆ ಮಾಡಿ ಮಾತನಾಡಿದರು. ಮಲೆನಾಡ ಗಿಡ್ಡ ಹಸುಗಳು ಗಾತ್ರದಲ್ಲಿ ಚಿಕ್ಕದಾಗಿದ್ದರು ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ತಳಿಗಳು ಕಡಿಮೆ ಆಹಾರವನ್ನು ತಿಂದು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಹಾಲನ್ನು ನೀಡುತ್ತವೆ. ಗುಡ್ಡಗಾಡು ಪ್ರದೇಶದಲ್ಲಿ ಎಲೆ, ಹುಲ್ಲು, ಚಿಗುರುಗಳನ್ನು ತಿಂದು ಮನುಷ್ಯನಿಗೆ ಉತ್ತಮ ಒಡನಾಡಿಯಾಗಿವೆ. ಈ ಹಸುಗಳು ಓಡಾಡುವ ಜಾಗದಲ್ಲಿ ಗಿಡಮರ ಬಳ್ಳಿಗಳು ಔಷಧೀಯ ಗುಣಗಳನ್ನು ಹೊಂದಿವೆ. ಇಂತಹ ಎಲೆ, ಗಿಡಮರ ಬಳ್ಳಿಗಳನ್ನು ತಿನ್ನುವ ಮಲೆನಾಡ ಗಿಡ್ಡ ತಳಿಗಳು ಸಹ ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ಆಯುರ್ವೇಧ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

ಗಿಡ್ಡ ತಳಿಗಳ ಹಾಲು, ಗೋಮೂತ್ರ, ಸಗಣಿ ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಹಾಗಾಗಿ ಮಲೆನಾಡು ಗಿಡ್ಡ ಗೋವಿನಸಂತತಿಯನ್ನು ಉಳಿಸಿ ಸಂರಕ್ಷಣೆ ಮಾಡಲು ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಟ್ರಸ್ಟ್ ವತಿಯಿಂದ ಟ್ರಸ್ಟಿನ ಅಕ್ಷಯ್ ಆಳ್ವಾ ಅವರ ಮಾರ್ಗದರ್ಶನದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಮಂಡ್ಯ ಜಿಲ್ಲೆ ಸೇರಿದಂತೆ ನಾಡಿನ ವಿವಿಧ ಜಿಲ್ಲೆಗಳಲ್ಲಿ ಮಲೆನಾಡು ಗಿಡ್ಡ ಗೋತಳಿ ಸಂರಕ್ಷಣಾ ಮತ್ತು ಸಂವರ್ಧನ ಟ್ರಸ್ಟ್ ಮೂಲಕ ಗೋವನ್ನು ಸಾಕುವಂತಹ ಆಸಕ್ತ ರೈತರಿಗೆ ಉಚಿತವಾಗಿ ಒಂದು ಜೊತೆ ಮಲೆನಾಡ ಗಿಡ್ಡ ಗೋವುಗಳನ್ನು ವಿತರಣೆ ಮಾಡಲಾಗುತ್ತಿದೆ ಹಾಗಾಗಿ ಆಸಕ್ತ ರೈತರು ಇದರ ಸದುಪಯೋಗ ಪಡೆದುಕೊಂಡು ಸಾಕುವ ಮೂಲಕ ತಮ್ಮ ಮಕ್ಕಳಿಗೆ ಮಲೆನಾಡ ಗಿಡ್ಡ ಗೋವಿನ ಹಾಲು ನೀಡುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ತಾವೂ ಸಹ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕೆಂಗೇರಿ ಶ್ರೀಗಳು ರೈತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನ ಅಭಿಯಾನದ ಟ್ರಸ್ಟಿ ಅಕ್ಷಯ್ ಆಳ್ವಾ, ಉದಯ್, ಪುಟ್ಟಸ್ವಾಮಿಗೌಡ, ಪ್ರಗತಿ ಸೇವಾ ಟ್ರಸ್ಟಿನ ಅಧ್ಯಕ್ಷ ಡಾ.ನಾಗೇಶ್ ರಾಗಿಮುದ್ದನಹಳ್ಳಿ, ಚಿಲ್ಲದಹಳ್ಳಿ ಗ್ರಾಮದ ಮುಖಂಡರಾದ ಪಟೇಲ್ ನಾಗೇಗೌಡ, ಮಾಜಿ ಗ್ರಾ.ಪಂ.ಸದಸ್ಯರಾದ ಹರೀನಹಳ್ಳಿ ರಘು, ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಸಾವಯುವ ಕೃಷಿಕರಾದ ಸಿ.ಎನ್.ಸತೀಶ್, ನಿಂಗರಾಜೇಗೌಡ, ನರಸಿಂಹೇಗೌಡ, ಧರ್ಮೇಗೌಡ, ಮಂಜೇಗೌಡ, ಮಹೇಶ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.ಕೆಂಗೇರಿ ಶ್ರೀಗಳು ಮತ್ತು ಚಿಲ್ಲದಹಳ್ಳಿ ಗ್ರಾಮಸ್ಥರು ಗೋವುಗಳಿಗೆ ಪೂಜೆ ಸಲ್ಲಿಸಿ ಗ್ರಾಮಕ್ಕೆ ಬರಮಾಡಿಕೊಂಡರು.
ವರದಿ : ಶ್ರೀನಿವಾಸ್ ಆರ್
==============
