ಕೆ.ಆರ್.ಪೇಟೆ: ಛತ್ರಪತಿ ಶಿವಾಜಿ ಮಹಾರಾಜ್ ಅವರು ಎದುರಾಳಿಯ ಕುಂತ್ರವನ್ನು ಅರಿತು ಅದಕ್ಕೆ ಗೆರಿಲ್ಲಾ ಯುದ್ದತಂತ್ರದೊಂದಿಗೆ ಪ್ರತಿ ತಂತ್ರವನ್ನು ರಚಿಸಿ ತಮ್ಮ 16ನೇ ವಯಸ್ಸಿನಲ್ಲಿಯೇ ತೋರ್ನಾ ಕೋಟೆಯನ್ನು ವಶಪಡಿಸಿಕೊಂಡು ಹಿಂದೂಸ್ತಾನ್ ಮರಾಠ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದ ಛತ್ರಪತಿ ಶಿವಾಜಿ ಮಹಾರಾಜ್ ಚಿಕ್ಕವಯಸ್ಸಿನಲ್ಲಿಯೇ ದೊಡ್ಡಸಾಧನೆ ಮಾಡಿದ್ದರು ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಎಂ.ಶಿವಪ್ಪ ತಿಳಿಸಿದರು.
ಅವರು ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿವಾಜಿ ಮಹಾರಾಜ್ ಅವರು 19 ಫೆಬ್ರವರಿ 1630 ರಂದು ಮಹಾರಾಷ್ಟ್ರದ ಶಿವನೇರಿ ಕೋಟೆಯಲ್ಲಿ ಜನಿಸಿದರು. ಅವರ ತಂದೆ ಶಹಾಜಿ ಭೋಸ್ಲೆ ಮತ್ತು ತಾಯಿ ಜೀಜಾಬಾಯಿ. ಶಿವಾಜಿ ಮಹಾರಾಜ್ ಅವರು ತಮ್ಮ 16 ನೇ ವಯಸ್ಸಿನಲ್ಲಿಯೇ ಮರಾಠ ಸಾಮ್ರಾಜ್ಯದ ಆಡಳಿತವನ್ನು ಪ್ರಾರಂಭಿಸಿದರು.
ಶಿವಾಜಿ ಮಹಾರಾಜ್ ಅವರ ಆಡಳಿತದ ವೈಖರಿ ಬಹಳ ಪ್ರಭಾವಶಾಲಿಯಾಗಿತ್ತು. ಅವರು ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಿದರು, ಇದರಲ್ಲಿ ರಾಜ್ಯವನ್ನು ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು ಮತ್ತು ಪ್ರತಿ ಪ್ರಾಂತ್ಯವನ್ನು ಒಬ್ಬ ಗವರ್ನರ್ ಆಳುತ್ತಿದ್ದರು. ಅವರು ರೈತರಿಗೆ ಅನುಕೂಲಕರವಾದ ಕಂದಾಯ ನೀತಿಯನ್ನು ಜಾರಿಗೆ ತಂದರು ಮತ್ತು ವ್ಯಾಪಾರವನ್ನು ಪ್ರೋತ್ಸಾಹಿಸಿದರು. ಶಿವಾಜಿ ಮಹಾರಾಜ್ ಅವರು ಎಲ್ಲರಿಗೂ ನ್ಯಾಯಯುತ ಮತ್ತು ಸಾಮಾಜಿಕ ನ್ಯಾಯದ ಆಡಳಿತವನ್ನು ನೀಡಿದರು, ಇದು ಅವರ ಪ್ರಜೆಗಳಿಗೆ ಹೆಚ್ಚು ಯೋಜನಕಾರಿಯಾಗಿತ್ತು.
ಸಣ್ಣ ಸೈನ್ಯದೊಂದಿಗೆ ದೊಡ್ಡ ಶತ್ರು ಪಡೆಯನ್ನು ಸೋಲಿಸಲು ಪಶ್ಚಿಮ ಘಟ್ಟಗಳ ಬೌಗೋಳಿಕತೆಯನ್ನು ಬಳಸಿಕೊಂಡು ಗೆರಿಲ್ಲಾ ಯುದ್ಧಕಲೆಯಲ್ಲಿ ಪರಿಣತಿ ಹೊಂದಿದ್ದರು. ತಮ್ಮ ಆಡಳಿತದ ಅವಧಿಯಲ್ಲಿ 50 ಸಾವಿರ ಸಂಖ್ಯೆ ಬಲಿಷ್ಠ ಸೈನ್ಯವನ್ನು ಹೊಂದಿದ್ದರು, ಪ್ರಥಮ ಭಾರಿಗೆ ತೋರಣ ಕೋಟೆಯನ್ನು ವಶಪಡಿಸಿಕೊಂಡು ಕ್ರಮೇಣ ಸಿಂಹಗಡಿ, ಪ್ರತಾಪಗಡಿ, ರಾಯಗಡ ಕೋಟೆಯನ್ನು ಗೆದ್ದುಕೊಂಡರು. ಆದಿಲ್ಶಾಹಿ ಮತ್ತು ಮೊಗಲ್ ದೊರೆಗಳಿಗೆ ಸಿಂಹಸ್ವಪ್ನವಾಗಿ ಕಾಡತೊಡಗಿದರೂ. ನೇರವಾಗಿ ಶಿವಾಜಿಯವರನ್ನು ಗೆಲ್ಲಲಾಗದ ವಿರೋಧಿಗಳು ಅನ್ಯಮಾರ್ಗದಿಂದ ಹತ್ಯೆಮಾಡಲು ಯೋಜನೆ ರೂಪಿಸದಾಗಿಲೂ ಅದನ್ನು ಅರಿತು ಶತ್ರುವನ್ನು ನಯವಾಗಿಯೆ ಮಣಿಸಿದ್ದ ಶಿವಾಜಿಯವರು ಚಿಕ್ಕವಸ್ಸಿನಲ್ಲಿಯೇ ದೊಡ್ಡ ಸಾಧನೆಮಾಡಿ ನಮ್ಮೆಲ್ಲರ ಆದರ್ಶ ನಾಯಕಾರಿದ್ದಾರೆ ಎಂದು ಶಿವಪ್ಪ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಶೀಲ್ದಾರ್ ಲೋಕೇಶ್ ಮಾತನಾಡಿ ಶೌರ್ಯ, ಸಾಹಸ ಮತ್ತು ತಂತ್ರಗಾರಿಕೆಗೆ ಹೆಸರಾಗಿದ್ದ ಶಿವಾಜಿಮಹಾರಾಜರು ಸ್ವಾಭಿಮಾನ ಸ್ವರಾಜ್ಯ ನಿರ್ಮಾಣದ ಆಶಯದೊಂದಿಗೆ ಆಡಳಿತಕ್ಕೆ ಬರುತ್ತಾರೆ. ಅವರ ಜೀವನ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ.ಎಸ್.ಹಾವಣ್ಣನವರ್, ಶಿಕ್ಷಣ ಸಂಯೋಜಕ ವೀರಭದ್ರಯ್ಯ,
ಮುಖಂಡರಾದ ಹೊಸಹೊಳಲು ಸಿ.ನಾಗೇಶ್, ಮ್ಯಾಕಾನಿಕ್ ಕಿರಣ್, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ.ಮಂಜುನಾಥ್, ಬಿಸಿಎಂ ಇಲಾಖೆಯ ಮಧು ಮತ್ತಿತರರು ಭಾಗವಹಿಸಿದ್ದರು.
ವರದಿ : ಶ್ರೀನಿವಾಸ್ ಆರ್
