ಕೆ.ಆರ್.ಪೇಟೆ,ಫೆ.10: ಅಕ್ಕಾ ಬನ್ನಿ.. ಅಣ್ಣಾ ಬನ್ನಿ.. ಬನ್ನೀ ಸಾರ್ ಬನ್ನಿ.. ತಾಜಾ ತರಕಾರಿ… ತಾಜಾ ಸೊಪ್ಪು… ತಾಜಾ ಹಣ್ಣು.. ಇವೆ.. ನಮ್ಮಲ್ಲಿ ತಗೊಳ್ಳಿ ಕಡಿಮೆ ಬೆಲೆ.. ಇದೆ.. ಬನ್ನಿ ಬೇಗ ಬನ್ನಿ.. ಎಂದು ಕೂಗುತ್ತಾ ತಾವು ಮನೆಯಿಂದ ತಂದಿರುವ ತರಕಾರಿ, ಸೊಪ್ಪು ಸೇರಿದಂತೆ ಬಗೆ ಬಗೆಯ ವಸ್ತುಗಳನ್ನು ಹಾಗೂ ತಿಂಡಿ-ತಿನಿಸುಗಳನ್ನು ಪ್ರದರ್ಶನ ಮಾಡಿ ಗ್ರಾಹಕರನ್ನು ಆಕರ್ಷಿಸಿ ಮಾರಾಟ ಮಾಡುವ ಮೂಲಕ ವ್ಯಾಪಾರ ಮಾಡುವ ಮೂಲಕ ಲಾಭ ಗಳಿಸಿದರು. ಈ ಮೂಲಕ ಲಾಭ-ನಷ್ಟದ ಲೆಕ್ಕಾಚಾರ ಮತ್ತು ಗ್ರಾಹಕರನ್ನು ಸೆಳೆಯುವ ಕಲೆಯನ್ನು ಕಲಿತು ಕೊಂಡರು.
ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಕಂಡು ಬಂದ ನೋಟವಿದು.
ತಾಜಾ ತರಕಾರಿ ಇದೆ ಬನ್ನಿ, ಟೊಮೋಟೋ ಇದೆ, ಮೂಲಂಗಿ ಇದೆ. ಕ್ಯಾರೆಟ್-ಬಿಟ್ರೂಟ್, ಅವರೇಕಾಯಿ, ಕೊತ್ತಂಬರಿ ಸೊಪ್ಪು, ದಂಟಿನಸೊಪ್ಪು, ಬಿನೀಸ್, ಬದನೇಕಾಯಿ, ಈರುಳ್ಳಿ, ಬೆಳ್ಳುಳ್ಳಿ ಇದೆ ಬನ್ನಿ, ತಗೊಳ್ಳಿ ತುಂಬಾ ಕಡಿಮೆ ಬೆಲೆ ಎಂದು ಕೂಗುತ್ತಾ ಪೈಪೋಟಿಯ ಮೇಲೆ ಗ್ರಾಹರಕರನ್ನು ಕರೆದು ಕರೆದು ಭರ್ಜರಿ ವ್ಯಾಪಾರ ಮಾಡಿದರು. ಇದರ ಜೊತೆಗೆ ಬೇಲ್ಪುರಿ, ರವೆ ಉಂಡೆ, ಚುರುಮುರಿ, ಬಜ್ಜಿ, ಬೊಂಡಾ, ಡ್ರೈಜಾಮೂನು, ಎಳೆನೀರು ಮಾರಾಟ ಜೋರಾಗಿಯೇ ನಡೆಯಿತು.
ಹಲವು ವಿಧದ ತರಕಾರಿ, ಕುರುಕಲು ತಿಂಡಿ ತಿನಿಸುಗಳ ಭರ್ಜರಿ ವ್ಯಾಪಾರ ನಡೆಯಿತು. ಗ್ರಾಹಕರಾದ ಪೋಷಕರು ಮಕ್ಕಳೊಂದಿಗೆ ಚೌಕಾಸಿ ಮಾಡಿ ಖರೀದಿ ಮಾಡಿ ಒಂದು ತಗೊಂಡ್ರೆ ಎಷ್ಟು 10ತಗೊಂಡ್ರೆ ಒಟ್ಟು ದುಡ್ಡು ಎಷ್ಟು ಆಗುತ್ತೆ ಎಂಬ ಲೆಕ್ಕಾಚಾರವನ್ನು ಸ್ಥಳದಲ್ಲೆ ಲೆಕ್ಕ ಹಾಕುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ವ್ಯಾಪಾರಿಗಳಂತೆಯೇ ಮಕ್ಕಳು ಸಹ ಟೋಮೆಟೋ, ಕ್ಯಾರೆಟ್, ಬದನೇಕಾಯಿ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಹಲವು ತರಕಾರಿಗಳನ್ನು ರಾಶಿ ರಾಶಿ ಹಾಕಿಕೊಂಡು ಪೈಪೋಟಿ ಬಿದ್ದವರಂತೆ ಕೂಗುತ್ತಾ ಗ್ರಾಹಕರನ್ನು ತಮ್ಮ ಕಡೆ ಸೆಳೆದು ಭರ್ಜರಿ ವ್ಯಾಪಾರ ಮಾಡಿದರು.

ಶಾಲೆಯ ಮುಖ್ಯ ಶಿಕ್ಷಕ ಹೆಚ್.ಜಿ.ಅನಂತು ಮಾತನಾಡಿ ವ್ಯಾಪಾರ ವಹಿವಾಟಿನಿಂದ ಮಕ್ಕಳಲ್ಲಿ ನಿತ್ಯ ಜೀವನದ ಅನುಭವವಾಗುತ್ತದೆ. ತಂದೆ, ತಾಯಿ ಅಂಗಡಿಗೆ ಹೋಗಿ ತರಕಾರಿ, ತರಲು ತಿಳಿಸಿದರೆ ಯಾವ ರೀತಿ ವ್ಯಪಾರ ಮಾಡಬೇಕೆಂಬ ಅರಿವು ಸಿಗುತ್ತದೆ. ಮಕ್ಕಳು ಕೇವಲ ಆಟ ಪಠಕ್ಕೆ ಸೀಮಿತವಾಗದೆ ಲೋಕಜ್ಞಾನ, ವ್ಯವಹಾರಿಕ ಜ್ಞಾನ ತಿಳಿದುಕೊಳ್ಳಲು ಮಕ್ಕಳಸಂತೆ ಸಹಕಾರಿಯಾಗುತ್ತದೆ ಹಾಗಾಗಿ ನಮ್ಮ ಶಾಲೆಯಲ್ಲಿ ಹಲವು ವರ್ಷಗಳಿಂದ ಸರ್ಕಾರಿ ನಿಯಮದ ಪ್ರಕಾರ ಮಕ್ಕಳ ಸಂತೆಯನ್ನು ಆಯೋಜಿಸಲಾಗುತ್ತಿದೆ ಎಂದರು.

ದಾನಿಗಳು ಹಾಗೂ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಎಸ್.ಎಲ್.ಮೋಹನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಮಕ್ಕಳಿಗೆ ತಮ್ಮ ಪೋಷಕರ ಕಷ್ಟ ಸುಖಗಳು ತಿಳಿಯಬೇಕು. ಹೊರಗಿನ ಜಗತ್ತಿನಲ್ಲಿ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಮಕ್ಕಳ ಸಂತೆ ಆಯೋಜಿಸುತ್ತಿದೆ. ಪುಟಾಣಿ ಮಕ್ಕಳ ಈ ಸಂತೆಯಲ್ಲಿ ಭಾಗವಹಿಸಿರುವ ಪೋಷಕರೂ ಹಾಗೂ ಶಾಲಾ ಸಿಬ್ಬಂದಿ ಮಕ್ಕಳ ಸಂತೆಯಲ್ಲಿರುವ ಎಲ್ಲಾ ವಸ್ತುಗಳನ್ನು ಖರೀದಿಸುವ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಶಿಕ್ಷಣ ಸಂಯೋಜಕ ಜೆ.ಎಸ್.ಸುರೇಶ್ ಮಾತನಾಡಿ ಮಕ್ಕಳಲ್ಲಿ ವ್ಯಾಪಾರ ಮನೋಭಾವ ಬೆಳೆಸುವುದು. ವಾಣಿಜ್ಯ ದೃಷ್ಠಿಕೋನ, ಹಾಗೂ ವಸ್ತುಗಳನ್ನು ಖರೀದಿಸಬೇಕಾದ ವ್ಯವಹಾರಿಕ ಜ್ಞಾನವನ್ನು ಪ್ರಾಯೋಜಿಕವಾಗಿ ಮಕ್ಕಳಲ್ಲಿ ಕಲಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾ ಮಂಡಲದ ನಿರ್ದೇಶಕ ಎಸ್.ಎಲ್.ಮೋಹನ್, ಶಾಲೆಯ ಮುಖ್ಯ ಶಿಕ್ಷಕ ಹೆಚ್.ಜಿ.ಅನಂತು ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ನಾಗೇಶ್, ಗ್ರಾ.ಪಂ.ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷ ಎಸ್.ಕೆ.ಪ್ರಕಾಶ್, ಶಿಕ್ಷಣ ಸಂಯೋಜಕ ಸುರೇಶ್, ಸಿ.ಆರ್.ಪಿ. ಅಣ್ಣಯ್ಯ, ಮಹೇಶ್, ಶಿಕ್ಷಕರಾದ ರಾಧ.ಸಿ, ಚಂದ್ರಕಲಾ, ವೀಣಾ, ಸುನಿತ, ಶ್ರೀನಿವಾಸ್, ಅನಿತ, ಚಂದನ ಸೇರಿದಂತೆ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳ ಸಂತೆಯನ್ನು ಯಶಸ್ವಿಗೊಳಿಸಿದರು.
– ಶ್ರೀನಿವಾಸ್ ಆರ್.
