ಕೆ.ಆರ್.ಪೇಟೆ,ಅ.18: ಪಟ್ಟಣದ ಕೆರೆ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕಟ್ಟಡವು ಕಳಫೆ ಗುಣಮಟ್ಟದಿಂದ ಕೂಡಿದ್ದು, ಕೂಡಲೇ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪಟ್ಟಣದ ನಾಗರೀಕರು ಕೆ.ಆರ್.ಪೇಟೆ ಕನ್ನಡ ಸಂಘದ ಪದಾಧಿಕಾರಿಗಳು ಕಾಮಗಾರಿ ತಡೆದು ಪ್ರತಿಭಟನೆ ನಡೆಸಿ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಸಂಘದ ಅಧ್ಯಕ್ಷ ಕಿರಣ್ಕುಮಾರ್, ಕಾರ್ಯದರ್ಶಿ ಮೋಹನ್ ಮತ್ತಿತರರ ನೇತೃತ್ವದಲ್ಲಿ ಕಳಫೆ ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ಗುತ್ತಿಗೆ ಪಡೆದಿರುವ ರಾಜೀವ್ ಗಾಂಧೀ ಗುತ್ತಿಗೆ ಸಂಸ್ಥೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು. ಕಾಮಗಾರಿ ಗುಣಮಟ್ಟದಲ್ಲಿ ಮಾಡುವಂತೆ ಕೇಳಿದರೆ ಉಡಾಫೆ ಉತ್ತರ ನೀಡುತ್ತಿರುವ ರಾಜೀವ್ ಗಾಂಧೀ ಗುತ್ತಿಗೆ ಸಂಸ್ಥೆಯ ಮುಖ್ಯ ಇಂಜಿನಿಯರ್ ಅವರನ್ನು ಪೋನ್ ಮೂಲಕ ತರಾಟೆಗೆ ತೆಗೆದುಕೊಂಡ ಕನ್ನಡ ಸಂಘದ ಕಾರ್ಯಕರ್ತರು ಮಾಡುವಂತಿದ್ದರೆ ಗುಣಮಟ್ಟದ ಕಾಮಗಾರಿ ಮಾಡಿ ಇಲ್ಲದಿದ್ದರೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಗುತ್ತಿಗೆ ಕಾಮಗಾರಿಯ ಸಂಬಂಧಪಟ್ಟ ಎಸ್ಟಿಮೇಟ್ ನೀಡುವಂತೆ ಕೇಳಿದರೂ ಸಹ ಕಳೆದ 1ವಾರದಿಂದಲೂ ಬೇಕಿದ್ದರೆ ಬೆಂಗಳೂರು ಮುಖ್ಯ ಕಚೇರಿಗೆ ಹೋಗಿ ಪಡೆದುಕೊಳ್ಳಿ ಎಂದು ಹೇಳುತ್ತಿರುವ ಸ್ಥಳೀಯ ಇಂಜಿನಿಯರ್ ಸಚಿನ್ ಎಂಬುವರ ವಿರುದ್ದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಷ್ಟಿಮೇಟ್ ಪ್ರಕಾರ ಕಟ್ಟಡದ ನಾಲ್ಕೂ ಬದಿಯಲ್ಲಿ 4ಪಿಲ್ಲರ್ ಹಾಕಬೇಕು ಆದರೆ ಯಾವುದೇ ಪಿಲ್ಲರೆ ಹಾಕದೇ ಕೇವಲ ಗೋಡೆಗೆ ಆರ್.ಸಿ.ಸಿ. ಹಾಕುತ್ತಿದ್ದು, ಗೋಡೆಗೆ ಆರ್.ಸಿ.ಸಿ. ಸಾಮರ್ಥ್ಯ ತಡೆಯುವ ಇರುವುದಿಲ್ಲ. ತಳಪಾಯ ಸಹ ಸರಿಯಾಗಿ ಹಾಕಿರುವುದಿಲ್ಲ. ಕ್ಯೂರಿಂಗ್ ಮಾಡದೇ ಕಾಮಗಾರಿಯನ್ನು ಬೇಗ ಮುಗಿಸುವ ತವಕದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆದಾರರು ಕಳಫೆ ಕಾಮಗಾರಿ ಮಾಡಿ ಬೇಗ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾವತಿ ಹಾಗೂ ಮೇಲ್ವಿಚಾರಕಿ ಪದ್ಮಮ್ಮ ಅವರಿಗೆ ದೂರು ಸಲ್ಲಿಸಿ ಕೂಡಲೇ ಗುಣಮಟ್ಟದ ಕಾಮಗಾರಿ ಮಾಡಿಸಬೇಕು ಇಲ್ಲದಿದ್ದರೆ ನಿಮ್ಮ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
-ಶ್ರೀನಿವಾಸ್ ಆರ್.
