ಕೆ.ಆರ್.ಪೇಟೆ,ಸೆ.26: ಸಹಕಾರ ಸಂಘಗಳು ರೈತರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಹಾಗಾಗಿ ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೇ ಅವುಗಳ ಅಭಿವೃದ್ಧಿ ಕೈಜೋಡಿಸಬೇಕು ಎಂದು ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಹೇಳಿದರು.
ಅವರು ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟೀಕೃತ ಬ್ಯಾಂಕುಗಳು ರೈತರಿಗೆ ಸಾಲ ಸೌಲಭ್ಯ ನೀಡಲು ವಿಳಂಭ ಮಾಡುತ್ತಿದ್ದ ಸಂದರ್ಭದಲ್ಲಿ ರೈತರಿಗೆ ತ್ವರಿತವಾಗಿ ಸಾಲ ನೀಡಲು ರೈತರ ಶೇರು ಹಣದಿಂದಲೇ ಹುಟ್ಟಿಕೊಂಡ ಸಂಸ್ಥೆಗಳೇ ಸಹಕಾರ ಸಂಘಗಳಾಗಿವೆ. ಇಂದು ದೇಶದ ಪ್ರತಿಯೊಂದು ಗ್ರಾಮಗಳಲ್ಲಿಯೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಮುಖ ಗ್ರಾಮಗಳಲ್ಲಿ ಆರಂಭಗೊಂಡಿವೆ. ಇದರಿಂದಾಗಿ ರೈತರ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಿದೆ.
ಇದನ್ನು ಓದಿ: ಕೆ.ಆರ್.ಪೇಟೆ: ಟಿಎಪಿಸಿಎಂಎಸ್ ಮತದಾರರಿಂದ ಎಲ್ಲಾ ಕಡೆ ಉತ್ತಮ ಜನಸ್ಪಂದನೆ-ಶಾಸಕ ಹೆಚ್.ಟಿ.ಮಂಜು
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿವೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ರೈತರ ನೆರವಿಗೆ ನಿಂತಿವೆ. ಜೊತೆಗೆ ಪಡಿತರ ವಸ್ತುಗಳನ್ನು ಸಹ ಪಡಿತರ ಚೀಟಿಗಾರರಿಗೆ ನೀಡುವ ಮೂಲಕ ಜನಸಾಮಾನ್ಯರ ಸೇವೆಯನ್ನೂ ಸಹ ಮಾಡುತ್ತಿವೆ ಇಂತಹ ಉತ್ತಮ ಸೇವೆ ನೀಡುತ್ತಿರುವ ಸಹಕಾರ ಸಂಘಗಳನ್ನು ಉಳಿಸಿ ಬೆಳೆಸಲು ರೈತ ಬಾಂದವರು, ಶೇರುದಾರರು ಕೈಜೋಡಿಸಬೇಕು. ನಮ್ಮ ಕಸಬಾ ಸಹಕಾರ ಸಂಘದ ನೂತನ ಕಟ್ಟಡ, ಗೋದಾಮು, ಸಮುದಾಯ ಭವನವನ್ನು ನಿರ್ಮಾಣ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉದ್ಘಾಟನೆ ಮಾಡಿಸಿದ್ದೇವೆ. ಕಟ್ಟಡವನ್ನು ನೋಡಿ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಕೆ.ಪುರುಷೋತ್ತಮ್ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎನ್.ಕಾಂತರಾಜು ಅವರು ಸಂಘದ 2024-25ನೇ ಸಾಲಿನ ಆಡಿಟ್ ವರದಿ ಮಂಡಿಸಿ, 2025-26ನೇ ಸಾಲಿನ ಆಯ-ವ್ಯಯ ಬಜೆಟ್ ಮಂಡಿಸಿ ಮಹಾಸಭೆಯ ಅನುಮೋದನೆ ಪಡೆದರು. ಸಭೆಯಲ್ಲಿ ಹಲವು ಸಹಕಾರ ಧುರೀಣರು ಭಾಗವಹಿಸಿ ಸಂಘದ ಆಡಿಟ್ ವರದಿಯ ಮೇಲೆ ಚರ್ಚೆ ನಡೆಸಿದರು. ಸಂಘದ ಆದಾಯ ಹೆಚ್ಚಳಕ್ಕೆ ಹಲವು ಸುಧಾರಣೆಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಹಿರೀಕಳಲೆ ಗ್ರಾ.ಪಂ.ಅಧ್ಯಕ್ಷ ರಾಮಕೃಷ್ಣ, ಸಂಘದ ಉಪಾಧ್ಯಕ್ಷೆ ಕೋಮಲಮಂಜೇಗೌಡ, ನಿರ್ದೇಶಕರಾದ ಕೆ.ಟಿ.ಚಕ್ರಪಾಣಿ, ಕೆ.ಎಸ್.ಚಂದ್ರು, ಕೆ.ಎನ್.ಬಲರಾಂ, ಕೆ.ಬಿ.ನಂದೀಶ್, ಹೆಚ್.ಜೆ.ಸೋಮಶೇಖರ್, ಗಂಗಾದೇವಿ, ರಾಜಾನಾಯಕ್, ಹಿರೀಕಳಲೆ ಯೋಗೇಶ್, ಕೆ.ಎನ್.ಕಾಳೇಗೌಡ, ಟಿ.ಜೆ.ನಾಗೇಶ್, ಡಿಸಿಸಿ ಬ್ಯಾಂಕ್ ಅಧಿಕಾರಿ ಸಂಘದ ಮೇಲ್ವಿಚಾರಕ ರಾಘವೇಂದ್ರ, ಸಂಘದ ಕಾರ್ಯದರ್ಶಿ ಕಾಂತರಾಜು, ಮಾರಾಟ ಗುಮಾಸ್ತರಾದ ಕೆ.ಜಗದೀಶ್, ಟಿ.ಸಿ.ಹರೀಶ್ ಹಾಗೂ ನೂರಾರು ಶೇರುದಾರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
