ಕೆ.ಆರ್.ಪೇಟೆ,ಮಾ.23: ಪಟ್ಟಣದ ತಾಲ್ಲೂಕು ಪಂಚಾಯತ್ ಕಟ್ಟಡದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಕಳೆದ 25ವರ್ಷಗಳಿಂದ ತಮ್ಮ ತಮ್ಮ ಮಳಿಗೆಗಳಿಗೆ ಮುಂಗಡ ಅಡ್ವಾನ್ಸ್ ಸಹ ನೀಡಿ, ಅಧಿಕಾರಿಗಳು ನಿಗಧಿಪಡಿಸಿರುವ ಬಾಡಿಗೆಯನ್ನು ಸಕಾಲಕ್ಕೆ ಪಾವತಿಸಿಕೊಂಡು ಬಂದಿದ್ದೇವೆ. ಬಾಡಿಗೆಯನ್ನು ಹೆಚ್ಚಿಸಿ ಹಾಲಿ ಇರುವ ನಮ್ಮ ಹೆಸರಿನಲ್ಲಿಯೇ ಮಳಿಗೆಗಳನ್ನು ಮುಂದುವರೆಸುವಂತೆ ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯತ್ ಕಟ್ಟಡದ ಹೊಸಹೊಳಲು ಮತ್ತು ಕಿಕ್ಕೇರಿ ಮಾರ್ಗದ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಸಂಘವು ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿಗಳನ್ನು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರನ್ನು ಒತ್ತಾಯ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯತ್ ಕಟ್ಟಡದ ಹೊಸಹೊಳಲು ಮತ್ತು ಕಿಕ್ಕೇರಿ ಮಾರ್ಗದ ವಾಣಿಜ್ಯ ಮಳಿಗೆಗಳ ಬಾಡಿಗೆದಾರರ ಸಂಘದ ಅಧ್ಯಕ್ಷರಾದ ಬಲ್ಲೇನಹಳ್ಳಿ ರಮೇಶ್, ಸಂಘದ ಕಾನೂನು ಸಲಹೆಗಾರ, ವಕೀಲ ನಯಾಜ್ಪಾಷಾ, ಸಂಘದ ಉಪಾಧ್ಯಕ್ಷ ಮಲ್ಲೇಶ್, ಪದಾಧಿಕಾರಿಗಳಾದ ಸೋಮಶೇಖರ್, ವಾಸು, ನವೀನ್, ಲೋಹಿತಾಶ್ವ, ಸ್ವಾಮೀಗೌಡ, ಸಿದ್ದಿಕ್, ಶಶಿಧರ್, ಲೋಕೇಶ್, ಬಸವೇಗೌಡ, ನಂದೀಶ್, ರಾಜು, ಲೋಹಿತ್ಕುಮಾರ್, ಮಹೇಶ್ ಮತ್ತಿತರರು ನಿರುದ್ಯೋಗಿಗಳಾದ ನಾವುಗಳು ತಾಲ್ಲೂಕು ಪಂಚಾಯತ್ ಆಡಳಿತ ಮಂಡಳಿಯಿಂದ ಕಾನೂನು ಬದ್ದವಾಗಿ ಬಾಡಿಗೆಗೆ ಪಡೆದುಕೊಂಡು ಕಳೆದ 20ವರ್ಷಗಳಿಂದಲೂ ಸದರಿ ಮಳಿಗೆಯಿಂದ ಸ್ವಯಂ ಉದ್ಯೋಗ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈಗ ನಮ್ಮ ಮನವಿಯನ್ನು ಕಡೆಗಣಿಸಿ ಏಕಾಏಕಿ ಆನ್ಲೈನ್ ಮೂಲಕ ಹರಾಜು ಪ್ರಕ್ರಿಯೆ ಮಾಡಲಾಗಿದೆ.
ಒಬ್ಬ ವ್ಯಕ್ತಿ ಒಂದು ವರ್ಷಕ್ಕೂ ಅಷ್ಟು ಕಟ್ಟಲು ಸಾಧ್ಯವಾಗದೇ ಇರುವಷ್ಟು 1ರಿಂದ 2ಲಕ್ಷದ ವರೆವಿಗೂ ಬಾಡಿಗೆಯನ್ನು ಆನ್ಲೈನ್ ಮೂಲಕ ಬಿಡ್ ಕೂಗಿರುತ್ತಾರೆ. ಈ ಬಿಡ್ದಾರರು ಯಾವುದೇ ಕಾರಣಕ್ಕೂ ಅಂಗಡಿಯನ್ನು ಬಾಡಿಗೆಗೆ ಪಡೆದು, ಡೆಪಾಸಿಟ್ ಕಟ್ಟಿ ವ್ಯಾಪಾರ-ವಹಿವಾಟು ಮಾಡುವ ವ್ಯಕ್ತಿಗಳಲ್ಲ. ಕೇವಲ ಹೆಚ್ಚು ಬಾಡಿಗೆಗೆ ಬಿಡ್ ಕೂಗಿ ಹಾಲಿ ಇರುವ ಬಾಡಿಗೆದಾರರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ರೀತಿ ಮಾಡಿರುತ್ತಾರೆ. ಹಾಗಾಗಿ ದಯಮಾಡಿ ಹಾಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ನಮಗೆ ಮಳಿಗೆಗಳನ್ನು ನಿಯಮದ ಪ್ರಕಾರದ ಹೆಚ್ಚಿಸಬಹುದಾದ ಬಾಡಿಗೆ ಮತ್ತು ಡೆಪಾಸಿಟ್ ಹೆಚ್ಚಳ ಮಾಡಿ ಮುಂದುವರೆಯಲು ಅವಕಾಶ ಕಲ್ಪಿಸಿಕೊಡಬೇಕು.
ಇ ಹರಾಜು ಮೂಲಕ ಮಾಡಿರುವ ಹರಾಜು ಪ್ರಕ್ರಿಯೆಯನ್ನು ರದ್ದು ಮಾಡಬೇಕು. ಈ ಸಂಬಂಧ ನಾವುಗಳು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು ಮಾನ್ಯ ನ್ಯಾಯಾಲಯವು ನಮ್ಮನ್ನು ಅಂಗಡಿಯಿಂದ ಖಾಲಿ ಮಾಡಿಸದಂತೆ ತಡೆಯಾಜ್ಞೆ ನೀಡಿದೆ. ಆದ್ದರಿಂದ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಿ ಹಾಲಿ ಇರುವ ಮಳಿಗೆದಾರರನ್ನೇ ಮುಂದುವರೆಸಬೇಕು. ಈ ಮಳಿಗೆ ಹೊರತು ಪಡಿಸಿ ಬೇರೆ ಆಧಾಯದ ಮೂಲಗಳು ನಮಗೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಈ ಮಳಿಗೆಗಳಿಂದ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವ ನಮ್ಮನ್ನು ಬೀದಿಪಾಲು ಮಾಡಬಾರದು ಎಂದು ಸಂಘದ ಅಧ್ಯಕ್ಷ ಬಲ್ಲೇನಹಳ್ಳಿ ರಮೇಶ್ ಮತ್ತು ಪದಾಧಿಕಾರಿಗಳು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವರದಿ : ಶ್ರೀನಿವಾಸ್ ಆರ್
==========================
