ಕೆ.ಆರ್.ಪೇಟೆ,ಮೇ.23: ತಾಲ್ಲೂಕಿನ ಕತ್ತರಘಟ್ಟ ಗ್ರಾಮದಿಂದ ಸವರ್ಣೀಯ ವ್ಯಕ್ತಿಯ ದೌರ್ಜನ್ಯ- ದಬ್ಬಾಳಿಕೆಯಿಂದ ಹತ್ಯೆಯಾದ ದಲಿತ ಯುವಕ ಜಯಕುಮಾರ್ ನಿವಾಸಕ್ಕೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಬೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. 4,12,500/- ರೂಪಾಯಿಗಳ ಪರಿಹಾರದ ಆದೇಶದ ಪ್ರತಿಯನ್ನು ಮೃತ ಜಯಕುಮಾರ್ ಪತ್ನಿ ಲಕ್ಷ್ಮೀ ಅವರಿಗೆ ವಿತರಣೆ ಮಾಡಿದರು.
ಘಟನೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಘಟನೆಯನ್ನು ಸೂಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರು ಯಾರೇ ಆಗಿರಲಿ ತಕ್ಕ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಬಗ್ಗೆ ಯಾರಿಗೂ ಅನುಮಾನಗಳು ಬೇಡ. ಮೃತ ವ್ಯಕ್ತಿಯ ಕುಟುಂಬಕ್ಕೆ ಶವಸಂಸ್ಕಾರದ ದಿನವೇ ಸಮಾಜ ಕಲ್ಯಾಣ ಇಲಾಖೆಯಿಂದ ಮೊನ್ನೆ 4,12,500/- ರೂಪಾಯಿಗಳನ್ನು ವಿತರಣೆ ಮಾಡಲಾಗಿದೆ. ತನಿಖಾ ವರದಿ ಬಂದ ನಂತರ ಉಳಿದ 4,12,500/- ರೂಪಾಯಿಗಳನ್ನು ವಿತರಣೆ ಮಾಡಲಾಗುವುದು. ಘಟನೆಯ ತನಿಖೆ ನಡೆದು ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆಯಾದ ನಂತರ ಮೃತ ವ್ಯಕ್ತಿ ಜಯಕುಮಾರ್ ಪತ್ನಿ ಲಕ್ಷ್ಮೀ ಅವರಿಗೆ ಮಾಸಿಕ 5ಸಾವಿರ ರೂಪಾಯಿಗಳನ್ನು ಸರ್ಕಾರದ ವತಿಯಿಂದ ಆಕೆಯ ಜೀವಿತಾವಧಿಯವರೆಗೆ ನೀಡಲಾಗುವುದು. ಅಥವಾ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.

ಈಗ ವಿತರಣೆ ಮಾಡಿರುವ 4,12,500/- ರೂಪಾಯಿಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಮಾಡುವಂತೆ ಸಲಹೆ ನೀಡಿದರು. ಸರ್ಕಾರವು ತಮ್ಮೊಂದಿಗೆ ಇದೆ. ಯಾವುದೇ ಕಾರಣಕ್ಕೂ ತನಿಖೆ ದಿಕ್ಕು ತಪ್ಪಲು ಸರ್ಕಾರವು ಬಿಡುವುದಿಲ್ಲ. ಕತ್ತರಘಟ್ಟ ಗ್ರಾಮಸ್ಥರು ಹಾಗೂ ದಲಿತಪರ ಸಂಘಟನೆಗಳು ಈ ಬಗ್ಗೆ ಯಾವುದೇ ಅಪನಂಬಿಕೆ ಇಟ್ಟುಕೊಳ್ಳಬಾರದು. ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಮೃತ ಜಯಕುಮಾರ್ ಬೇಸಾಯ ಮಾಡಿಕೊಂಡು ಅನುಭವದಲ್ಲಿದ್ದ ಜಮೀನನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ಮಂಜೂರು ಮಾಡಿಕೊಡಲು ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಹಾಗೂ ತಾಲ್ಲೂಕು ಆಡಳಿತವು ಕಟ್ಟೆಚ್ಚರ ವಹಿಸಬೇಕು.

ದಲಿತರು ಹಾಗೂ ಹಿಂದುಳಿದ ವರ್ಗಗಳು ಸಾಗುವಳಿ ಮಾಡುತ್ತಿರುವ ಜಮೀನನ್ನು ಬಲಾಡ್ಯರು ದಬ್ಬಾಳಿಕೆಯಿಂದ ಸ್ವಾಧೀನದಿಂದ ಓಡಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳಿದ್ದು ಕೂಡಲೇ ಕಂದಾಯ ಇಲಾಖೆಯ ಅಧಿಕಾರಿಗಳು ತುರ್ತು ಗಮನ ಹರಿಸಿ ಯಾರು ಉಳುಮೆ ಮಾಡುತ್ತಿದ್ದಾರೋ ಅವರಿಗೆ ಸಾಗುವಳಿ ಚೀಟಿ ಹಾಗೂ ದುರಸ್ತ್ ಮಾಡಿಕೊಡಲು ಮುಂದಾಗಬೇಕು. ಯಾವುದೇ ಕಾರಣಕ್ಕೂ ಹಣದ ಆಮಿಷಕ್ಕೆ ಒಳಗಾಗಿ ಬಡವರು, ದಲಿತರು, ಹಿಂದುಳಿದ ವರ್ಗಗಳು ಉಳುಮೆ ಮಾಡುತ್ತಿರುವ ಭೂಮಿಯನ್ನು ಬೇರೆಯವರು ಉಳುಮೆ ಮಾಡುತ್ತಿದ್ದಾರೆ ಎಂದು ತಪ್ಪು ವರದಿ ನೀಡಿ ಅನ್ಯಾಯ ಮಾಡಬಾರದು. ಹೀಗೆ ಮಾಡಿದರೆ ಬಡವರ ಶಾಪ ನಿಮಗೆ ತಟ್ಟಲಿದೆ. ಈ ರೀತಿಯ ತಪ್ಪುಗಳನ್ನು ಮಾಡಿದರೆ ಅಂತಹ ಕಂದಾಯ ಇಲಾಖೆಯ ಅಧಿಗಳು, ಸರ್ವೆ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಮಾಡಿದರೆ ಸೂಕ್ತ ಕಠಿಣ ಕಾನೂನೂ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಗಂಭೀರ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಯು.ಅಶೋಕ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಿದ್ದಲಿಂಗೇಶ್ ಬೇವಿನಮಠ್, ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ಪುರಸಭಾ ಸದಸ್ಯ ಡಿ.ಪ್ರೇಮ್ಕುಮಾರ್, ಬಸ್ತಿ ರಂಗಪ್ಪ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಮಡುವಿನಕೋಡಿ ಕಾಂತರಾಜು, ಹರಿಹರಪುರ ಗ್ರಾ.ಪಂ.ಅಧ್ಯಕ್ಷೆ ರತಿಶ್ರೀಧರ್, ಗ್ರಾ.ಪಂ.ಮಾಜಿ ಸದಸ್ಯ ಕೆ.ಜಿ.ಮಹೇಶ್, ಹರಿಹರಪುರ ಸೊಸೈಟಿ ನಿರ್ದೇಶಕ ಹೆಚ್.ಎನ್.ಶ್ರೀಧರ್, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಜಿಲ್ಲಾ ಉಪಾಧ್ಯಕ್ಷ ಹರೀಶ್ಕುಮಾರ್, ಪಾಂಡವಪುರ ತಾಲ್ಲೂಕು ಅಧ್ಯಕ್ಷ ಸೋಮು, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ತಾಲ್ಲೂಕು ಗೌರವಾಧ್ಯಕ್ಷ ಸೋಮಸುಂದರ್, ಡಿ.ಎಸ್.ಎಸ್. ಜಿಲ್ಲಾ ಸಂಘಟನಾ ಕತ್ತರಘಟ್ಟ ರಾಜೇಶ್, ಸುನಿಲ್, ಸಚಿವರ ಆಪ್ತ ಸಹಾಯಕ ಚೇತನಾ ಮಹೇಶ್ ಸೇರಿದಂತೆ ಹಲವಾರು ಮಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
