ಕೆ.ಆರ್.ಪೇಟೆ,ನ.22: ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಅಭಿವೃದ್ಧಿಯ ಹಿತದೃಷ್ಠಿಯಿಂದ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ಮಾದಾರ ಮಹಾಸಭಾ ಸಂಘಟನೆಯನ್ನು ನೊಂದಾಯಿಸಿ ಅಸ್ತಿತ್ವಕ್ಕೆ ತರಲಾಗಿದೆ.
ಹಾಗಾಗಿ ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ಮಾದಿಗ ಸಮುದಾಯದ ಬಂಧುಗಳು ಮಹಾಸಭಾದ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರ್ನಾಟಕ ರಾಜ್ಯ ಮಾದಾರ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಂಡ್ಯ ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಎನ್.ಆರ್.ಚಂದ್ರಶೇಖರ್ ಮನವಿ ಮಾಡಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಮಾದಾರ ಮಹಾಸಭಾ ರಾಜ್ಯಾಧ್ಯಕ್ಷರಾಗಿ ಸಚಿವ ಕೆ.ಹೆಚ್.ಮುನಿಯಪ್ಪ, ಉಪಾಧ್ಯಕ್ಷರಾಗಿ ಗೋವಿಂದಕಾರಜೋಳ, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಾಜಿ ಹೆಚ್.ಆಂಜನೇಯ, ಆರ್.ಬಿ.ತಿಮ್ಮಾಪೂರ, ಸಂಘಟನಾ ಕಾರ್ಯದರ್ಶಿಗಳಾಗಿ ತಿಮ್ಮರಾಯಪ್ಪ, ಆಲ್ಕೋಡ್ ಹನುಮಂತಪ್ಪ ಸೇರಿದಂತೆ ಎಲ್ಲ ಪಕ್ಷಗಳ ಮಾಜಿ ಶಾಸಕರು, ಹಾಲಿ ಶಾಸಕರು ಮಹಾಸಭಾ ಪದಾಧಿಕಾರಿಗಳಾಗಿದ್ದಾರೆ. ಮಾದಾರ ಮಹಾಸಭಾವು ಯಾವುದೇ ಒಂದು ಪಕ್ಷದ ಮುಖವಾಣಿಯಾಗಿರುವುದಿಲ್ಲ ಎಲ್ಲಾ ಪಕ್ಷಗಳ ಮುಖಂಡರು ಈ ಮಹಾಸಭಾದಲ್ಲಿ ಇದ್ದಾರೆ. ಹಾಗಾಗಿ ಸದಸ್ಯತ್ವಕ್ಕೆ ಸಾಮಾನ್ಯ ಸದಸ್ಯತ್ವ 500ರೂ ಇದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಸದಸ್ಯತ್ವ ಪಡೆದುಕೊಂಡು ತಮ್ಮ ಅಭಿವೃದ್ಧಿಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಬೇಕು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದ ಗುಣಗಳನ್ನು ಬೆಳೆಸಿಕೊಂಡರೆ ನಮ್ಮ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯವು ರಾಜ್ಯದಲ್ಲಿ ನಂ.1ಸ್ಥಾನದಲ್ಲಿದ್ದರೂ ಸಂಘಟನೆ ಕೊರತೆಯಿಂದ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ನಮ್ಮ ಸಮುದಾಯವು ಹಿಂದುಳಿದಿದೆ. ಈ ವಿಷಯವನ್ನು ಮನಗಂಡು ಒಳಮೀಸಲಾತಿಯನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರವು ಯಾವುದೇ ಒತ್ತಡಕ್ಕೂ ಮಣಿಯದೇ ಕೂಡಲೇ ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಒಳಮೀಸಲಾತಿಯನ್ನು ಯತಾವತ್ ಜಾರಿಗೆ ತಂದಿರುವ ಅಹಿಂದ ವರ್ಗಗಳ ಕಣ್ಮಣಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟದ ಎಲ್ಲಾ ಸಚಿವರುಗಳಿಗೆ ಕರ್ನಾಟಕ ಮಾದಾರ ಮಹಾಸಭಾ ಘಟಕವು ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ನಮ್ಮಲ್ಲಿ ಸಂಘಟನೆ ಕೊರತೆ ಇರುವ ಕಾರಣ ನಮ್ಮ ಸಮುದಾಯಕ್ಕೆ ಸೇರಿದ ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ಐ.ಎ.ಎಸ್, ಕೆ.ಎ.ಎಸ್. ಕೋಚಿಂಗ್ ಸೆಂಟರ್ಗಳು ಇರುವುದಿಲ್ಲ.

ಇದರಿಂದಾಗಿ ನಮ್ಮ ಮಾದಿಗ ಸಮುದಾಯವು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇದರಿಂದಾಗಿ ನಮ್ಮ ಸಮುದಾಯದ ಐ.ಎ.ಎಸ್. ಐ.ಪಿ.ಎಸ್, ಕೆ.ಎ.ಎಸ್. ಅಧಿಕಾರಿಗಳು ಹೆಚ್ಚು ಇರುವುದಿಲ್ಲ. ಇನ್ನು ಮುಂದೆ ಈ ಕೊರತೆಯಲ್ಲಿ ನೀಗಿಸಿ ನಮ್ಮ ಕರ್ನಾಟಕ ಮಾದಾಯ ಮಹಾಸಭಾ ವತಿಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐ.ಎ.ಎಸ್, ಐಪಿಎಸ್, ಕೆ.ಎ.ಎಸ್ ಕೋಚಿಂಗ್ ಸೆಂಟರ್ಗಳನ್ನು ಆರಂಭಿಸಲಾಗುವುದು. ಆಗ ನಮ್ಮ ಸಮುದಾಯವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯಲು ಸಾಧ್ಯವಾಗಲಿದೆ ಹಾಗಾಗಿ ಮಂಡ್ಯ ಜಿಲ್ಲೆಯ ಪ್ರತಿಯೊಬ್ಬ ಮಾದಿಗ ಸಮುದಾಯದ ಬಂಧುಗಳು ಕಡ್ಡಾಯವಾಗಿ ಕರ್ನಾಟಕ ಮಾದಾರ ಮಹಾಸಭಾದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಎನ್.ಆರ್.ಚಂದ್ರಶೇಖರ್ ಸಮುದಾಯದ ಬಂಧುಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಮಂಡ್ಯ ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಕಾವಲು ಕಾಂತರಾಜು, ತಾಲ್ಲೂಕು ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ರಾಯಸಮುದ್ರ ಆರ್.ಟಿ.ಉಮೇಶ್, ಆರ್.ಜೆ.ಗೋಪಿನಾಥ್, ಆರ್.ಕೆ.ಧನಂಜಯ, ರಾಜಯ್ಯ, ಗಂಗೇನಹಳ್ಳಿ ಕೃಷ್ಣಯ್ಯ, ಧರ್ಮ, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.

[…] ಇದನ್ನು ಓದಿ: ಕೆ.ಆರ್.ಪೇಟೆ- ಪ್ರತಿಯೊಬ್ಬ ಮಾದಿಗ ಸಮುದಾಯದ … […]