ಕೆ.ಆರ್.ಪೇಟೆ,ಅ.16: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಮ್ಮ ಶಿಕ್ಷಣದ ಒಂದು ಭಾಗವಾಗಿವೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿವೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕಾಲೇಜಿನ 2025-26 ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ತಾಲೂಕಿನಲ್ಲಿಯೂ ಅಪಾರವಾದ ಸಾಂಸ್ಕೃತಿಕ ಪ್ರತಿಭೆಗಳಿದ್ದು ಅವು ಈಗಾಗಲೇ ನಾಡಿನಾದ್ಯಂತ ವಿಕಸಿಸುತ್ತಿವೆ. ಕಲೆ, ಸಾಹಿತ್ಯ, ಸಿನಿಮಾ,. ಕಿರುತೆರೆ, ಕ್ರೀಡೆ, ಕೃಷಿ ಸಂಶೋಧನೆ, ಸಂಗೀತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ತಾಲೂಕಿನ ಪ್ರತಿಭೆಗಳು ಮಿನುಗಲಾರಂಭಿಸಿವೆ. ಇದು ತಾಲೂಕಿನ ಜನ ಸಂತಸಪಡುವ ವಿಚಾರವಾಗಿದೆ. ಇಂದು ಸಾಮಾಜಿಕ ಮಾಧ್ಯಮ ಪ್ರಭಲವಾಗಿದೆ. ವಿದ್ಯಾರ್ಥಿಗಳು ವೇದಿಕೆಯನ್ನು ಹುಡುಕುವ ಬದಲು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ವಿಕಸನಕ್ಕೆ ಅಗತ್ಯ ವೇದಿಕೆ ನಿರ್ಮಿಸಿಕೊಳ್ಳಬಹುದು. ಒಂದು ಕಾಲದಲ್ಲಿ ಶಿಷ್ಠ ಸಾಹಿತ್ಯದಿಂದ ಕಡೆಗಣಿಸಲ್ಪಟ್ಟಿದ್ದ ಜಾನಪದ ಸಾಹಿತ್ಯ ಮತ್ತು ಜಾನಪದ ಕಲಾವಿದರೂ ಇಂದು ಅಂತರ ರಾಷ್ಟ್ರೀಯ ಮನ್ನಣೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಕೀಳರಿಮೆಗೆ ಒಳಗಾಗದೆ ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ಪ್ರತಿಭೆಯ ಮೂಲಕ ವಿಕಸನಗೊಳ್ಳುವ ಪ್ರಯತ್ನ ಮಾಡಬೇಕು. ಕಲಿಕೆಯ ಜೊತೆಗೆ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವಂತೆ ಶಾಸಕ ಹೆಚ್.ಟಿ.ಮಂಜು ಕಿವಿಮಾತು ಹೇಳಿದರು.
ಕಾರ್ಯಕ್ರಮಕುರಿತು ಪ್ರಧಾನ ಉಪನ್ಯಾಸ ನೀಡಿದ ನಾಡಿನ ಸುಪ್ರಸಿದ್ದ ಜನಪದ ಗಾಯಕ ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಮಾತನಾಡಿ ಸಾಂಸ್ಕೃತಿಕ ಶಿಕ್ಷಣದ ತಳಹದಿಯ ಮೇಲೆ ಪಠ್ಯ ಶಿಕ್ಷಣ ಬೆಳೆಯಬೇಕು. ಪಠ್ಯ ಕೇಂದ್ರೀಕೃತ ಶಿಕ್ಷಣದ ಮೂಲಕ ನಾವು ಉದ್ಯೋಗ ಪಡೆಯಬಹುದು. ಆದರೆ ಸಾಂಸ್ಕೃತಿಕ ಶಿಕ್ಷಣದ ಆಯಾಮವಿಲ್ಲದೆ ಔದ್ಯೋಗಿಕ ಶಿಕ್ಷಣ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು. ನಮ್ಮ ದೇಶದ ಕಾರ್ಯಾಂಗ ವ್ಯವಸ್ಥೆಯಲ್ಲಿ ಐ.ಎ.ಎಸ್ ಅತೀ ಉನ್ನತ ಹುದ್ದೆ. ತಮ್ಮ ಬೌದ್ದಿಕ ಜ್ಞಾನದ ಮೂಲಕ ಐ.ಎ.ಎಸ್ ಪಾಸು ಮಾಡಿ ಜಿಲ್ಲಾಧಿಕಾರಿಯಾದವರು ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿ ತಮ್ಮದೇ ಉದ್ಯಮ ಸಾಮ್ರಾಜ್ಯ ಕಟ್ಟಿದ ಉದ್ಯಮ ಪತಿಗಳೂ ಬದುಕಿನ ಒತ್ತಡದಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಪಠ್ಯ ಶಿಕ್ಷಣದ ಮೂಲಕ ಬದುಕಿನಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ ಸಾಂಸ್ಕೃತಿಕ ಶಿಕ್ಷಣದ ಕೊರತೆಯಿಂದ ನಾವು ಯಶಸ್ವಿ ಬದುಕು ನಿರ್ವಹಿಸಲು ವಿಫಲರಾಗುತ್ತಿದ್ದೇವೆ. ಬದುಕಿ ಬಾಳಬೇಕಾದ ಹದಿಹರೆಯದ ಯುವಕ-ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಸಾಂಸ್ಕೃತಿಕವಾಗಿ ನಾವು ನಮ್ಮ ಮಕ್ಕಳನ್ನು ಗಟ್ಟಿಯಾಗಿಸದಿರುವುದು ಇದಕ್ಕೆ ಪ್ರಮುಖ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯರು ಹೊರತಂದಿರುವ ಕಾಲೇಜಿನ ವಾರ್ಷಿಕ ಸಂಚಿಕೆ ಹೇಮ ಕಾರಂಜಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು.
ಪ್ರಾಂಶುಪಾಲೆ ಎಸ್.ಅನುರಾಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರಾದ ಮಡುವಿನಕೋಡಿ ರತಿಮಹದೇವ್, ಅಕ್ಕಿಹೆಬ್ಬಾಳು ಲೋಕೇಶ್, ಚಿಕ್ಕಬಸಪ್ಪ, ಕಾಲೇಜು ಸಾಂಸ್ಕೃತಿಕ ಸಮಿತಿಯ ಸಂಚಾಲಕ ಪ್ರೊ.ಸಿ.ಎಸ್.ಕೆಂಡಗಣ್ಣೇಗೌಡ, ಕ್ರೀಡಾ ಸಮಿತಿಯ ಸಂಚಾಲಕ ಡಾ.ಹೆಚ್.ಆರ್. ಶ್ಯಾಮ್, ರೆಡ್ ಕ್ರಾಸ್ ಸಮಿತಿಯ ಸಂಚಾಲಕ ಮಹದೇವಸ್ವಾಮಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕ ಎಂ.ಶಿವಸ್ವಾಮಿ, ಸ್ಕೌಟ್ ಅಂಡ್ ಗೈಡ್ಸ್ ಸಂಚಾಲಕಿ ನಫೀಸಾ ನಾವಾಡಿ, ಜಿ.ಮಧು, ಸಿ.ಬಿ.ಚೇತನಕುಮಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಿತ್ರಶೀರ್ಷಿಕೆ:16.ಕೆ.ಆರ್.ಪಿ-02: ಕೆ.ಆರ್.ಪೇಟೆ: ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಕಾಲೇಜಿನ 2025-26 ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ್ಕೌಟ್ ಅಂಡ್ ಗೈಡ್ಸ್ ಘಟಕಗಳನ್ನು ಶಾಸಕ ಹೆಚ್.ಟಿ.ಮಂಜು ಅವರು ಉದ್ಘಾಟಿಸಿ ಮಾತನಾಡಿದರು.
===============================

[…] ಇದನ್ನು ಓದಿ: ಕೆ.ಆರ್.ಪೇಟೆ : ವಿದ್ಯಾರ್ಥಿಗಳ ವ್ಯಕ್ತಿತ್ವ … […]