ಕೆ.ಆರ್.ಪೇಟೆ : ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಹುಟ್ಟೂರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮಕ್ಕೆ ರಾಜ್ಯದ ಮಾಜಿ ಸಿಎಂ ಯಡಿಯೂರಪ್ಪ ಭೇಟಿ ನೀಡಿ, ಗ್ರಾಮದೇವತೆ ಗೋಗಾಲಮ್ಮ ಹಾಗೂ ಮನೆದೇವರು ಅಕ್ಕಯ್ಯಮ್ಮ, ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯವರ ಗದ್ದುಗೆಗೆ ಕಾರ್ತೀಕ ಅಮಾವಾಸ್ಯೆಯ ವಿಶೇಷ ಪೂಜೆ ಸಲ್ಲಿಸಿದರು.

ಯಡಿಯೂರಪ್ಪ ಅವರು ಪುತ್ರಿಯರಾದ ಉಮಾದೇವಿ, ಅರುಣಾದೇವಿ ಹಾಗೂ ಸೊಸೆ ಪ್ರೇಮಾವಿಜಯೇಂದ್ರ ಅವರೊಂದಿಗೆ ಆಗಮಿಸಿ ಕಾರ್ತೀಕ ಮಾಸದ ಅಮಾವಾಸ್ಯೆಯ ವಿಶೇಷ ಪೂಜೆ ಸಲ್ಲಿಸಿ ಗ್ರಾಮಸ್ಥರು ಹಾಗೂ ಶಾಸಕರಾದ ಹೆಚ್.ಟಿ.ಮಂಜು ಅವರು ನೀಡಿದ ಅಭಿನಂದನೆಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಟಿ.ಮಂಜು, ಕೆ.ಎಂ.ಎಫ್ ನಿರ್ದೇಶಕ ಸಿಂಧುಘಟ್ಟ ಅಶೋಕ್, ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಬೂಕನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ಯಾಂಪ್ರಸಾದ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ತಾ.ಪಂ.ಮಾಜಿ ಸದಸ್ಯರಾದ ಹೆಳವೇಗೌಡ, ಬಿ.ಜವರಾಯಿಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪಶೆಟ್ಟಿ, ಭಾರತೀಪುರ ಪುಟ್ಟಣ್ಣ, ಮಾಜಿ ಸಚಿವ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ್, ವಕೀಲ ನಾಗೇಶ್, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸುಜೇಂದ್ರಕುಮಾರ್, ತಾಲ್ಲೂಕು ಬಿ.ಎಸ್. ಯಡಿಯೂರಪ್ಪ- ಬಿ.ವೈ.ವಿಜಯೇಂದ್ರ ಅಭಿಮಾನಿಗಳ ಬಳಗದ ಅಧ್ಯಕ್ಷ ಬೂಕನಕೆರೆ ಮಧುಸೂಧನ್, ಜ್ಞಾನಸಿಂಧು, ಅಂಗಡಿ ನಾಗರಾಜು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೋಗಾಲಮ್ಮ ದೇವಾಲಯಕ್ಕೆ ಆಗಮಿಸಿದ ಯಡಿಯೂರಪ್ಪ ಅವರಿಗೆ ಬೂಕನಕೆರೆ ಗ್ರಾಮಸ್ಥರು ಪೂರ್ಣಕುಂಭದೊಂದಿಗೆ ಹೃದಯಸ್ಪರ್ಷಿ ಸ್ವಾಗತ ನೀಡಿದರು. ತಮ್ಮೂರಿನ ಮನೆ ಮಗ ಯಡಿಯೂರಪ್ಪ ಅವರಿಗೆ ಗ್ರಾಮದ ನೂರಾರು ಜನರು ಭಾಗಿಯಾಗಿ ಶಾಲು, ಹಾರ, ತುರಾಯಿ ಹಾಕಿ ಸನ್ಮಾನಿಸಿ ಗೌರವಿಸಿದರು. ಬೂಕನಕೆರೆ ಗ್ರಾಮದ ಸುಪುತ್ರ ರಾಜ್ಯದ ಮಾಜಿಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಿ ಗೌರವಿಸಿದರು. ಬೂಕನಕೆರೆ ಭೇಟಿಯ ನಂತರ ಕಾಪನಹಳ್ಳಿ ಗವಿಮಠಕ್ಕೆ ತೆರಳಿ ಪೀಠಾಧಿಪತಿಗಳಾದ ಸ್ವತಂತ್ರ ಚನ್ನವೀರಯ್ಯನವರ ನೇತೃತ್ವದಲ್ಲಿ ಸ್ವತಂತ್ರ ಸಿದ್ಧಲಿಂಗೇಶ್ವರರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ಭೂವರಹನಾಥಸ್ವಾಮಿ ಕ್ಷೇತ್ರಕ್ಕೆ ತೆರಳಿ ಭೂದೇವಿಸಮೇತನಾದ ಶ್ರೀ ಲಕ್ಷ್ಮೀ ವರಹನಾಥಸ್ವಾಮಿಯ ದರ್ಶನ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಅವರು ನಾನು ನನ್ನ ತಂದೆಯವರ ಕಾಲದಿಂದಲೂ ಕಾರ್ತೀಕ ಮಾಸದ ಅಮಾವಾಸ್ಯೆಯ ದಿನ ಬೂಕನಕೆರೆಯ ಗ್ರಾಮಕ್ಜೆ ಬಂದು ಮನದೇವರಾದ ಅಕ್ಕಯ್ಯಮ್ಮ ಹಾಗೂ ಕಾಮನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದುಕೊಳ್ಳುವುದು ಹುಟ್ಡೂರಿನ ಜನರನ್ನು ಮಾತನಾಡಿಸುವುದನ್ನು ರೂಢಿಸಿಕೊಂಡು ಬರುತ್ತಿದ್ದೇನೆ. ಮುಂದೆಯೂ ನನ್ನ ಕೊನೆಯ ಉಸಿರು ಇರುವವರೆವಿಗೂ ನನ್ಮ ಹುಟ್ಟೂರು ಬೂಕನಕೆರೆ ಗ್ರಾಮವನ್ನು ಮರೆಯುವುದಿಲ್ಲ ಎಂದು ತಿಳಿಸಿದರು.

ಹೈಟೆಕ್ ಆಸ್ಪತ್ರೆ ಮುಚ್ಚಿರುವುದು ಸರಿಯಲ್ಲ ಯಡಿಯೂರಪ್ಪ ಬೇಸರ:
ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ಸುಮಾರು 12 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಸ್ಕಾನಿಂಗ್, ಎಕ್ಸರೇ ವಿಭಾಗಗಳನ್ನು ಮುಚ್ಚಿರುವ ಆರೋಗ್ಯ ಇಲಾಖೆಯ ವೈಖರಿಯನ್ನು ಯಡಿಯೂರಪ್ಪ ತೀವ್ರವಾಗಿ ಖಂಡಿಸಿದರು. ಕೆ.ಆರ್.ಪೇಟೆ ಸುಮಾರು 14ಕಿ.ಮೀ ದೂರದಲ್ಲಿದ್ದು ಹೋಬಳಿ ಕೇಂದ್ರವಾಗಿರುವ ಬೂಕನಕೆರೆ ಆಸ್ಪತ್ರೆಗೆ ತಿಂಗಳಿಗೆ ಸುಮಾರು ಆರೇಳು ಸಾವಿರ ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ರೋಗಿಗಳು ಬರುತ್ತಿಲ್ಲ ಎಂಬ ಕಾರಣ ನೀಡಿ ಮುಚ್ಚಿರುವುದರಿಂದ ಈ ಭಾಗದ ಸಾವಿರಾರು ಜನರಿಗೆ ತೊಂದರೆಯಾಗಿದೆ ಕೂಡಲೇ ಮುಚ್ಚಿರುವ 24/7 ಹೈಟೆಕ್ ಆಸ್ಪತ್ರೆಯನ್ನು ಪುನರ್ ಆರಂಭಿಸಲು ಆರೋಗ್ಯ ಇಲಾಖೆಯ ಎಂ.ಡಿ. ಹರ್ಷಗುಪ್ತ ಅವರೊಂದಿಗೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ವಹಿಸುವುದಾಗಿ ಯಡಿಯೂರಪ್ಪ ಬೂಕನಕೆರೆ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಮುಖಂಡರಾದ ಬಿ.ಎನ್.ಪುಟ್ಟರಾಜು, ಜ್ಞಾನಸಿಂಧು, ಮಧುಸೂಧನ್ ಅವರು ಒಂದು ವಾರದೊಳಗೆ ಬೂಕನಕೆರೆಯ 24/7 ಹೈಟೆಕ್ ಆಸ್ಪತ್ರೆಯನ್ನು ಪುನರ್ ಆರಂಭಿಸದೇ ಇದ್ದಲ್ಲಿ ರಸ್ತೆ ತಡೆ ಮತ್ತು ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
– ಶ್ರೀನಿವಾಸ್ ಆರ್.
