ಕೆ.ಆರ್.ಪೇಟೆ: ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ವಿರೋಧ ಪಕ್ಷದ ಶಾಸಕನಾಗಿ ಸರ್ಕಾರವು ಕೊಟ್ಟ ಅಲ್ಪಸ್ವಲ್ಪ ಅನುಧಾನವನ್ನು ಅಗತ್ಯವಿರುವ ತಾಲ್ಲೂಕಿನ ಗ್ರಾಮಗಳಿಗೆ ಹಂಚಿಕೆ ಮಾಡಿ ರಸ್ತೆ ಅಭಿವೃದ್ಧಿಗೆ ಕೈಜೋಡಿಸಲಾಗುತ್ತಿದೆ. ಈ ಮೂಲಕ ಜೆಡಿಎಸ್ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ. ತಾಲ್ಲೂಕಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿ.ಎಂ.ಕುಮಾರಣ್ಣ ಅವರ ನೂರಾರು ಅಭಿವೃದ್ಧಿ ಕೆಲಸಗಳು ಜನಸಾಮಾನ್ಯರ ಕಣ್ಣಿಗೆ ಕಾಣುತ್ತಿವೆ ಹಾಗಾಗಿ ಜೆಡಿಎಸ್ ಪಕ್ಷವು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಗಟ್ಟಿಯಾದ ಭದ್ರನೆಲೆಯನ್ನು ಹೊಂದಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ೨೦ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಮಿಕೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ, ಗ್ರಾಮದ ಕೆರೆಬೀದಿಯಲ್ಲಿ ಆಯೋಜಿಸಿದ್ದ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಹಲವಾರು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕಾರ್ಯಕರ್ತರನ್ನು ಕುರಿತು ಮಾತನಾಡಿದರು.

ಜೆಡಿಎಸ್ ಪಕ್ಷದಲ್ಲಿ ಚಿನ್ನದಂತಹ, ಸೈನಿಕರಂತ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ನಮ್ಮ ಕಾರ್ಯಕರ್ತರನ್ನು ಬೇರೆ ಯಾವುದೇ ಪಕ್ಷದವರು ಯಾವುದೇ ಆಮಿಷವನ್ನು ನೀಡಿ ಸೆಳೆಯಲು ಸಾಧ್ಯವಿಲ್ಲ. ಪಕ್ಷವನ್ನು ತಾಯಿ ಸ್ಥಾನದಲ್ಲಿ ನೋಡುವ ಪ್ರಾಮಾಣಿಕ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರು ಎಂದು ಹೇಳಿಕೊಳ್ಳಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ದೇವೇಗೌಡರು ಮತ್ತು ಕುಮಾರಣ್ಣ ಸೇರಿದಂತೆ ನೂರಾರು ಜೆಡಿಎಸ್ ನಾಯಕರು ಕಳೆದ ೨೫ವರ್ಷಗಳಿಂದಲೂ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ವಿರೋಧ ಪಕ್ಷಗಳು ಪ್ರಾದೇಶಿಕ ಪಕ್ಷವನ್ನು ತುಳಿಯಲು ಪ್ರಯತ್ನ ಮಾಡಿದರೂ ಸಹ ಜೆಡಿಎಸ್ ಪಕ್ಷವು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಜೆಡಿಎಸ್ ಪಕ್ಷದಲ್ಲಿ ನೂರಾರು ನಾಯಕರು ಬೆಳೆದು ಪಕ್ಷದಿಂದ ದೂರ ಹೋಗಿದ್ದಾರೆ.

ಆದರೆ ಯಾರೇ ಆಗಲಿ ತನ್ನನ್ನು ಬೆಳೆಸಿದ ಪಕ್ಷವನ್ನು ಅಳಿಸಲು ಪ್ರಯತ್ನಿಸಬಾರದು ಎಂದು ಜೆಡಿಎಸ್ ಪಕ್ಷದಲ್ಲಿ ಉನ್ನತ ಸ್ಥಾನ-ಮಾನ ಪಡೆದುಕೊಂಡು ಬೇರೆ ಪಕ್ಷಕ್ಕೆ ಹೋಗಿ ಜೆಡಿಎಸ್ ಪಕ್ಷವನ್ನು ಮುಗಿಸುವ ಮಾತನಾಡುತ್ತಿದ್ದಾರೆ ಇದು ಜೆಡಿಎಸ್ ಪಕ್ಷದ ಗಟ್ಟಿ ಮತ್ತು ಪ್ರಾಮಾಣಿಕ ಕಾರ್ಯಕರ್ತರು ಇರುವವರೆವಿಗೂ ಎಂದಿಗೂ ಸಾಧ್ಯವಿಲ್ಲದ ಮಾತಾಗಿದೆ ಎಂದು ಹೇಳುವ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷವು ಮುಂಬರುವ ೨೦೨೮ಕ್ಕೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಿಲ್ಲ ಎಂದು ಶಾಸಕ ಹೆಚ್.ಟಿ.ಮಂಜು ಅವರು ಭವಿಷ್ಯ ನುಡಿದರು.
ಕಾರ್ಯಕ್ರಮದಲ್ಲಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಿಡಿಓ ಶಿಲ್ಪ, ಕಾರ್ಯದರ್ಶಿ ಚಂದ್ರಕುಮಾರ್, ಜೆಡಿಎಸ್ ಮುಖಂಡರಾದ ತಾ.ಪಂ.ಮಾಜಿ ಅಧ್ಯಕ್ಷ ಮೆಣಸ ವಿ.ಎನ್.ಮಹಾದೇವೇಗೌಡ, ಹರೀನಹಳ್ಳಿ ರಘು, ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಚನ್ನೇಗೌಡ, ಸಾವಿತ್ರಮ್ಮ, ರೇಣುಕಾ, ಈಶ್ವರ್, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಎ.ಎಂ.ಮಂಜೇಗೌಡ, ಗ್ರಾ.ಪಂ.ಮಾಜಿ ಸದಸ್ಯ ಮಾಳಗಮ್ಮನ ಮಂಜಣ್ಣ, ಮುಖಂಡರಾದ ಚಿಕ್ಕೋಸಹಳ್ಳಿ ನಾಗೇಶ್, ಅನುವಿನಕಟ್ಟೆ ರಾಮಕೃಷ್ಣೇಗೌಡ, ನಿವೃತ್ತ ಶಿಕ್ಷಕ ಚನ್ನೇಗೌಡ, ಯಜಮಾನ್ ಅಣ್ಣೇಗೌಡ, ಪುಟ್ಟಸ್ವಾಮಣ್ಣ, ಮಾಜಿ ಛೇರ್ಮನ್ ರಾಮಚಂದ್ರೇಗೌಡ, ಎ.ಸಿ.ಲೋಕೇಶ್, ಬೇಲದಕೆರೆ ನಂಜಪ್ಪ, ಸರ್ವೆ ಶ್ರೀನಿವಾಸ್, ಮೋಹನ್, ಎಸ್.ಅಶೋಕ್, ರೂಪೇಶಾಚಾರ್, ಎ.ಸಿ.ಅಭಿ, ತಂದ್ರಿ ಪುನೀತ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ: ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ಎಸ್.ಅಶೋಕ್, ರೂಪೇಶಾಚಾರ್, ಎ.ಆರ್.ಗುರುಮೂರ್ತಿ, ಜಯಂತು, ಎ.ಬಿ.ಚನ್ನೇಗೌಡ ಸೇರಿದಂತೆ ಹಲವು ಮುಖಂಡರನ್ನು ಶಾಸಕ ಹೆಚ್.ಟಿ.ಮಂಜು ಅವರು ಪಕ್ಷದ ಶಾಲು ಹೊದಿಸಿ, ಹಾರ ಹಾಕುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.
– ಶ್ರೀನಿವಾಸ್ ಆರ್.
