ಕೆ.ಆರ್.ಪೇಟೆ,ಅ.14: ಗ್ಯಾರಂಟಿ ಯೋಜನೆಗಳಿಂದ ಇತರೆ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗಿಲ್ಲ. ರಾಜ್ಯದ ಆರ್ಥಿಕತೆ ಬಲಿಷ್ಠವಾಗಿದೆ ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಹೇಳಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗಾಗಿ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಕೆ.ಆರ್.ಪೇಟೆ ತಾಲ್ಲೂಕಿಗೆ ಗೃಹಲಕ್ಷ್ಮಿ ಒಂದರಿಂದಲೇ ಸುಮಾರು ಪ್ರತಿ ತಿಂಗಳು 68125ಮಂದಿ ಮಹಿಳಾ ಫಲಾನುಭವಿಗಳಿಗೆ 13ಕೋಟಿ62ಲಕ್ಷದ 50ಸಾವಿರ ರೂನಂತೆ ರೂಪಾಯಿಗಳನ್ನು ವಿತರಣೆ ಮಾಡಲಾಗಿದೆ. ಇದೂವರೆವಿಗೂ 21ಕಂತುಗಳಲ್ಲಿ ಸುಮಾರು 300ಕೋಟಿ ರೂಪಾಯಿಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

ಕೆಲವೊಂದು ಇಕೆವೈಸಿ ಮತ್ತಿತರರ ಕಾರಣಗಳಿಗೆ ಡಿಬಿಟಿ ಜಮಾ ಆಗಿರುವುದಿಲ್ಲ. ಅಂತಹ ಫಲಾನುಭವಿಗಳು ಕೂಡಲೇ ತಾಲ್ಲೂಕು ಸಿಡಿಪಿಓ ಕಚೇರಿಗೆ ಬೇಟಿ ನೀಡಿ ಸರಿಪಡಿಸಿಕೊಳ್ಳುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ನಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾಗಿದ್ದ ದೇಶದ ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ವಿಧವೆಯರಿಗೆ ವಿಧವಾ ವೇತನ, ದೈಹಿಕ ವಿಕಲಚೇತನರಿಗೆ ಅಂಗವಿಕಲ ವೇತನ ಹಾಗೂ ವಯೋವೃದ್ದರಿಗೆ ವೃದ್ಯಾಪ್ಯ ವೇತನ ನೀಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಗಳನ್ನು ಇಂದಿಗೂ ಮುಂದುವರೆಸಲಾಗುತ್ತಿದೆ ಹಾಗಾಯೇ ನಮ್ಮ ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ.

2023ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ, ಶೂಭಾಗ್ಯ, ಅನ್ನಭಾಗ್ಯ ಯೋಜನೆ ಜಾರಿಗೆ ತಂದರು. ನಂತರ ಬಂದ ಬಿಜೆಪಿ ಸರ್ಕಾರವು ಮುಂದುವರೆಸಿತ್ತು. ಈಗಲೂ ನಮ್ಮ ಕಾಂಗ್ರೆಸ್ ಸರ್ಕಾರ ಮುಂದುವರೆಸಿದೆ. ಈಗ ಮೊಟ್ಟೆ ಅಥವಾ ಬಾಳೆಹಣ್ಣು ನೀಡುವ ಯೋಜನೆ ಜಾರಿಗೆ ತರಲಾಗಿದೆ.

2009ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕಾಂಗ್ರೆಸ್ ಪಕ್ಷದ ಎಸ್.ಎಂ.ಕೃಷ್ಣ ಅವರು ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ತಂದರು ಈ ಯೋಜನೆಗಳು ಇಂದಿಗೂ ನಿಂತಿಲ್ಲ. ಅದೇ ರೀತಿ ನಮ್ಮ 5 ಗ್ಯಾರಂಟಿ ಯೋಜನೆಗಳು ಎಂದಿಗೂ ನಿಲ್ಲುವುದಿಲ್ಲ. ಬಡವರ ಪರವಾದ ಯೋಜನೆಗಳ ಎಂದಿಗೂ ನಿಲ್ಲಬಾರದು. ನಿಲ್ಲಿಸಿದರೆ ಸರ್ಕಾರ ಬಡವರ ವಿರೋಧಿ ಸರ್ಕಾರವಾಗುತ್ತದೆ ಎಂದು ಎ.ಬಿ.ಕುಮಾರ್ ಹೇಳಿದರು.

ಸಭೆಯಲ್ಲಿ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ಎಂ.ನಟರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಾರ್ವತಮ್ಮ, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಡಿಪೋ ಟ್ರಾಪಿಕ್ ಇನ್ಸ್ಪೆಕ್ಟರ್ ಗವಿಸಿದ್ದಪ್ಪ ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯ್ತಿ ಎ.ಓ. ಶಂಕರ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸದಸ್ಯರಾದ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಬೊಮ್ಮೇನಹಳ್ಳಿ ಲತಾಹರೀಶ್, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.

[…] ಇದನ್ನು ಓದಿ: ಕೆ.ಆರ್.ಪೇಟೆ- ಗ್ಯಾರಂಟಿ ಯೋಜನೆಗಳಿಂದ ಇತರೆ… […]