ಕೆ.ಆರ್.ಪೇಟೆ,ಸೆ.30: ನಮ್ಮಿಂದ 25ವರ್ಷಗಳಿಂದ ಹಿಂದೆ ಪಾಠ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನ-ಮಾನಗಳಲ್ಲಿದ್ದಾರೆ ಇದು ಶಿಕ್ಷಕರಾದ ನಮಗೆ ಅತ್ಯಂತ ಸಂತೋಷದ ವಿಚಾರವಾಗಿದೆ. 25 ವರ್ಷಗಳ ನಂತರ ನೀವೆೆಲ್ಲರೂ ಒಂದೆಡೆ ಸೇರಿ ನಮ್ಮನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸಿರುವುದು, ನಮ್ಮ ಶಿಕ್ಷಕ ವೃತ್ತಿ ಜೀವನದ ಸಾರ್ಥಕತೆಯನ್ನು ಸೂಚಿಸುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕರಾದ ಕೆ.ಮಾದೇಗೌಡ ಅವರು ತಿಳಿಸಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೆ.ಮಾದೇಗೌಡರು ನಮ್ಮ ಶಿಷ್ಯ ವೃಂದವು 25ವರ್ಷಗಳ ನಂತರ ಒಂದೆಡೆ ಸೇರಿ ಗುರುಗಳನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು ಎಂದರು.

ಶಿಕ್ಷಕರಾದ ನಾವು ಪಾಠ ಮಾಡುವ ಸಂದರ್ಭದಲ್ಲಿ ಕಲಿಕೆಯ ಮಟ್ಟ ಶ್ರೇಷ್ಠವಾಗಿರಬೇಕು ಎಂದು ಪಾಠವನ್ನು ಸರಿಯಾಗಿ ಕಲಿಯದೇ ಇದ್ದಾಗ, ಮನೆಪಾಠವನ್ನು ಸರಿಯಾಗಿ ಮಾಡಿಕೊಂಡು ಬಾರದೇ ಇದ್ದಾಗ ಅಂತಯ ವಿದ್ಯಾರ್ಥಿಗಳಿಗೆ ದಂಡಿಸಿರುತ್ತೇವೆ. ಅದನ್ನು ನಿಮ್ಮ ಭವಿಷ್ಯದ ದೃಷ್ಠಿಯಿಂದ ಮಾಡಿರುತ್ತೇವೆ, ದಯಮಾಡಿ ತಾವು ತಪ್ಪು ತಿಳಿದುಕೊಳ್ಳಬಾರದು.

ನಮ್ಮ ಪೆಟ್ಟಿನಿಂದ ನೀವು ಚನ್ನಾಗಿ ಓದಿ ಉತ್ತಮ ವಿದ್ಯಾರ್ಥಿಗಳಾಗಿ ಉನ್ನತ ಸ್ಥಾನವನ್ನು ಗಿಟ್ಟಸಿದ್ದೀರಿ ಇದು ಶಿಕ್ಷಕರಾದ ನಮಗೆ ಹೆಚ್ಚು ಸಂತೋಷ ಕೊಡುತ್ತದೆ. ಕೆಲವೇ ಕೆಲವು ಮಂದಿ ಮಾತ್ರ ರೈತರಾಗಿದ್ದೀರಿ, ರೈತ ವೃತ್ತಿಯೂ ಅತ್ಯಂತ ಶ್ರೇಷ್ಠವಾದುದು. ನಾನೂ ಸಹ ನಿವೃತ್ತಿಯ ನಂತರ ಭೂಮಿ ಖರೀದಿಸಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದೇನೆ ಇದರಿಂದ ನನಗೆ ಸಂತೃಪ್ತಿ ಜೀವನ ನಡೆಸುತ್ತಿದ್ದೇನೆ. ನಿವೃತ್ತಿಯ ನಂತರ ಬಂದ ಹಣದಲ್ಲಿ ಪಟ್ಟಣಕ್ಕೆ ಹೋಗಿ ಮನೆ ಖರೀದಿಸಿ ಜೀವನ ನಡೆಸಿ ಎಂದು ಕೆಲವರು ಹೇಳಿದ್ದರು. ಆದರೆ ನಾನು ಗ್ರಾಮೀಣ ಪರಿಸರದಲ್ಲಿ ವಿಶ್ರಾಂತಿ ಜೀವನ ನಡೆಸಬೇಕೆಂಬ ಕಾರಣಕ್ಕೆ ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದೇನೆ. ಈ ಮೂಲಕ ರೈತರ ಜೀವನ ನೆಮ್ಮದಿಯ ಜೀವನವಾಗಿದೆ ಎಂದು ಕೆ.ಮಾದೇಗೌಡರು ಹೆಮ್ಮೆಯಿಂದ ಹೇಳಿದರು.
ನಿವೃತ್ತ ಉಪನ್ಯಾಸಕ ಜೈನ್ನಹಳ್ಳಿ ಜೆ.ಜಿ.ರಾಜೇಗೌಡರು ಮಾತನಾಡಿ ಬಾಲ್ಯದಲ್ಲಿ ವಿದ್ಯಾರ್ಥಿಗಳನ್ನು ತಿದ್ದದೇ, ತಪ್ಪಿಗೆ ಶಿಕ್ಷೆ ನೀಡದೇ ಕಲಿಸುವ ಶಿಕ್ಷಣವು ನಿಜವಾದ ಶಿಕ್ಷಣವೇ ಅಲ್ಲ. ವಿದ್ಯಾರ್ಥಿಗಳ ಬದುಕು ಹಸನಾಗಲಿ, ಉತ್ತಮ ವಿದ್ಯಾರ್ಥಿಗಳಾಗಲಿ ಎಂಬುದೇ ಶಿಕ್ಷಕರ ಅಪೇಕ್ಷೆಯಾಗಿರುತ್ತದೆ. ಅದಕ್ಕೆ ಶಿಕ್ಷಿಸಿ, ಕ್ಷಮಿಸಿ ಕಲಿಸುವವರೇ ಶಿಕ್ಷಕರು. ಈ ನಿಟ್ಟಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿದ ನಂತರವೂ ಗುರುಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ಇದು ಮಾದರಿ ಕಾರ್ಯವಾಗಿದೆ ಎಂದರು. ಪಾಠ ಮಾಡಿದ ಗುರುಗಳು ಯಾವುದೇ ಅಪೇಕ್ಷೆ ಇಲ್ಲದೆ ಶಿಷ್ಯರ ಭವಿಷ್ಯ ರೂಪಿಸುತ್ತಾರೆ. ಜೀವನಕ್ಕೆ ಮಾರ್ಗದರ್ಶಕರಾಗುತ್ತಾರೆ. ಆದರೆ ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ದಂಡಿಸದೆ, ಶಿಕ್ಷಿಸದೆ ಪಾಠ ಮಾಡಬೇಕು ಎಂದು ಪೋಷಕರೇ ತಾಕೀತು ಮಾಡುತ್ತಾರೆ. ಇದು ಬೇಸರದ ಸಂಗತಿ ಎಂದು ಜೆ.ಜಿ.ರಾಜೇಗೌಡ ಅವರು ಹೇಳಿದರು.

ಸಾಹಿತಿಗಳು ಹಾಗೂ ಶಿಕ್ಷಕರೂ ಆದ ಬಿ.ಸಿ.ವಿಜಯ್ಕುಮಾರ್ ಮಾತನಾಡಿ ಪ್ರತಿಯೊಬ್ಬರೂ ಮಾತೃ, ಪಿತೃ, ಗುರು ಋಣಗಳನ್ನು ತೀರಿಸುವ ಕಾರ್ಯ ಮಾಡಬೇಕು. ಇದರಿಂದ ಬದುಕಿನ ಸಾರ್ಥಕತೆಯನ್ನು ಸಂಭ್ರಮಿಸಬಹುದು. ಇಂತಹ ಶ್ರೇಷ್ಠ ಕಾರ್ಯ ಮಾಡುತ್ತಿರುವ ನಮ್ಮ ಹರಿಹರಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 1999-2000ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು 25ವರ್ಷಗಳ ನಂತರ ನಮ್ಮನ್ನು ನೆನಪಿಸಿಕೊಂಡು ಗುರುವಂದನೆ ಸಲ್ಲಿಸುತ್ತಿರುವುದು ನಿಮ್ಮಂತ ಶಿಷ್ಯ ವೃಂದವನ್ನು ಪಡೆದ ನಾವೇ ಧನ್ಯರು ಎಂದು ತಿಳಿಸಿದರು.

ಗೌರವ ಸಮರ್ಪಣೆ: ನಿವೃತ್ತ ಶಿಕ್ಷಕರಾದ ಕೆ.ಮಾದೇಗೌಡರು, ಜೆ.ಜಿ.ರಾಜೇಗೌಡರು, ಎಂ.ಎನ್.ನಾಗೇಶ್, ಕೆ.ಕೆ.ಪುಟ್ಟಣ್ಣಯ್ಯ, ಬಿ.ಎನ್.ಪರಶಿವಮೂರ್ತಿ, ಎಂ.ಎಸ್.ರಾಜಮ್ಮ, ಡಾ.ಬಿ.ಸಿ.ವಿಜಯ್ಕುಮಾರ್, ಎಂ.ಎಸ್.ವೆಂಕಟರಾಮು, ಎ.ಬಿ.ಮಹಾದೇವ್, ದಿವಂಗತ ಬಿ.ಲತಾ ಟೀಚರ್ ಅವರ ಪತಿ ನಿವೃತ್ತ ಸೈನಿಕ ಮಲ್ಲಿಕಾರ್ಜುನಸ್ವಾಮಿ, ಪುತ್ರಿ ನಾರಾಯಣ ಆಸ್ಪತ್ರೆಯ ವೈದ್ಯೆ ಡಾ.ದರ್ಶಿನಿ.ಎಲ್.ಎಂ ಅವರುಗಳಿಗೆ ಗುರುಕಾಣಿಕೆ ನೀಡಿ, ಫಲತಾಂಬೂಲ ನೀಡಿ, ಸನ್ಮಾನಿಸಿ ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಿದರು.

ವಿದ್ಯಾರ್ಥಿಗಳು ಶಾಲಾ ದಿನಗಳಲ್ಲಿ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿ, ತಮ್ಮ ಹಳೆಯ ಸ್ನೇಹಿತರನ್ನು ಬೇಟಿ ಮಾಡಿ ಹಳೆಯ ದಿನಗಳ ತುಂಟಾಟಗಳನ್ನು ಮೆಲುಕು ಹಾಕುವ ಮೂಲಕ ಇಡೀ ದಿನ ತಾವು ಓದಿದ ಶಾಲೆಯ ಆವರಣದಲ್ಲಿ ಕಾಲ ಕಳೆದರು.
ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿರಿಯ ವಿದ್ಯಾರ್ಥಿಗಳು ಪ್ರೊಜೆಕ್ಟರ್ ಅನ್ನು ಕೊಡುಗೆಯಾಗಿ ನೀಡಿದರು. ಈ ಪ್ರೊಜೆಕ್ಟರ್ ಕೊಠಡಿಯನ್ನು ತಮ್ಮ ಶಿಕ್ಷಕರಿಂದ ಉದ್ಘಾಟಿಸುವ ಮೂಲಕ ಸಂತೋಷ ವ್ಯಕ್ತ ಪಡಿಸಿದರು. ತಮಗೆ ಪ್ರೌಢಶಾಲೆಯಲ್ಲಿ ಪಾಠ ಮಾಡಿದ ಇಂಗ್ಲೀಷ್ ಶಿಕ್ಷಕಿ ಲತಾ ಮತ್ತು ಮೂವರು ಸಹಪಾಠಿಗಳು ಇತ್ತೀಚೆಗೆ ನಿಧನರಾಗಿರುವ ಬಗ್ಗೆ ಮಾಹಿತಿ ತಿಳಿದು ದುಃಖ ವ್ಯಕ್ತಪಡಿಸಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಿದರು.
– ಶ್ರೀನಿವಾಸ್ ಆರ್.
