ಕೆ.ಆರ್.ಪೇಟೆ: ತಾಲ್ಲೂಕಿನ ಹಿರಿಯ ನ್ಯಾಯವಾದಿ ವಿ.ಎಸ್.ಧನಂಜಯಕುಮಾರ್ ಅವರನ್ನು ರಾಜಕೀಯವಾಗಿ ಹಿನ್ನೆಡೆ ಉಂಟು ಮಾಡಬೇಕು ಎಂಬ ದುರುದ್ದೇಶದಿಂದ ಭಾವಚಿತ್ರಕ್ಕೆ ಫೇಕ್ ಆಡಿಯೋ ಧ್ವನಿಯೊಂದಿಗೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಕೆ.ಆರ್.ಪೇಟೆಯ ಕೆ.ಎಸ್.ಮೋಹನ್ಕುಮಾರ್ ಎಂಬುವವರ ವಿರುದ್ದ ಮಂಡ್ಯ ಇಲ್ಲಾ ಸೈಬರ್ ಕ್ರೈಮ್ ಪೊಲೀಸರು 100ಪುಟಗಳ ಸಾಕ್ಷಾದಾರಗಳೊಂದಿಗೆ ದೋಷಾರೋಪಣೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು 5ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಇದರಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ವಕೀಲರಾದ ವಿ.ಎಸ್.ಧನಂಜಯಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯವಾದಿ ವಿ.ಎಸ್.ಧನಂಜಯಕುಮಾರ್ ಅವರು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಫೇಕ್ ಆಡಿಯೋವನ್ನು ಸಾಮಾಜಿಕ ಜಾಲತಾಣ ಕೆ.ಆರ್.ಪೇಟೆ ಎಂಬ ಫೇಸ್ಬುಕ್ ಅಕೌಂಟ್ ಮೂಲಕ ಅಪ್ಲೋಡ್ ಮಾಡುವ ಮೂಲಕ ನನಗೆ ಮಾನಸಿಕವಾಗಿ, ಸಾಮಾಜಿಕವಾಗಿ ನೋವುಂಟು ಮಾಡಿರುವ ಕೆ.ಎಸ್.ಮೋಹನ್ಕುಮಾರ್ ಅವರು ಬಿಜೆಪಿ ಮುಖಂಡರಾಗಿದ್ದು ನನ್ನನ್ನು ರಾಜಕೀಯವಾಗಿ ತುಳಿಯಬೇಕೆಂಬ ದುರುದ್ದೇಶದಿಂದ ಬೇರೆ ಬೇರೆ ಪಕ್ಷಗಳ ರಾಜಕೀಯ ಮುಖಂಡರು ಸೇರಿಕೊಂಡು ಪಿತೂರಿ ನಡೆಸಿ ನನ್ನ ವಿರುದ್ದ ಸುಳ್ಳು ಮಾಹಿತಿಯನ್ನು ಹಾಕಿಸಿರುತ್ತಾರೆ. ಈ ವಿಷಯವನ್ನು ಆರೋಪಿಯಾಗಿರುವ ಕೆ.ಎಸ್.ಮೋಹನ್ಕುಮಾರ್ ಅವರು ಮಂಡ್ಯ ಜಿಲ್ಲಾ ಸೈಬರ್ ಕ್ರೈಮ್ ಪೊಲೀಸ್ ಅಧಿಕಾರಿಗಳಿಗೆ ತಪ್ಪೊಪ್ಪಿಗೆ ಹೇಳಿಕೆ ಪತ್ರವನ್ನು ನೀಡಿರುತ್ತಾರೆ.
ಈ ಹಿನ್ನೆಲೆಯಲ್ಲಿ ಸುಮಾರು 100ಪುಟಗಳ ದೋಷಾರೋಪಣಾ ಪಟ್ಟಿಯನ್ನು ಐಟಿ-66ಸಿ ಮತ್ತು 66ಇ ಹಾಗೂ ಬಿ.ಎನ್.ಎಸ್. 238 ಮತ್ತು 241ಕಾನೂನುಗಳ ಅನ್ವಯ ಮಂಡ್ಯದ ಹಿರಿಯಶ್ರೇಣಿ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಈ ಸಂಬಂಧ ತಾವು ಸುಮಾರು 5ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನೂ ಸಹ ಆರೋಪಿ ಕೆ.ಎಸ್.ಮೋಹನ್ಕುಮಾರ್ ಅವರ ವಿರುದ್ದ ಸಲ್ಲಿಸಿರುತ್ತೇನೆ. ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ನ್ಯಾಯವಾದಿ ವಿ.ಎಸ್.ಧನಂಜಯಕುಮಾರ್ ತಿಳಿಸಿದ್ದಾರೆ. ನನಗೆ ಆಗಿರುವ ಇಂತಹ ಅನ್ಯಾಯವನ್ನು ಯಾರಿಗೂ ಮಾಡಬಾರದು ಎಂಬ ಉದ್ದೇಶದಿಂದ ನಾನು ಸೈಬರ್ ಕ್ರಮ್ ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಿದ್ದೆನು.

ನನ್ನ ಅರ್ಜಿಯನ್ನು ಪುರಸ್ಕರಿಸಿ ಸುಮಾರು 6ತಿಂಗಳ ಸುಧೀರ್ಘ ತನಿಖೆ ನಡೆಸಿರುವ ಮಂಡ್ಯದ ಸೈಬರ್ ಕ್ರೈ ಪೊಲೀಸರು ಆರೋಪಿ ಕೆ.ಎಸ್.ಮೋಹನ್ಕುಮಾರ್ ಎಂಬಾತನ ವಿರುದ್ದ ಸುಮಾರು 100ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸುವ ಮೂಲಕ ಸುಳ್ಳು ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವವರಿಗೆ ತಕ್ಕ ಪಾಠ ಕಲಿಸಿದ್ದಾರೆ. ನನಗೆ ಆಗಿರುವ ನೋವು ಬೇರೆ ಯಾರಿಗೂ ಆಗದೇ ಇರಲಿ, ಆರೋಪಿ ಕೆ.ಎಸ್.ಮೋಹನ್ಕುಮಾರ್ ಮಾಡಿರುವಂತಹ ತಪ್ಪನ್ನು ಬೇರೆ ಯಾರೂ ಸಹ ಮಾಡದೇ ಇರಲಿ ಎಂಬ ಕಾರಣದಿಂದ ಈ ಆರೋಪಿಯ ವಿರುದ್ದ 5ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಸಹ ಹೂಡಿರುತ್ತೇನೆ ಎಂದು ವಿ.ಎಸ್.ಧನಂಜಯಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಗಂಜಿಗೆರೆ ಜಿ.ಜೆ.ಲೋಕೇಶ್, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ, ವೀರಶೈವ ಮಹಾಸಭಾ ಮುಖಂಡರಾದ ಸೋಮನಾಥಪುರ ಮಹಾದೇಶ್, ಡಿ.ಸಿ.ಕುಮಾರ್, ಶಿವಪ್ಪ, ಮುಖಂಡರಾದ ಚಟ್ಟೇನಹಳ್ಳಿ ನಾಗರಾಜು, ಮತ್ತೇಕೆರೆ ಎಂ.ಲಕ್ಕೇಗೌಡ, ಬಳ್ಳೇಕೆರೆ ಗ್ರಾ.ಪಂ.ಉಪಾಧ್ಯಕ್ಷ ಹೆಮ್ಮಡಹಳ್ಳಿ ತಿಮ್ಮೇಗೌಡ, ಮಾಜಿ ಸೈನಿಕ್ ಸುಕುಮಾರ್, ನಾರ್ಗೋನಹಳ್ಳಿ ಸ್ವಾಮಿ, ಬೂಕಹಳ್ಳಿ ಶಿವಕುಮಾರ್, ಸಾಸಲು ವಿಶ್ವನಾಥ್, ಚೌಡಸಮುದ್ರ ಶಿವಮೂರ್ತಿ, ನಂದಣ್ಣ, ಮಾಕವಳ್ಳಿ ತಮ್ಮಣ್ಣ, ಗಂಜಿಗೆರೆ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
