ಕೆ.ಆರ್.ಪೇಟೆ: ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಯಿತು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪ್ರಸ್ತಾವನೆ ಪೀಠಿಕೆ ಫಲಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಬಿ.ನಾಗೇಂದ್ರಕುಮಾರ್ ಅವರು ಭಾರತ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಆಳವಾದ ಅಧ್ಯಯನ ನಡೆಸಿ ಬರೆದುಕೊಡದೇ ಇದ್ದಿದ್ದರೆ ಭಾರತದ ಪ್ರಜೆಗಳಾದ ನಮಗೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಅವರು ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ಡಿಗ್ರಿಗಳನ್ನು ಓದಿದ ಮಹಾನ್ ಮಾನವತಾವಾದಿಯಾಗಿದ್ದಾರೆ. ಇದರಿಂದಾಗಿ ಗಟ್ಟಿತನದಿಂದ ಕೂಡಿದ, ಸರ್ವ ಜನಾಂಗಕ್ಕೂ ಸಮಪಾಲು, ಸಮಬಾಳು ನೀಡುವಂತಹ ಅತ್ಯುತ್ತಮ ಸಂವಿಧಾನ ರಚಿಸಲು ಅಂಬೇಡ್ಕರ್ ಅವರಿಗೆ ಸಾಧ್ಯವಾಯಿತು.

ಪ್ರಾಯಷಃ ಅಂಬೇಡ್ಕರ್ ಅವರು ನಮ್ಮ ದೇಶದಲ್ಲಿ ಜನಿಸದೇ ಇದ್ದರೆ ಇಂತಹ ಸರ್ವಶ್ರೇಷ್ಠ ಸಂವಿಧಾನವನ್ನು ಭಾರತದ ಪ್ರಜೆಗಳಾದ ನಾವು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಬ್ರಿಟೀಷರು ಬಿಟ್ಟು ಹೋದ ಬರಿದಾದ ಭಾರತವನ್ನು ಅಭಿವೃದ್ದಿಯ ಪಥದಲ್ಲಿ ತೆಗೆದುಕೊಂಡು ಅಗತ್ಯವಿರುವ ಕಾನೂನುಗಳು, ಕರ್ತವ್ಯಗಳು, ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ದೇಶದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಸಮಗ್ರವಾಗಿ ವಿವರಿಸಿದ್ದಾರೆ. ಸುಮಾರು 70ವರ್ಷ ಕಳೆದರೂ ಭಾರತ ಸಂವಿಧಾನದ ಅಡಿಯಲ್ಲಿ 140ಜನಸಂಖ್ಯೆ ಇರುವ ಭಾರತದ ಪ್ರಜೆಗಳಾದ ನಾವೆಲ್ಲರೂ ಜೀವನ ನಡೆಸುತ್ತಿದ್ದೇನೆ.

ದೇಶದಲ್ಲಿ ವಾಸಿಸುವ ಎಲ್ಲರಿಗೂ ಒಂದೇ ತೆರನಾದ ಮತದಾನ ಹಕ್ಕು ನೀಡಿದ್ದಾರೆ. ನಿರ್ಗತಿಕ ಬಡವನಿಗೂ ಒಂದೇ ಓಟು, ಅಗರ್ಭ ಶ್ರೀಮಂತನಿಗೂ ಒಂದೇ ಓಟಿನ ಹಕ್ಕನ್ನು ಅಂಬೇಡ್ಕರ್ ನೀಡಿದ್ದಾರೆ. ಹಿಂದೆ ರಾಜ ಮಹಾರಾಜರ ಕಾಲದ ಆಡಳಿತದಲ್ಲಿ ಜಮೀನ್ದಾರರು, ಶ್ರೀಮಂತರು, ಹೆಚ್ಚು ಓದಿದದವರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಆದರೆ ಭಾರತವು ಸ್ವಾತಂತ್ರ್ಯ ಪಡೆದ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದಿಂದ ದಲಿತರು, ಹಿಂದುಳಿದವರು, ಶ್ರೀಮಂತರು, ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಒಂದೇ ಬಗೆಯ ಕಾನೂನು ಜಾರಿಗೆ ತಂದರು. ಚುನಾವಣೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಗುಡಿಸಲಿನಲ್ಲಿ ವಾಸಿಸುವ ಕಡು ಬಸವನಿಗೂ , ಅರಮನೆಯಲ್ಲಿ ವಾಸಿಸುವ ಕೋಟ್ಯಾಧಿಪತಿಗೂ ಒಂದೇ ಮತ ಎನ್ನುವ ಅಮೂಲ್ಯವಾದ ಹಕ್ಕು ಕೊಟ್ಡರು. ಇಂತಹ ಅಮೂಲ್ಯ ಹಕ್ಕು ಇಂದು ಕಲುಷಿತ ರಾಜಕಾರಣದಿಂದಾಗಿ ಮಾರಾಟದ ವಸ್ತುವಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ ಹಾಗಾಗಿ ದೇಶದ ಜನತೆ ಇನ್ನುಮುಂದಾದರೂ ಅಂಬೇಡ್ಕರ್ ಅವರು ನೀಡಿದ ಪವಿತ್ರವಾದ ಮತವನ್ನು ಯಾವುದೇ ಆಮಿಷಗಳಿಗೆ ಒಳಗಾಗಿ ಮಾರಾಟ ಮಾಡಿಕೊಳ್ಳಬಾರದು.

ಯೋಗ್ಯ ಅಭ್ಯರ್ಥಿಗೆ ತಮ್ಮ ಮತವನ್ನು ದಾನ ಮಾಡುವಂತೆ ಬಿ.ನಾಗೇಂದ್ರಕುಮಾರ್ ಸಲಹೆ ನೀಡಿದರು. ಇಂತಹ ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸಬಾರದು. ದೇಶದ ಪ್ರತಿಯೊಬ್ಬರೂ ಅಂಬೇಡ್ಕರ್ ಅವರನ್ನು ಸದಾ ಗೌರವಿಸಬೇಕು. ಸಂವಿಧಾನಕ್ಕೆ ಗೌರವ ಕೊಡಬೇಕು ಈ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಬಿ.ನಾಗೇಂದ್ರಕುಮಾರ್ ಮನವಿ ಮಾಡಿದರು.

ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ಸಂವಿಧಾನ ಜಾಥಾಕ್ಕೆ ಶತಮಾನದ ಶಾಲಾ ಆವರಣದಲ್ಲಿ ಚಾಲನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ವೆಂಕಟರಾಮು ಸಂವಿಧಾನ ದಿನಾಚರಣೆ ಕುರಿತು ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ದಿವಾಕರ್, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಮದಾಸ್, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ತಾಲ್ಲೂಕು ಪ.ಜಾ,ಪ.ಪಂ. ಶಿಕ್ಷಕರ ಸಂಘದ ಅಧ್ಯಕ್ಷ ಹಳೆಯೂರು ಯೋಗೇಶ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ, ಬಿ.ಸಿ.ಎಂ.ಅಧಿಕಾರಿ ವೆಂಕಟೇಶ್, ಎಸಿಡಿಪಿಓ ಶಾಂತವ್ವ, ಕೆಪಿಎಸ್ ಶಾಲೆಯ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಸಿ.ಬಿ.ಚೇತನ್ ಕುಮಾರ್,ಮುಖಂಡರಾದ ಬಸ್ತಿ ರಂಗಪ್ಪ, ಊಚನಹಳ್ಳಿ ನಟರಾಜು, ಬಿ.ಬಿ.ಕಾವಲು ಕಾಂತರಾಜು, ಲಕ್ಷ್ಮೀಪುರ ರಂಗಸ್ವಾಮಿ, ತೆಂಡೇಕೆರೆ ನಿಂಗಯ್ಯ, ಚೌಡೇನಹಳ್ಳಿ ದೇವರಾಜು, ಬಂಡಿಹೊಳೆ ರಮೇಶ್, ಎನ್.ಜೆ.ಮಂಜು, ಸೋಮಸುಂದರ್, ಮಾಂಬಳ್ಳಿ ಜಯರಾಂ, ಮುದುಗೆರೆ ಮಹೇಂದ್ರ, ಯಾಲಕ್ಕಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
