ಕೆ.ಆರ್.ಪೇಟೆ,ಮಾ.13: ತಾಲ್ಲೂಕಿನ ಕಸಬಾ ಹೋಬಳಿಯ ಚಿಲ್ಲದಹಳ್ಳಿ ಗ್ರಾಮ ದೇವತೆ ಶ್ರೀ ಮಾಯಮ್ಮ ಮತ್ತು ಶ್ರೀ ಲಕ್ಷ್ಮೀದೇವಿ ಅಮ್ಮನವರ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಪೂಜಾ ಮಹೋತ್ಸವವು ಪವಿತ್ರ ಹೇಮಾವತಿ ನದಿ ದಂಡೆಯ ಹೇಮಗಿರಿ ಶ್ರೀ ಕ್ಷೇತ್ರದಲ್ಲಿ ಹೋಮ-ಹವನ ಹಾಗೂ ಪೂಜಾ ವಿಧಿ ವಿಧಾನಗಳೊಂದಿಗೆ ಉತ್ಸವ ಮೂರ್ತಿಯ ದೇವತೆಗಳ ವಿಗ್ರಹಕ್ಕೆ ವೈದಿಕ ಮಂತ್ರಗಳ ಮೂಲಕ ಜೀವಶಕ್ತಿ ಅವಾಹನೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡಿಸಲಾಯಿತು.
ಕಳೆದ ಎರಡು ವರ್ಷಗಳ ಹಿಂದೆ ಚಿಲ್ಲದಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ದಾನಿಗಳ ನೆರವಿನಿಂದ ಶ್ರೀ ಮಾಯಮ್ಮ ಮತ್ತು ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯವನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿತ್ತು. ಆದರೆ ಹಬ್ಬ ಹರಿದಿನಗಳಲ್ಲಿ, ಹಾಗೂ ವಿಶೇಷ ದಿನಗಳಲ್ಲಿ ಗ್ರಾಮದಲ್ಲಿ ದೇವರನ್ನು ಮೆರವಣಿಗೆ ಮಾಡಲು ಇಚ್ಚಿಸುವವರಿಗೆ ಉತ್ಸವ ಮೂರ್ತಿ ಇರಲಿಲ್ಲ. ಇದರಿಂದಾಗಿ ಗ್ರಾಮ ದೇವತೆಗೆ ಉತ್ಸವ ಮೂರ್ತಿಯನ್ನು ನಿರ್ಮಿಸುವ ಬಗ್ಗೆ ಗ್ರಾಮಸ್ಥರು ಒಮ್ಮತದ ತೀರ್ಮಾನ ಕೈಗೊಂಡು ಎಲ್ಲರ ಸಹಕಾರದಿಂದ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಮಾಯಮ್ಮ ಮತ್ತು ಶ್ರೀ ಲಕ್ಷ್ಮೀದೇವಿ ಅಮ್ಮನವರ ಎರಡೂ ಮೂರ್ತಿಗಳನ್ನು ಒಂದೇ ಉತ್ಸವ ಅಡ್ಡ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡುವ ಕಾರ್ಯಗಳು ನಡೆದವು. ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯ ಅಂಗವಾಗಿ ಪವಿತ್ರ ಹೇಮಾವತಿ ನದಿಯಲ್ಲಿ ಮೂರ್ತಿಯನ್ನು ಪವಿತ್ರಗೊಳಿಸಿ, ಶ್ರೀ ಮಾಯಮ್ಮ ಮತ್ತು ಶ್ರೀ ಲಕ್ಷ್ಮೀ ದೇವಿ ದೇವತೆಗಳನ್ನು ಮೂರ್ತಿಯಲ್ಲಿ ನೆಲೆಸಲು ಪುರೋಹತರ ತಂಡವು ಮೂರ್ತಿಯ ವಿವಿಧ ಭಾಗಗಳನ್ನು ಸ್ಪರ್ಶಿಸಿ ದೈವಿಕ ಶಕ್ತಿಯನ್ನು ಮೂರ್ತಿಗೆ ಬೆಸೆಯುವ ಕಾರ್ಯಕ್ರಮಗಳು ನಡೆದವು. ಚಿನ್ನದ ಸೂಜಿ ಹಾಗೂ ದರ್ಬೆಯಿಂದ ಮೂರ್ತಿಯ ಕಣ್ಣುಗಳನ್ನು ತೆರೆಯುವ ಮೂಲಕ ಉತ್ಸವ ಮೂರ್ತಿಗೆ ದೃಷ್ಠಿ ನೀಡಲಾಯಿತು. ನಂತರ ಮೂರ್ತಿಯನ್ನು ಗಂಗಾಜಲ, ಕ್ಷೀರ, ಧಾನ್ಯ, ಮತ್ತು ತೈಲದಲ್ಲಿ ಇರಿಸಿ ಪವಿತ್ರಗೊಳಿಸಲಾಯಿತು. ಜೊತೆಗೆ ಪುರೋಹಿತರ ತಂಡವು ವೈದಿಕರ ಮಂತ್ರಗಳ ಪಠಿಸುವ ಮೂಲಕ ಮೂರ್ತಿಯನ್ನು ಪೂರ್ಣ ದೇವತೆಯನ್ನಾಗಿ ಪರಿವರ್ತಿಸಲಾಯಿತು. ಉತ್ಸವ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯ ನಂತರ ಭಕ್ತಾಧಿಗಳಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಯಿತು. ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅನ್ನಪ್ರಸಾದವನ್ನು ಗ್ರಾಮಸ್ಥರ ವತಿಯಿಂದ ಆಯೋಜಿಸಲಾಗಿತ್ತು.

ನಂತರ ಚಿಲ್ಲದಹಳ್ಳಿ ಗ್ರಾಮದಲ್ಲಿ ಉತ್ಸವಮೂರ್ತಿಯನ್ನು ಗ್ರಾಮದ ಎಲ್ಲಾ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮಸ್ಥರು ದೇವರ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಫೆಗೆ ಪಾತ್ರರಾದರು.
ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಚಿಲ್ಲದಹಳ್ಳಿ ಗ್ರಾಮದ ಎಲ್ಲಾ ಮುಖಂಡರು ಹಾಗೂ ಶ್ರೀ ಮಾಯಮ್ಮ-ಶ್ರೀ ಲಕ್ಷ್ಮೀದೇವಿಯ ಯುವಕರ ಬಳಗದ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
– ಶ್ರೀನಿವಾಸ್ ಆರ್.
