ಕೆ.ಆರ್.ಪೇಟೆ,ಡಿ.29: ರಾಷ್ಟ್ರಕವಿ ಕುವೆಂಪು ಅವರ ಜೀವನ ಸಂದೇಶಗಳು ಜಾತಿ ರಹಿತ ಸಮ ಸಮಾಜ ನಿರ್ಮಾಣಕ್ಕೆ, ಮನುಷ್ಯನ ಸರಳ ಜೀವನಕ್ಕೆ ಸಹಕಾರಿಯಾಗಿವೆ ಎಂದು ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಾಹಿತಿಗಳಾದ ಡಾ.ಗಂಗಾಧರಶೆಟ್ಟಿ ಹೇಳಿದರು.
ಅವರು ತಾಲೂಕಿನ ಚಿಲ್ಲದಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಮರಡಿಲಿಂಗೇಶ್ವರ ಕ್ಷೇತ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಕಟ್ಟು ಪಾಡುಗಳು ಹಾಗೂ ಮೌಡ್ಯದ ವಿರುದ್ಧ ತಮ್ಮ ಬರವಣಿಗೆಯ ಮೂಲಕ ಸಾಮಾಜಿಕ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರು ಗುಡಿ, ಚರ್ಚು, ಮಸೀದಿಗಳಲ್ಲಿರುವ ಪೌರೋಹಿತಶಾಹಿ ವ್ಯವಸ್ಥೆ ವಿರುದ್ಧ ತಮ್ಮ ಸಾಹಿತ್ಯದ ಮೂಲಕ ಸಂಘರ್ಷ ನಡೆಸಿದರು. ಮೌಡ್ಯಗಳು, ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆಗಳು ಹಾಗೂ ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ವೈಚಾರಿಕ ಕ್ರಾಂತಿಯ ಮೂಲಕ ಜಾತಿ ಮತಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕೆ ತಮ್ಮ ಬರವಣಿಗೆಯ ಮೂಲಕ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ಅವರು ನುಡಿದಂತೆ ನಡೆದುದ್ದಲ್ಲದೆ ತಾವು ಪ್ರತಿಪಾದಿಸಿದ ವೈಚಾರಿಕ ಕ್ರಾಂತಿಯನ್ನೇ ತಮ್ಮ ಜೀವನದ ಉಸಿರನ್ನಾಗಿಸಿಕೊಂಡು ಸರಳವಾಗಿ ಜೀವನ ನಡೆಸಿದರು. ನಾಗರೀಕ ಸಮಾಜದಲ್ಲಿ ವಾಸಿಸುವ ಎಲ್ಲಾ ಜಾತಿ ವರ್ಗಗಳ ಜನರು ಅಣ್ಣತಮ್ಮಂದಿರು ಇವರಲ್ಲಿ ಯಾವುದೇ ಭೇದ ಭಾವ ಹಾಗೂ ಭಿನ್ನಮತ ವಿಲ್ಲ ನಾವೆಲ್ಲರೂ ಒಂದು ನಾವು ಭಾರತಾಂಬೆಯ ಪುತ್ರರು ಜಾತಿ ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜವನ್ನು ನಿರ್ಮಾಣ ಮಾಡಲು ನಾವೆಲ್ಲರೂ ಒಂದಾಗಿ ಪರಸ್ಪರ ಪ್ರೀತಿ-ವಿಶ್ವಾಸಗಳಿಂದ ಜೀವನ ನಡೆಸಿ ಮನುಜ ಮತವೇ ವಿಶ್ವ ಪಥ ಎಂದು ಸಾರಿ ಪಂಚಮಂತ್ರಗಳು ಹಾಗೂ ಸಪ್ತ ಸೂತ್ರಗಳನ್ನು ನಮಗೆ ಕೊಡುಗೆಯಾಗಿ ನೀಡಿರುವ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಇದನ್ನು ಓದು: ಕೆ.ಆರ್. ಪೇಟೆ: ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಶಾಸಕರಿಂದ ನೇರ ಫೋನ್ ಇನ್ ಕಾರ್ಯಕ್ರಮ
ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಮಾತನಾಡಿ ಯುಗದ ಕವಿ ಜಗದ ಕವಿ ಎಂದೇ ಪ್ರಸಿದ್ಧರಾಗಿರುವ ರಾಷ್ಟ್ರಕವಿ ಕುವೆಂಪು ಅವರು ಆಡಂಬರದ ವಿವಾಹಗಳಿಗೆ ಪಿಲಾಂಜಲಿ ನೀಡಿ ಮಂತ್ರ ಮಾಂಗಲ್ಯ ಹಾಗೂ ಸರಳ ಮದುವೆಗಳ ಪ್ರಯೋಜನವನ್ನು ಶ್ರೀಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟು ಅನ್ನದಾತ ರೈತನನ್ನು ಉಳುವ ಯೋಗಿ ಎಂದು ಗುಣಗಾನ ಮಾಡಿದ್ದಾರೆ. ಕನ್ನಡಾಂಬೆಯ ಹೆಮ್ಮೆಯ ಪುತ್ರರಾದ ನಾವು ನಮ್ಮಲಿನ ಭಿನ್ನಮತವನ್ನು ಮರೆತು ಪರಸ್ಪರ ಒಂದಾಗಿ ಪ್ರೀತಿ ವಿಶ್ವಾಸ ಗಳಿಂದ ಜೀವನ ನಡೆಸಬೇಕು ಎಂಬ ಶಾಂತಿ ಮಂತ್ರದ ಸಂದೇಶ ನೀಡಿದ್ದಾರೆ ಹಿಂದಿನ ದಿನಮಾನದಲ್ಲಿ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಸಾಮಾಜಿಕ ಸಂದೇಶಗಳು ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಿವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ನಿಂಗೇಗೌಡ, ರಂಗಭೂಮಿ ಕಲಾವಿದ ಮಹದೇವೇಗೌಡ ಹಾಗೂ ಸಾಮಾಜಿಕ ಹೋರಾಟಗಾರ ಕಡಹೇಮ್ಮಿಗೆಯ ಕೆ. ಆರ್.ವೆಂಕಟೇಶ್ ಅವರಿಗೆ ಕುವೆಂಪು ಕಾಯಕಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರಾದ ಕೆ.ಆರ್.ನೀಲಕಂಠ, ಬಳ್ಳೇಕೆರೆ ಮಂಜುನಾಥ್, ಕೆ.ಎಸ್.ಸೋಮ ಶೇಖರ್, ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ಶಿಕ್ಷಣ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸಿಂದಘಟ್ಟ ನಾಗೇಶ್, ಶಿಕ್ಷಕರಾದ ರವಿಶಿವಕುಮಾರ್, ಪತ್ರಕರ್ತ ಕಾಡುಮೆಣಸ ಚಂದ್ರು ಹಾಗೂ ಬೋಧಕ, ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.

[…] ಇದನ್ನು ಓದು: ಕೆ.ಆರ್.ಪೇಟೆ: ಜಾತಿ ರಹಿತ, ಧರ್ಮ ರಹಿತ ಉತ್ತಮ … […]