ಕೆ.ಆರ್.ಪೇಟೆ,ಫೆ.20: ಪಟ್ಟಣದಲ್ಲಿ 6ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವನ್ನು ಆರಂಭಿಸಬೇಕೆಂದು ಒತ್ತಾಯಿಸಿ ಕೆ.ಆರ್.ಪೇಟೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಮ್.ಆರ್.ನಾಗೇಗೌಡ, ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ಉಪಾಧ್ಯಕ್ಷ ಪುರುಷೋತ್ತಮ್ ನೇತೃತ್ವದಲ್ಲಿ ನೂರಾರು ವಕೀಲರು ಇಂದು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಾವಿರಾರು ಪ್ರಕರಣಗಳಿದ್ದು ಕೆ.ಆರ್.ಪೇಟೆ ಪಟ್ಟಣದಲ್ಲಿ ಆರನೇ ಸತ್ರ ಜಿಲ್ಲಾ ನ್ಯಾಯಾಲಯ ಇಲ್ಲದೆ ಇರುವುದರಿಂದ ವಕೀಲರು ಹಾಗೂ ಕಕ್ಷಿದಾರರು ಅನಿವಾರ್ಯವಾಗಿ ಸಮಾರು 2ಗಂಟೆ ಪ್ರಯಾಣ ದೂರದಲ್ಲಿರುವ ಜಿಲ್ಲಾ ಕೇಂದ್ರವಾದ ಮಂಡ್ಯಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ಕೆ.ಆರ್.ಪೇಟೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಲಯವನ್ನು ಆರಂಭಿಸಬೇಕೆಂದು ಒತ್ತಾಯಿಸಿ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಕಾನೂನು ಸಚಿವರಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಅನಿವಾರ್ಯವಾಗಿ ಹೋರಾಟದ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಗೌಡ ಹೇಳಿದರು.

ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಆರಂಭಿಸಬೇಕೆಂದು ವಕೀಲರು ಪ್ರತಿಭಟನೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಶಾಸಕ ಹೆಚ್.ಟಿ.ಮಂಜು ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾರ್ಚ್ 6 ರಿಂದ ಬಜೆಟ್ ಅಧಿವೇಶನವು ಆರಂಭವಾಗುತ್ತಿದೆ. ಈ ಅಧಿವೇಶನದಲ್ಲಿಯೇ ಕೆ.ಆರ್.ಪೇಟೆಯ 6ನೇ ಹೆಚ್ಚುವರಿ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಸರ್ಕಾರದ ಸೆಳೆಯಲಾಗುವುದು. ಆದಷ್ಟು ಶೀಘ್ರವೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಎನ್. ಆರ್.ರವಿಶಂಕರ್ ಪ್ರಧಾನ ಕಾರ್ಯದರ್ಶಿ ಸಾಧುಗೋನಹಳ್ಳಿ ಮಂಜೇಗೌಡ, ಹಿರಿಯ ವಕೀಲರಾದ ಬಿ.ಎಲ್. ದೇವರಾಜು, ಎಸ್.ಸಿ.ವಿಜಯಕುಮಾರ್, ಜಿ.ಆರ್.ಅನಂತರಾಮಯ್ಯ, ಎಂ.ಆರ್.ಪ್ರಸನ್ನಕುಮಾರ್, ಹೆಚ್.ರವಿ, ಬಂಡಿಹೊಳೆ ಗಣೇಶ್, ಕೆ.ರಾಮೇಗೌಡ, ಗಂಜಿಗೆರೆ ಜಿ.ಜೆ.ಲೋಕೇಶ್, ಅರುಣ್ಕುಮಾರ್, ವಿ.ಎಸ್. ಧನಂಜಯಕುಮಾರ್, ಎಂ.ಎಲ್.ಸುರೇಶ್, ಬಿ.ಸಿ.ದಿನೇಶ್, ಕೆ.ಎನ್.ಪಾಂಡು, ರಾಣಿ, ಮನುರಾಧಾ ಸೇರಿದಂತೆ ನೂರಾರು ವಕೀಲರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
