ಕೆ.ಆರ್.ಪೇಟೆ,ನ.10: ಪಟ್ಟಣದ ಪ್ರಮುಖ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಹಾಗೂ ಹಳೆ ಕಿಕ್ಕೇರಿ ರಸ್ತೆಗೆ ಅಂಬೇಡ್ಕರ್ ರಸ್ತೆ ನಾಮಕರಣ ಮಾಡಿ ಸ್ವಾಗತ ಕಮಾನು ನಿರ್ಮಾಣ ಮಾಡಬೇಕು. ತಾಲ್ಲೂಕಿನಾದ್ಯಂತ ಇರುವ ದಲಿತ ಬಂಧುಗಳಿಗೆ ಆಶ್ರಯ ಮನೆ ಮತ್ತು ಉಚಿತ ನಿವೇಶನ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ದಲಿತ ಪರ ಸಂಘಟನೆಗಳ ಒಕ್ಕೂಟದ ಸಾವಿರಾರು ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ತಮಟೆ ಚಳುವಳಿ ಮೂಲಕ ಪ್ರತಿಭಟನೆ ನಡೆಸಿದರು.

ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ, ತಾಲ್ಲೂಕು ಛಲವಾದಿ ಮಹಾಸಭಾ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸೇನೆ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ತಮಟೆ ಚಳುವಳಿ ಮೂಲಕ ಮೆರವಣಿಗೆ ನಡೆಸಿದ ಸಾವಿರಾರು ಕಾರ್ಯಕರ್ತರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಕೂಡಲೇ ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ಆಡಳಿತದ ವತಿಯಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಬೇಕು.

ಜೊತೆಗೆ ಪಟ್ಟಣದ ಟಿ.ಬಿ.ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಜಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಜಿಲ್ಲಾಡಳಿತವು ಅವಕಾಶ ನೀಡಬೇಕು. ಇಲ್ಲದಿದ್ದರೆ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದಲೇ ನಿಧಿ ಸಂಗ್ರಹಿಸಿ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಬೇಕಾಗುತ್ತದೆ ಇದಕ್ಕೆ ಅಡ್ಡಿ ಪಡಿಸಿದರೆ ನಾವು ಅಂಬೇಡ್ಕರ್ ಅವರಿಗಾಗಿ ಜೈಲಿಗೆ ಹೋಗಲು ಸಿದ್ದವಿರುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಪುತ್ತಳಿ ನಿರ್ಮಾಣ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್ ತಾಲ್ಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರಮುಖ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಬೇಕು ಹಾಗೂ ಪಟ್ಟಣದ ಹಳೆ ಕಿಕ್ಕೇರಿ ರಸ್ತೆಗೆ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಎಂದು ನಾಮಕರಣ ಮಾಡಿ ಸ್ವಾಗತ ಕಮಾನುಗಳನ್ನು ನಿರ್ಮಾಣ ಮಾಡಿಕೊಡಬೇಕು. ಈ ಬಗ್ಗೆ ಹಲವು ವರ್ಷಗಳಿಂದಲೂ ದಲಿತ ಸಂಘಟನೆಗಳು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಆದರೂ ಸಹ ಸರ್ಕಾರವಾಗಲಿ, ತಾಲ್ಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ದಲಿತ ಬಂಧುಗಳ ಮನಸ್ಸಿಗೆ ತೀವ್ರ ಬೇಸರವಾಗಿರುತ್ತದೆ.

ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ತಾಲ್ಲೂಕು ಕಚೇರಿಯ ಮುಂದೆ ಹಾಗೂ ಪ್ರಮುಖ ವೃತ್ತದಲ್ಲಿ ಸ್ಥಾಪನೆ ಮಾಡಿ ಗೌರವ ಸಲ್ಲಿಸಲಾಗಿದೆ. ಆದರೆ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಎಸ್.ಸಿ.ಎಸ್.ಟಿ ಸಮುದಾಯ ಸುಮಾರು 80ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುತ್ತದೆ. ಆದರೆ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಿ ಎಂದು ಹೋರಾಟ ಮಾಡಬೇಕಾದ ದುಸ್ಥಿತಿ ಇರುವುದು ದುರ್ಧೈವದ ಸಂಗತಿಯಾಗಿದೆ. ಅಂಬೇಡ್ಕರ್ ಪುತ್ತಳಿ ಸ್ಥಾಪನೆಗಾಗಿ ಹೋರಾಟ ಸಮಿತಿ ರಚಿಸಿ ಹೋರಾಟ ಆರಂಭಿಸಿದ್ದು, ಸರ್ಕಾರಕ್ಕೆ ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿಕ್ಕೆ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ತುರ್ತಾಗಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳದೇ ಇದ್ದಲ್ಲಿ ತಾಲ್ಲೂಕು ಕಚೇರಿಯ ಮುಂದೆ ಅನಿರ್ಧಾಷ್ಠಾವಧಿ ಚಳುವಳಿ ಆರಂಭಿಸಲಾಗುವುದು ಎಂದು ಡಿ.ಪ್ರೇಮಕುಮಾರ್ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಸಂಚಾಲಕ ಸೋಮಸುಂದರ್, ಉಪಾಧ್ಯಕ್ಷ ಡಿ.ಜಿ.ಎಸ್.ಗಂಗಾಧರ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಛಲವಾದಿ ಮಹಾಸಭಾ ಜಿಲ್ಲಾ ಉಸ್ತುವಾರಿ ಮಾಂಬಳ್ಳಿ ಜಯರಾಂ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮೀ ಪುರ ರಂಗಸ್ವಾಮಿ, ಡಿ.ಎಸ್.ಎಸ್. ತಾಲ್ಲೂಕು ಸಂಚಾಲಕ ನಾಟನಹಳ್ಳಿ ಸೋಮರಾಜು, ಸಿಂಧಘಟ್ಟ ಜಗದೀಶ್, ಹಳೆಯೂರು ದೇವರಾಜು, ಡಿ.ಎಸ್.ಎಸ್. ಜಿಲ್ಲಾ ಸಂಘಟನಾ ಸಂಚಾಲಕರಾದ ಸಂತೋಷ್ಕುಮಾರ್, ಬಂಡಿಹೊಳೆ ರಮೇಶ್, ಕತ್ತರಘಟ್ಟ ರಾಜೇಶ್, ದಲಿತ ಸೇನೆ ಜಿಲ್ಲಾಧ್ಯಕ್ಷ ಎನ್.ಜೆ.ಮಂಜು, ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ಚೌಡೇನಹಳ್ಳಿ ದೇವರಾಜು, ಗಿರಿ, ವಡ್ಡರಹಳ್ಳಿ ರಮೇಶ್, ಚನ್ನಕೃಷ್ಣ, ಮುದುಗೆರೆ ಮಹೇಂದ್ರ, ಬಂಡಿಹೊಳೆ ಕೃಷ್ಣಮೂರ್ತಿ, ಹರಿಹರಪುರ ನರಸಿಂಹ, ಐಪನಹಳ್ಳಿ ರವಿ, ಅಕ್ಕಿಹೆಬ್ಬಾಳು ಗಣೇಶ್, ಆನಂದ್, ಸೂರಿ, ಅಂಬೇಡ್ಕರ್ ಮಹಿಳಾ ಹೋರಾಟ ಸಂಘಟನೆ ಕಮಲಾಕ್ಷಿ, ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸಮೀರ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಸಿದ್ದರು.
ಪ್ರತಿಭಟನೆಯ ನಂತರ ತಾಲ್ಲೂಕು ಗ್ರೇಡ್-1 ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿ ಮುಸ್ಲಿಂ ಯುವಕರ ಸಂಘದ ಸದಸ್ಯರೂ ಸಹ ಬೆಂಬಲ ಸೂಚಿಸಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
