ಕೆ.ಆರ್.ಪೇಟೆ,ಡಿ.24: ನಮ್ಮ ಜೆಡಿಎಸ್ ಪಕ್ಷದ ಇಂಧನ ಸಚಿವರಾಗಿದ್ದ ಹೆಚ್.ಡಿ.ರೇವಣ್ಣ ಅವರ ಅಧಿಕಾರದ ಅವಧಿಯಲ್ಲಿ ರಾಜ್ಯಾದ್ಯಂತ ವಿದ್ಯುತ್ ಕ್ರಾಂತಿ ಆಗಿದೆ.

ರಾಜ್ಯಾದ್ಯಂತ ಅಗತ್ಯ ಇರುವ ಎಲ್ಲಾ ಕಡೆ ವಿದ್ಯುತ್ ಸಬ್ ಸ್ಟೇಷನ್ಗಳನ್ನು ನಿರ್ಮಾಣ ಮಾಡಲಾಗಿದೆ ಇದರ ಪರಿಣಾಮವಾಗಿ ರಾಜ್ಯದಲ್ಲಿ ಬೇಸಿಗೆ ಸಮಯದಲ್ಲಿಯೂ ವಿದ್ಯುತ್ ಸಮಸ್ಯೆ ಕಂಡು ಬರುವುದಿಲ್ಲ ಇದಕ್ಕೆ ಮಾಜಿ ಸಿ.ಎಂ.ಕುಮಾರಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಕಾರಣಕರ್ತರು ಎಂದು ಶಾಸಕರಾದ ಹೆಚ್.ಟಿ.ಮಂಜು ಹೇಳಿದರು.

ಅವರು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮಡುವಿನಕೋಡಿ ಗ್ರಾಮದಲ್ಲಿ 66/11 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
2006ರಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರ ಇದ್ದ ಅವಧಿಯಲ್ಲಿ 2004ರಲ್ಲಿ ಹಾಗೂ 2018ರಲ್ಲಿ ಮೈತ್ರ ಸರ್ಕಾರದ ಇದ್ದ ಅವಧಿಯಲ್ಲಿ ರಾಜ್ಯದ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ. ಅದಕ್ಕೂ ಮುನ್ನ ರಾಜ್ಯ ಎಲ್ಲಾ ಗ್ರಾಮಗಳಲ್ಲಿಯೂ ವಿದ್ಯುತ್ ಸಮಸ್ಯೆ ವ್ಯಾಪಕವಾಗಿತ್ತು. ನಮ್ಮ ಜೆಡಿಎಸ್ ಅಧಿಕಾರ ನಡೆಸಿದ ಅವಧಿಯಲ್ಲಿ ನಮ್ಮ ಪಕ್ಷದ ಹೆಚ್.ಡಿ.ರೇವಣ್ಣ ಅವರು ಇಂಧನ ಸಚಿವರಾಗಿ ಕೆಲಸ ಮಾಡಿದ್ದು,

ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಪ್ರತಿ ತಾಲ್ಲೂಕಿನಲ್ಲಿ ಅಗತ್ಯ ಇರು ಕಡೆಗಳಲ್ಲಿ ಹತ್ತಾರು ಸಬ್ ಸ್ಟೇಷನ್ಗಳನ್ನು ನಿರ್ಮಾಣ ಮಾಡಿ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸಿದ ಕೀರ್ತಿ ನಮ್ಮ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ.

ಅದೇ ರೀತಿ ನಮ್ಮ ಹಲವಾರು ಭಾಗಗಳಲ್ಲಿ ಸಬ್ ಸ್ಟೇಷನ್ಗಳನ್ನು ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಸಮರ್ಪಕವಾಗಿ ರೈತರಿಗೆ, ಗ್ರಾಮಗಳಿಗೆ ಪೂರೈಕೆಯಾಗುತ್ತಿದೆ. ಇದರಿಂದ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆಯೇ ಇಲ್ಲದಂತಾಗಿದೆ. ಜನಸಾಮಾನ್ಯರಿಗೆ ರಸ್ತೆ, ವಿದ್ಯುತ್, ಕುಡಿಯುವ ನೀರು ಸರಿಯಾಗಿ ಮಾಡಿಕೊಟ್ಟರೆ ಉಳಿದ ಯಾವುದೇ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಿಕೊಡಬಹುದು ಎಂದರು.

ರಾಜ್ಯ ಸರ್ಕಾರವು ಕೃಷಿ ಪಂಪಸೆಟ್ಗಳಿಗೆ ಸ್ಮಾಟ್ ಮೀಟರ್ ಅಳವಡಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ ಇದನ್ನು ತಕ್ಷಣ ಕೈಬಿಡಬೇಕು. ರೈತರು ಪಂಪ್ಸೆಟ್ಗಳಿಗೆ ಕಷ್ಟ ಪಟ್ಟು ಬೋರ್ವೆಲ್ ಕೊರೆಸಿ ಹಾಕಿಸಿಕೊಂಡಿರುವ ವಿದ್ಯುತ್ ಸಂಪರ್ಕವನ್ನು ಅಕ್ರಮ-ಸಕ್ರಮ ಯೋಜನೆಯಡಿ ಸಕ್ರಮ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಮುಂದುವರೆಸಬೇಕು. ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ಪೂರೈಕೆ ಯೋಜನೆಯನ್ನು ಬಂದ್ ಮಾಡಬಾರದು. ಒಂದು ವೇಳೆ ಉಚಿತ ವಿದ್ಯುತ್ ಬಂದ್ ಮಾಡಿದರೆ ರೈತರು ಕೊಳವೆ ಬಾವಿ ಆಶ್ರಿತ ನೀರಾವರಿ ಯೋಜನೆ ಬಂದ್ ಆಗಲಿದೆ. ಆಗ ಆಹಾರ ಉತ್ಪಾದನೆ ಗಣನೀಯವಾಗಿ ಕುಂಠಿತಗೊಳ್ಳಲಿದೆ ಆಗ ಆಹಾರ ಸಮಸ್ಯೆ ಹೆಚ್ಚಾಗಲಿದೆ ಆಹಾರ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಲಿದೆ ಹಾಗಾಗಿ ಸರ್ಕಾರವು ಇದಕ್ಕೆ ಅವಕಾಶ ಮಾಡಿಕೊಡಬೇಕು. ಕೃಷಿ ಪಂಪ್ಸೆಟ್ ಆಧಾರಿತ ನೀರಾವರಿ ಯೋಜನೆಗೆ ಉಚಿತ ವಿದ್ಯುತ್ ಯೋಜನೆಯನ್ನು ಮುಂದುವರೆಸಬೇಕು. ಆಹಾರ ಉತ್ಪಾದನೆಯ ಸಮತೋಲನವನ್ನು ಕಾಪಾಡಬೇಕು ಎಂದು ರಾಜ್ಯ ಸರ್ಕಾರವನ್ನು ಶಾಸಕ ಹೆಚ್.ಟಿ.ಮಂಜು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಚೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪುಟ್ಟಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ಪ್ರೀತಿ ಭೈರನಾಯಕ್, ಉಪಾಧ್ಯಕ್ಷ ನಾಗರಾಜು, ಪಿಡಿಓ ಮಹೇಶ್, ತಾಲ್ಲೂಕು ಜೆಡಿಎಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ರತಿಮಹಾದೇವ್, ಗ್ರಾ.ಪಂ.ಸದಸ್ಯರಾದ ರವಿ, ಚಂದ್ರಹಾಸ, ಮುಖಂಡರಾದ ವಿಜಯ್ಕುಮಾರ್, ಎಂ.ಕೆ.ಸಂಜು, ನಾಗರಾಜು, ರವಿಕುಮಾರ್, ಗಂಗಾಧರ್, ಅನ್ವೇಶ್, ಸತೀಶ್, ಶಾಸಕರ ಆಪ್ತ ಸಹಾಯಕ ಧ್ರುವ ಮತ್ತಿತರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
