ಕೆ.ಆರ್.ಪೇಟೆ,ಮಾ.02: ತಾಲ್ಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಅನುಧಾನದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಹಾಗೂ ಸಾಸಲು ಗ್ರಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು ಗ್ರಾಮಗಳ ಸಮಗ್ರ ಅಭಿವೃದ್ಧಿ ಗ್ರಾಮ ಪಂಚಾಯಿತಿಗಳ ಪಾತ್ರ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಐಕನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ವರ್ಗವು ಉತ್ತಮವಾಗಿ ಕೆಲಸ ಮಾಡುತ್ತಿದೆ ವಿಶೇಷವಾಗಿ ಅಂಕನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಸಮಗ್ರ ಅಭಿವೃದ್ದಿ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಅವರು ವಿಶೇಷ ಕಾಳಜಿಯಿಂದಾಗಿ ಕಳೆದ 5ವರ್ಷಗಳ ಅವಧಿಯಲ್ಲಿ ಅಂಕನಹಳ್ಳಿ ಗ್ರಾಮದ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ಸಂಜೀವಿನಿ ಕಟ್ಟಡ, ಗ್ರಂಥಾಲಯ ಕಟ್ಟಡ, ಸರ್ಕಾರಿ ಶಾಲೆಯ ಅಭಿವೃದ್ಧಿ, ರಂಗಗೋಪುರ ಸೇರಿದಂತೆ ಗ್ರಾಮದ ಎಲ್ಲಾ ಬೀದಿಗಳಲ್ಲಿಯೂ ಬಾಕ್ಸ್ ಚರಂಡಿ ನಿರ್ಮಾಣ ಅರಳಿಕಟ್ಟೆ ಅಭಿವೃದ್ಧಿ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ನರೇಗಾ ಹಾಗೂ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಮಾಡಿರುವುದು ವಿಶೇಷವಾಗಿದೆ. ಇದೇ ರೀತಿ ಎಲ್ಲಾ ಗ್ರಾಮಗಳ ಗ್ರಾಮ ಪಂಚಾಯಿತಿ ಸದಸ್ಯರು ಮಾಡಿದರೆ ತಮ್ಮ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ನಿರ್ಮಿಸಬಹುದಾಗಿದೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು. ಅಂಕನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಸಹಕಾರ ನೀಡಿದ ಪಿಡಿಓ ವಿಜಯ್ಕುಮಾರ್ ಮತ್ತು ಇತರೆ ಸಿಬ್ಬಂದಿ ವರ್ಗದವರನ್ನು ಪ್ರಶಂಸಿದರು. ಅಲ್ಲದೆ ಅಂಕನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಉಚಿತವಾಗಿ ನಿವೇಶನ ನೀಡಿದ ಗ್ರಾಮದ ದಾನಿಗಳಾದ ಪಟೇಲ್ ದೇವಮ್ಮ ಈರೇಗೌಡ, ಸುಕನ್ಯ, ಎ.ಇ.ಕುಮಾರ್, ಸೃಷ್ಠಿ.ಡಾ.ದರ್ಶನ್, ಪರಿಸರ ಇಲಾಖೆಯ ವಿಜ್ಞಾನಿ ದರ್ಶನ್ ಹಾಗೂ ಇವರ ಕುಟುಂಬದವರನ್ನು ಶಾಸಕ ಹೆಚ್.ಟಿ.ಮಂಜು ಅವರು ಸನ್ಮಾನಿಸಿ ಗೌರವಿಸುವ ಮೂಲಕ ಅವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮಗಳ ಅಭಿವೃದ್ಧಿಯು ನಮ್ಮ ದೇಶದ ಅಭಿವೃದ್ಧಿಯ ಸಂಕೇತವಾಗಿವೆ. ಗ್ರಾಮಗಳ ಅಭಿವೃದ್ದಿಗೆ ನರೇಗಾ ಯೋಜನೆಯು ವರಧಾನವಾದ ಯೋಜನೆಯಾಗಿದೆ. ಇದಕ್ಕೆ ಅಂಕನಹಳ್ಳಿ ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿವೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಊರಿನ ಬಗ್ಗೆ ಕಾಳಜಿ ಇದ್ದರೆ ನರೇಗಾ ಮೂಲಕ ಗ್ರಾಮಗಳ ಸಮಗ್ರ ಅಭಿವೃದ್ದಿ ಸಾಧಿಸಬಹುದು. ಹಾಗಾಗಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ನರೇಗಾ ಯೋಜನೆಗಳನ್ನು ಕ್ರೀಯಾ ಯೋಜನೆಗೆ ಸೇರಿಸಿ ಗ್ರಾಮದ ಬಗ್ಗೆ ಕಾಳಜಿ ಇರುವ ಜಾಬ್ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರ ಮೂಲಕ ಕಾಮಗಾರಿಗಳನ್ನು ಮಾಡಿಸಬೇಕು. ಮೂಲಕ ಉದ್ಯೋಗಕ್ಕಾಗಿ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಬೇಕು ಎಂದು ಬಿ.ನಾಗೇಂದ್ರಕುಮಾರ್ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಆಡಳಿತ ಸಿಬ್ಬಂದಿ ವರ್ಗಕ್ಕೆ ಸಲಹೆ ನೀಡಿದರು.
ಗ್ರಾಮ ಪಂಚಾಯ್ತಿ ಆಡಳಿತಾಧಿಕಾರಿ ಮೋದೂರು ಶ್ರೀನಿವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಪರಿಸರ ಇಲಾಖೆಯ ವಿಜ್ಞಾನಿ ಡಾ.ದರ್ಶನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಸುಷ್ಮಾ, ಪಂಚಾಯತ್ ರಾಜ್ ಇಲಾಖೆಯ ಎಇಇ ಮಂಜುಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾವತಿಓಂಕಾರಗೌಡ, ಪಿಡಿಓ ವಿಜಯ್ಕುಮಾರ್, ಗ್ರಾ.ಪಂ.ಸದಸ್ಯ ಪ್ರವೀಣ್, ತಾ.ಪಂ.ಮಾಜಿ ಸದಸ್ಯರಾದ ಕೃಷ್ಣೇಗೌಡ, ಬಿ.ರಾಮೇಗೌಡ, ಶೇಖರ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
