ಕೆ.ಆರ್.ಪೇಟೆ,ನ.21: ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ನ್ಯಾಯಾಲಯದ ಮುಂಭಾಗದಿಂದ ಟಿ.ಬಿ.ಸರ್ಕಲ್ ಮಾರ್ಗವಾಗಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್, ವಾಕಿಂಗ್ ಪಾಥ್, ರಸ್ತೆ ಮಧ್ಯದಲ್ಲಿ ಡಿವೈಡರ್ ನಿರ್ಮಾಣ ಕಾಮಗಾರಿಗೆ ಶಾಸಕ ಹೆಚ್.ಟಿ.ಮಂಜು ಭೂಮಿ ಪೂಜೆ ನೆರವೇರಿಸಿದರು.
ಸುಮಾರು ನಾಲ್ಕುವರೆ ಕೋಟಿ ವೆಚ್ಚದಲ್ಲಿ ಕೆಶಿಪ್ ಅನುಧಾನದಲ್ಲಿ ನಿರ್ಮಿಸಲಾಗುತ್ತಿರುವ ಪಟ್ಟಣ ವ್ಯಾಪ್ತಿಯ 1ಕಿ.ಮೀ ವಿಸ್ತೀರ್ಣದಲ್ಲಿ ಮೈಸೂರು-ಚನ್ನರಾಯಪಟ್ಟಣ ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್, ವಾಕಿಂಗ್ ಪಾಥ್, ರಸ್ತೆ ಮಧ್ಯದಲ್ಲಿ ಡಿವೈಡರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕರ್ನಾಟಕ ಕೆಶಿಪ್ ಇಲಾಖೆಯ ವತಿಯಿಂದ ಈ ಕಾಮಗಾರಿಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ಕೈಗೊಳ್ಳುವ ಮೂಲಕ ಪಟ್ಟಣದ ಅಂದ-ಚೆಂದವನ್ನು ಹೆಚ್ಚಿಸಬೇಕು.

ಯಾವುದೇ ಕಾರಣಕ್ಕೂ ಕಳಫೆ ಕಾಮಗಾರಿಗೆ ಅವಕಾಶ ನೀಡಬಾರದು. ಸದರಿ ರಸ್ತೆಯಲ್ಲಿ ಪ್ರಮುಖವಾಗಿ ನ್ಯಾಯಾಧೀಶರು, ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಡಿಪ್ಲೋಮೋ ವಿದ್ಯಾರ್ಥಿಗಳು ಒಡಾಡುವ ಜಾಗವಾಗಿದೆ ಹಾಗಾಗಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಶಾಸಕರು ಸಲಹೆ ನೀಡಿದರು. ರಾಜ್ಯ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂಧಿಸಿದರೆ ಇಡೀ ಪಟ್ಟಣದ ಅಂದವನ್ನು ಇದೇ ಮಾದರಿಯಲ್ಲಿ ಹೆಚ್ಚಿನ ಪಟ್ಟಣಕ್ಕೆ ಹೈಟೆಕ್ ಸ್ಪರ್ಷ ನೀಡುತ್ತೇನೆ ಆದರೆ ರಾಜ್ಯ ಸರ್ಕಾರವು ವಿರೋಧ ಪಕ್ಷದ ಶಾಸಕ ಎಂದು ನಮಗೆ ಸೂಕ್ತ ಅನುಧಾನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಬರುವ ಪುರಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಎಲ್ಲಾ 23ವಾರ್ಡುಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡಲಾಗುವುದು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಯಾವುದೇ ವಾರ್ಡುಗಳಲ್ಲಿ ಸರಿಯಾದ ರಸ್ತೆಗಳಲ್ಲಿ, ಚರಂಡಿ ವ್ಯವಸ್ಥೆ ಇಲ್ಲ. ಬಡವರಿಗೆ ಮೀಸಲಾಗಿರುವ ಟಿ.ಬಿ.ಬಡಾವಣೆ ಹಾಗೂ ಸರ್ವೆ ನಂ.287ನಲ್ಲಿರುವ ನಿವೇಶನಗಳನ್ನು ನೀಡಲು ಸಾಧ್ಯವಾಗಿಲ್ಲ. ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಇಸ್ವತ್ತು ನೀಡುವ ಸಮಸ್ಯೆಯನ್ನು ಸರ್ಕಾರವು ಬಗೆಹರಿಸಿಕೊಡಬೇಕು. ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ.ಎನ್.ಕೆಂಗೇಗೌಡರ ಕಾಲದಲ್ಲಿ ವಿತರಿಸಲಾದ ನಿವೇಶನಗಳಿಗೆ ಮಾತ್ರ ಪುರಸಭೆಯು ಇಸ್ವತ್ತು ಮಾಡಿಕೊಡುತ್ತಿದೆ.

ಅದೇ ರೀತಿ ಪುರಸಭೆಯ ಮಾಜಿ ಅಧ್ಯಕ್ಷರಾದ ಕೆ.ಬಿ.ಚಂದ್ರಶೇಖರ್, ನೂರುಲ್ಲಾಖಾನ್, ಅಮೀರ್ಜಾನ್ ಕಾಲದಲ್ಲಿ ನೀಡಲಾಗಿರುವ ನಿವೇಶನಗಳಿಗೆ ಇಸ್ವತ್ತು ಖಾತೆ ಮಾಡಿಕೊಡುವುದಕ್ಕೆ ಹಲವು ನಿರ್ಬಂಧವನ್ನು ಹೇರಲಾಗಿದೆ ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ಮಧ್ಯ ಪ್ರವೇಶ ಮಾಡಿ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾಬಣೆಯ ಹಾಗೂ ಮುತ್ತುರಾಯಸ್ವಾಮಿ ಬಡಾವಣೆಯ ನಿವೇಶನಗಳ ಇಸ್ವತ್ತು ಖಾತೆ ಮಾಡಿಕೊಳ್ಳಲು ಇರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅವರು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಪುರಸಭೆಯ ಮಾಜಿ ಸದಸ್ಯರಾದ ಕೆ.ಆರ್.ಹೇಮಂತಕುಮಾರ್, ಕೋಳಿ ನಾಗರಾಜು, ಇಂದ್ರಾಣಿವಿಶ್ವನಾಥ್, ಟೈಲರ್ ದಿನೇಶ್, ಮುಖಂಡರಾದ ಪಿಕೆಜಿ ಮಹೇಶ್, ಚಿಕ್ಕೋಸಹಳ್ಳಿ ಸುರೇಶ್, ಅಗ್ರಹಾರಬಾಚಹಳ್ಳಿ ಲೋಕೇಶ್, ಗಂಗೇಗೌಡ, ಕೆ.ಎಲ್.ಮಹೇಶ್, ಪ್ರಥಮ ದರ್ಜೆ ಗುತ್ತಿಗೆದಾರ ನಾಗಮಂಗಲ ಅಂಬರೀಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಹಾಗೂ ಕೆಶಿಪ್ ಅಧಿಕಾರಿಗಳು ಸೇರಿದಂತೆ ಪುರಸಭಾ ವ್ಯಾಪ್ತಿಯ ಹೊಸಹೊಳಲು ಮತ್ತು ಕೆ.ಆರ್.ಪೇಟೆ ಅವಳಿ ಪಟ್ಟಣಗಳ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
