ಕೆ.ಆರ್.ಪೇಟೆ, ಜ.30: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡರಾದ ಬಿ.ಸಿ. ಅಶೋಕ್ ಮತ್ತು ಉಪಾಧ್ಯಕ್ಷರಾಗಿ ನರಸಿಂಹಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ. ಅಶೋಕ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹಶೆಟ್ಟಿ ಅವರನ್ನು ಹೊರತುಪಡಿಸಿ ಇತರ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಮೇಶ್ ಹಾಗೂ ಪ್ರಥಮ ದರ್ಜೆ (ವಿದ್ಯುತ್ ಮತ್ತು ಸಿವಿಲ್) ಗುತ್ತಿಗೆದಾರರಾದ ಬಿ.ಎಸ್. ರಾಮು ಅವರ ನೇತೃತ್ವದಲ್ಲಿ ನಡೆದ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರು. ಚುನಾವಣಾಧಿಕಾರಿಯಾಗಿ ವಾಸಿಂಪಾಷಾ ಕಾರ್ಯನಿರ್ವಹಿಸಿದರು.
ಚುನಾವಣೆಯ ಘೋಷಣೆ ಹೊರಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಬಿ.ಸಿ. ಅಶೋಕ್ ಮತ್ತು ಉಪಾಧ್ಯಕ್ಷ ನರಸಿಂಹಶೆಟ್ಟಿ ಅವರನ್ನು ಕಾಂಗ್ರೆಸ್ ಮುಖಂಡರಾದ ಬಲ್ಲೇನಹಳ್ಳಿ ರಮೇಶ್, ಬಿ.ಎಸ್. ರಾಮು ಹಾಗೂ ಸಂಘದ ನಿರ್ದೇಶಕರಾದ ಆಡುನಿಂಗಣ್ಣನ ಬಿ.ಆರ್. ಮಹೇಶ್, ನಿಂಗೇಗೌಡ, ಉಮಾಶಂಕರ್, ಬಿ.ಎಲ್. ಶಿಲ್ಪಪುಟ್ಟರಾಜು, ಸಾವಿತ್ರಮ್ಮ ಕೃಷ್ಣೇಗೌಡ, ಬಿ.ಎಸ್. ಪುಟ್ಟರಾಜು ಸೇರಿದಂತೆ ಹಲವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಸಂಘದ ನಿರ್ದೇಶಕರಾದ ಬಲ್ಲೇನಹಳ್ಳಿ ಬಿ.ಸಿ. ರಮೇಶ್, “ನೂತನ ಆಡಳಿತ ಮಂಡಳಿ ಪಕ್ಷಬೇದ ಮರೆತು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಹಾಲಿನ ಗುಣಮಟ್ಟ ಕಾಪಾಡಿ, ಹಾಲು ಉತ್ಪಾದಕರಿಗೆ ಸಕಾಲದಲ್ಲಿ ಹಣ ಜಮಾ ಮಾಡಬೇಕು. ಗುಣಮಟ್ಟದ ಪಶು ಆಹಾರವನ್ನು ಮಾತ್ರ ವಿತರಿಸಿ, ಕಳಪೆ ಹಾಲನ್ನು ಮುಲಾಜಿಲ್ಲದೆ ತಿರಸ್ಕರಿಸಬೇಕು” ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಹಾಗೂ ಗುತ್ತಿಗೆದಾರ ಬಿ.ಎಸ್. ರಾಮು ಮಾತನಾಡಿ, “ಹಾಲು ಉತ್ಪಾದಕರ ಸಹಕಾರ ಸಂಘವು ರೈತರ ಜೀವನಾಡಿ. ನೂರಾರು ಕುಟುಂಬಗಳಿಗೆ ಆಸರೆಯಾಗಿರುವ ಈ ಡೇರಿಯ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಗ್ರಾಮಕ್ಕೆ ಒಳ್ಳೆಯ ಹೆಸರು ತರಬೇಕು” ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಗ್ರಾಮದ ಹಿರಿಯರು, ಮಾಜಿ ಅಧ್ಯಕ್ಷೆ ವಿನೋದಮ್ಮ, ವಿವಿಧ ಮುಖಂಡರು ಮತ್ತು ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ನೂತನ ಅಧ್ಯಕ್ಷ–ಉಪಾಧ್ಯಕ್ಷರನ್ನು ಅಭಿನಂದಿಸಿದರು.
– ಶ್ರೀನಿವಾಸ್ ಆರ್.
