ಕೆ.ಆರ್.ಪೇಟೆ: ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಪೋಷಕರ ಸಭೆ ಹಾಗೂ ಶಾರದಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಆದಿಚುಂಚನಗಿರಿ ಹೇಮಗಿರಿ ಶಾಕಾಮಠದ ಕಾರ್ಯದರ್ಶಿಗಳಾದ ಡಾ. ಜಿ ಎನ್ ರಾಮಕೃಷ್ಣೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಬೇಕು ಈ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣ ಹೊಂದಬೇಕು. ಇದು ಹೇಳಿ ಕೇಳಿ ಸ್ಪರ್ಧಾತ್ಮಕ ಯುಗ ಕಡಿಮೆ ಅಂಕ ಪಡೆದು ಉತ್ತೀರ್ಣ ಹೊಂದಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಹೆಚ್ಚು ಅಂಕಗಳನ್ನು ಪಡೆದು ವೈದ್ಯಕೀಯ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಪಡೆದು ಉನ್ನತ ಸ್ಥಾನಮಾನವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕಿನ ಹಿರಿಯ ಸಾಹಿತಿಗಳು ಹಾಗೂ ಉಪನ್ಯಾಸಕರಾದ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ ಮಕ್ಕಳ ಗುಣಮಟ್ಟದ ಶಿಕ್ಷಣದಲ್ಲಿ ಪೋಷಕರ ಪಾತ್ರವು ಅಪಾರವಾಗಿರುತ್ತದೆ.ಪೋಷಕರು ಪ್ರತಿನಿತ್ಯ ತಮ್ಮ ಮಕ್ಕಳ ಓದು ಯಾವ ರೀತಿ ಇದೆ ಇಂದು ಶಿಕ್ಷಕರು ಯಾವ ಪಾಠವನ್ನ ಹೇಳಿಕೊಟ್ಟರು ಎಂಬುದನ್ನ ಗಮನಹರಿಸಬೇಕು ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಮೊಬೈಲ್ ನಿಂದ ಮಕ್ಕಳು ಓದುವುದನ್ನು ಮರೆಯುತ್ತಿದ್ದಾರೆ. ಹಾಗಾಗಿ ಪೋಷಕರು ಮಕ್ಕಳ ಅತಿ ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಈ ಮೂಲಕ ಅವರ ಭವಿಷ್ಯದ ಮುನ್ನುಡಿಯನ್ನು ಪೋಷಕರೇ ಬರೆಯಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಜಿ.ಪಿ.ರಾಜು, ಎಸ್.ರವಿ, ಹೊನ್ನೇನಹಳ್ಳಿ ವಿ.ಲೋಕೇಶ್ ಸೇರಿದಂತೆ ಬಿಜಿಎಸ್ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ನೂರಾರು ಪೋಷಕರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
