ಕೆ.ಆರ್.ಪೇಟೆ,ಮಾ.18: ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಪುರಸಭೆಯಿಂದ ಅಧಿಕೃತ ಲೈಸೆನ್ಸ್ ಪಡೆದು ಹಾಕಿರುವ ಯುಗಾದಿ ಹಬ್ಬದ ಶುಭಾಶಯ ಕೋರಿ ಹಾಕಿದ್ದ ಪ್ಲೆಕ್ಸ್ ಅನ್ನು ಕಿತ್ತುಹಾಕಿ ಅದೇ ಜಾಗಕ್ಕೆ ಯಾವುದೇ ಲೈಸೆನ್ಸ್ ಪಡೆಯದೇ ಬಿಜೆಪಿ ಮುಖಂಡರಾದ ಮಾಜಿ ಸಚಿವ ನಾರಾಯಣಗೌಡರ ಬೆಂಬಲಿಗರು ಯುಗಾದಿ ಹಬ್ಬದ ಶುಭಾಶಯ ಕೋರಿ ಪ್ಲೆಕ್ಸ್ ಹಾಕಿರುವುದನ್ನು ಖಂಡಿಸಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅದೇ ವೇಳೆ ಅಲ್ಲಿಗೆ ಬಂದ ಮಾಜಿ ಸಚಿವ ನಾರಾಯಣಗೌಡರ ಬೆಂಬಲಿಗರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಬ್ಯಾನರ್ ಕಿತ್ತು ಹಾಕಿರುವ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಯಿತು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್, ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮೆಣಸ ಮಹಾದೇವೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್, ಜಿಲ್ಲಾ ಜೆಡಿಎಸ್ ಕಾರ್ಯಕಾರಿಣಿ ಸದಸ್ಯ ವಿ.ಎಸ್.ಧನಂಜಯಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ದಿಲೀಪ್ಕುಮಾರ್, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಮಹಾದೇವೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಮತ್ತು ಮಾಜಿ ಸಚಿವ ನಾರಾಯಣಗೌಡರ ಆಪ್ತ ಸಹಾಯಕ ದಯಾನಂದ್, ಪುರಸಭಾ ಮಾಜಿ ಸದಸ್ಯ ಬಸ್ ಸಂತೋಷ್ಕುಮಾರ್, ಹೆಚ್.ಆರ್.ಲೋಕೇಶ್, ಕೈಗೋನಹಳ್ಳಿ ಕುಮಾರ್, ಬೊಪ್ಪನಹಳ್ಳಿ ಸುನಿಲ್, ಕರೋಠಿ ಅನಿಲ್ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರ ನಡುವೆ ನಡುವೆ ನೂಕಾಟ, ತಳ್ಳಾಟ ಹಾಗೂ ಪರಸ್ಪರ ಮಾತಿನ ಚಕಮಕಿ ನಡೆಯಿತು. ಘರ್ಷಣೆ ನಡೆಯುತ್ತಿರುವ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ಕುಮಾರ್ ನೇತೃತ್ವದ ಪೊಲೀಸರ ತಂಡವು ಎರಡೂ ಗುಂಪುಗಳನ್ನು ಸಮಾಧಾನ ಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ಆದರೆ ವಾಗ್ವಾದ ತಳ್ಳಾಟ-ನೂಕಾಟ, ತಹಬದಿಗೆ ಬಾರದ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ಮಾಡಿ ಎರಡೂ ಗುಂಪುಗಳನ್ನು ಚದುರಿಸಿದರು.

ಆದರೂ ಸಹ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾವು ನಮ್ಮ ಪಕ್ಷದ ವತಿಯಿಂದ ಕಾನೂನುಬದ್ದವಾಗಿ ಪುರಸಭೆಯಿಂದ ಲೈಸೆನ್ಸ್ ಪಡೆದು ಯುಗಾದಿ ಹಬ್ಬದ ಬ್ಯಾನರ್ ಅಳವಡಿಸಿದ್ದೇವೆ. ಆದರೆ ಇಂದು ಏಕಾಏಕಿ ನಮ್ಮ ಬ್ಯಾನರ್ ಹಾಕಿರುವ ಜಾಗದಲ್ಲಿಯೇ ನಾರಾಯಣಗೌಡರ ಬೆಂಬಲಿಗರು ತಮ್ಮ ಬಿಜೆಪಿ ಪಕ್ಷದ ಬ್ಯಾನರ್ ಹಾಕಿದ್ದು ಕೂಡಲೇ ಅದನ್ನು ತೆರವುಗೊಳಿಸಬೇಕು. ನಮ್ಮ ಬ್ಯಾನರ್ ಅನ್ನು ಎಂದಿನಂತೆ ಹಾಕಬೇಕು ಎಂದು ಪಟ್ಟು ಹಿಡಿದರು. ಆಗ ಪೊಲೀಸರು ಪುರಸಭಾ ಮುಖ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅಧಿಕೃತವಾಗಿ ಯಾರು ಪರವಾನಗಿ ಪಡೆದಿದ್ದಾರೆ ಅವರ ಬ್ಯಾನರ್ ಉಳಿಸುತ್ತೇವೆ ಬೇರೆ ಬ್ಯಾನರ್ ತೆರವುಗೊಳಿಸುತ್ತೇವೆ. ದಯಮಾಡಿ ಎರಡೂ ಗುಂಪುಗಳು ಗಲಾಟೆಗೆ ಆಸ್ಪದ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಕೊನೆಗೆ ಡಿ.ವೈ.ಎಸ್.ಪಿ, ಚೆಲುವರಾಜು, ಪುರಸಭಾ ಮುಖ್ಯಾಧಿಕಾರಿ ಅಶೋಕ್ ಅವರು ಸ್ಥಳಕ್ಕೆ ಬಂದು ಪುರಸಭೆಯಲ್ಲಿದ್ದ ಹಾಗೂ ದಾಖಲೆಗಳನ್ನು ತಂದು ಪೊಲೀಸರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಅಧಿಕೃತವಾಗಿ ಲೈಸೆನ್ಸ್ ಪಡೆದು ಹಾಕಿದ್ದ ಜೆಡಿಎಸ್ ಪಕ್ಷದ ಬ್ಯಾನರ್ ಉಳಿಸಿ, ಮಾಜಿ ಸಚಿವ ನಾರಾಯಣಗೌಡರ ಬೆಂಬಲಿಗರು ಹಾಕಿದ್ದ ಬಿಜೆಪಿ ಪಕ್ಷದ್ ಬ್ಯಾನರ್ ಅನ್ನು ತೆರವು ಗೊಳಿಸಿದರು. ಆಗ ಎರಡೂ ಪಕ್ಷಗಳ ಕಾರ್ಯಕರ್ತರು ಸ್ಥಳದಿಂದ ನಿರ್ಗಮಿಸಿದರು. ಪರಿಸ್ಥಿತಿ ತಿಳಿಯಾದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಪ್ಲೆಕ್ಸ್ ಹಾಕಿರುವ ಜಾಗದಲ್ಲಿ ಪೊಲೀಸ್ ಭದ್ರತೆ ಒದಗಿಸಿದ್ದಾರೆ.
– ಶ್ರೀನಿವಾಸ್ ಆರ್.
