ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಭಾರತ ದೇಶಕ್ಕೆ ಬಲಿಷ್ಠ ಸರ್ವಶ್ರೇಷ್ಠ ಸಂವಿಧಾನವನ್ನು ಬರೆದುಕೊಡುವ ಮೂಲಕ ದೇಶದ ಎಲ್ಲಾ ಜನರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಟ್ಟ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏ.14ರಂದು ಅದ್ದೂರಿಯಾಗಿ ನಡೆಸಲು ತಾಲ್ಲೂಕು ಆಡಳಿತವು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು.
ಪುರಸಭಾ ಸದಸ್ಯರಾದ ಡಿ.ಪ್ರೇಮ್ಕುಮಾರ್ ಸಭೆಯಲ್ಲಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಕಾಟಾಚಾರಕ್ಕೆ ಆಚರಣೆ ಮಾಡಬಾರದು. ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಚರಣೆ ಮಾಡಬೇಕು. ಕೇವಲ ದಲಿತ ಪರ ಸಂಘಟನೆಗಳು ಮಾತ್ರ ಭಾಗವಹಿಸಿ ಆಚರಿಸುವುದು ಸಂವಿಧಾನ ಶಿಲ್ಪಿಗೆ ಮಾಡುವ ಅವಮಾನವಾಗಲಿದೆ. ಹಾಗಾಗಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಅವರು ಸುತ್ತೋಲೆ ಹೊರಡಿಸಬೇಕು. ಯಾವ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗುತ್ತಾರೋ ಅವರಿಗೆ ನೋಟೀಸ್ ಜಾರಿ ಮಾಡಿ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದು ಪ್ರೇಮ್ಕುಮಾರ್ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.
ಏ.14ರಂದು ಬೆಳಿಗ್ಗೆ 10ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ವೇದಿಕೆಯ ವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಜಾನಪದ ಕಲಾತಂಡಗಳ ಮೆರೆವಣಿಗೆಯೊಂದಿಗೆ ಬೆಳ್ಳಿ ಸಾರೋಟಿನಲ್ಲಿ ಗೌರವಯುತವಾಗಿ ಮೆರವಣಿಗೆ ಮಾಡಿ ಗೌರವ ಸಲ್ಲಿಸಲು ನಿರ್ಧರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಅತಿಥಿಗಳಿಗೆ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಸಾರುವ ಪುಸ್ತಕಗಳನ್ನು ಹಾಗೂ ಸಸಿಗಳನ್ನು ಕಾರ್ಯಕ್ರಮದ ವೇಳೆ ವಿತರಣೆ ಮಾಡಬೇಕು ಎಂದು ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್ ಸಲಹೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ವೈ.ಕೆ.ತಿಮ್ಮೇಗೌಡ, ಪುರಸಭಾ ಮುಖ್ಯಾಧಿಕಾರಿ ಅಶೋಕ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ದಿವಾಕರ್, ಪೊಲೀಸ್ ವೃತ್ತ ನಿರೀಕ್ಷಕ ಸುನಿಲ್ಕುಮಾರ್, ಬಿ.ಸಿ.ಎಂ.ಅಧಿಕಾರಿ ಎಂ.ವಿ.ವೆಂಕಟೇಶ್, ಕಾವೇರಿ ನೀರಾವರಿ ನಿಗಮದ ಎಇಇ ಆನಂದ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜ್, ಪುರಸಭಾ ಸದಸ್ಯ ಬಿ.ಜಿ.ಗಿರೀಶ್, ಪ್ರೇಮ್ಕುಮಾರ್, ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜಯ್ಯ, ದರಖಾಸ್ತು ಕಮಿಟಿ ಸದಸ್ಯ ಬಸ್ತಿ ರಂಗಪ್ಪ, ದಲಿತ ಮುಖಂಡರಾದ ಸೋಮಸುಂದರ್, ಚೌಡೇನಹಳ್ಳಿ ದೇವರಾಜು, ಎನ್.ಜೆ.ಮಂಜು, ಲಕ್ಷ್ಮೀಪುರ ರಂಗಸ್ವಾಮಿ, ಕಿಕ್ಕೇರಿ ರಾಜಣ್ಣ, ಹೊಸಹೊಳಲು ಪುಟ್ಟರಾಜು, ಬಂಡಿಹೊಳೆ ರಮೇಶ್, ಕೃಷ್ಣಮೂರ್ತಿ, ಜಿಡಿಎಸ್ ಗಂಗಾಧರ್, ಮುದುಗೆರೆ ಮಹೇಂದ್ರ, ಸುರೇಶ್ ಹರಿಜನ, ಬಸವೇಶ್, ಕಳ್ಳನಕೆರೆ ಶಂಕರ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತಿತರರು ಉಪಸ್ಥಿತರಿದ್ದರು.
