ಕೆ.ಆರ್.ಪೇಟೆ,ಮಾ.28: ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯು ಶಾಸಕರಾದ ಹೆಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ದೇಶದ ಹಸಿರು ಕ್ರಾಂತಿಯ ಹರಿಕಾರರು, ನಮ್ಮ ದೇಶದಲ್ಲಿ ಅಂಬೇಡ್ಕರ್ ನಂತರ ದಲಿತರ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ ಡಾ.ಬಾಬು ಜಗಜೀವನರಾಂ ಅವರ ಜಯಂತಿಯನ್ನು ಏ.5ರಂದು ಅದ್ದೂರಿಯಾಗಿ ನಡೆಸಲು ತಾಲ್ಲೂಕು ಆಡಳಿತವು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಸರ್ವ ಸಿದ್ದತೆ ಮಾಡಿಕೊಳ್ಳಬೇಕು. ಡಾ.ಬಾಬು ಜಗಜೀವರಾಂ ಅವರು ದೇಶದಲ್ಲಿ ಆಹಾರಕ್ಕೆ ಭಾರಿ ಕೊರತೆ ಉಂಟಾದ ವೇಳೆ ದೇಶದ ಕೃಷಿ ಮಂತ್ರಿಗಳಾಗಿದ್ದರು ಆಗ ದೇಶದಲ್ಲಿ ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸುವ ಮೂಲಕ ದೇಶಾದ್ಯಂತ ಹಸಿರು ಕ್ರಾಂತಿಯನ್ನು ಮಾಡಿ ದೇಶದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಿದರು.
ಈ ಮೂಲಕ ದೇಶದ ಆಹಾರ ಭದ್ರತೆಗೆ ಕಾರಣಕರ್ತರಾದರು, ಹಾಗಾಗಿ ಇಂತಹ ಮೇರು ವ್ಯಕ್ತಿತ್ವದ ಡಾ.ಬಾಬು ಜಗಜೀವನರಾಂ ರವರ ಜಯಂತಿಯ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ವೇದಿಕೆಯ ವರೆಗೆ ಡಾ.ಬಾಬುಜಗಜೀವನರಾಂ ಅವರ ಭಾವಚಿತ್ರವನ್ನು ಜಾನಪದ ಕಲಾತಂಡಗಳ ಮೆರೆವಣಿಗೆಯೊಂದಿಗೆ ಬೆಳ್ಳಿ ಸಾರೋಟಿನಲ್ಲಿ ಗೌರವಯುತವಾಗಿ ಮೆರವಣಿಗೆ ಮಾಡಿ ಗೌರವ ಸಲ್ಲಿಸಬೇಕು. ಡಾ.ಬಾಬು ಜಗಜೀವರಾಂ ಅವರ ಜೀವನ ಸಾಧನೆಗಳನ್ನು ಸಾರುವ ಪುಸ್ತಕಗಳನ್ನು ಹಾಗೂ ಕರಪತ್ರಗಳನ್ನು ಕಾರ್ಯಕ್ರಮದ ವೇಳೆ ಅತಿಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹಂಚಿಕೆ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅವರು ತಾಲ್ಲೂಕು ಆಡಳಿತಕ್ಕೆ ಸಲಹೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ವೈ.ಕೆ.ತಿಮ್ಮೇಗೌಡ, ಪುರಸಭಾ ಮುಖ್ಯಾಧಿಕಾರಿ ಅಶೋಕ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಪೊಲೀಸ್ ವೃತ್ತ ನಿರೀಕ್ಷಕ ಸುನಿಲ್ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ಆರ್.ಕೆ.ಕುಮಾರ್, ಜಿಲ್ಲಾ ಡಾ.ಬಾಬು ಜಗಜೀವನರಾಂ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಬಿ.ಬಿ.ಕಾವಲು ಕಾಂತರಾಜು, ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ಎಂ.ಪುಟ್ಟರಾಜು, ತಾಲ್ಲೂಕು ಮಾದಾರ ಮಹಾಸಭಾ ಅಧ್ಯಕ್ಷ ರಾಯಸಮುದ್ರ ಆರ್.ಟಿ.ಉಮೇಶ್, ನಿವೃತ್ತ ಶಿಕ್ಷಕ ಶಿವಣ್ಣ, ನಾರ್ಗೋನಹಳ್ಳಿ ಸುಧಾಕರ್, ಗಂಗೇನಹಳ್ಳಿ ಕೃಷ್ಣಯ್ಯ, ಆಲೇನಹಳ್ಳಿ ಚೆಲುವರಾಜು, ಡೊಂಕಯ್ಯ, ಪಾಪಯ್ಯ, ಕೃಷ್ಣ, ಸುರೇಶ್ ಜೈನ್ನಹಳ್ಳಿ, ಧರ್ಮರಾಜ್ ಜೊತ್ತನಪುರ, ಕೃಷ್ಣಯ್ಯ, ಹರೀನಹಳ್ಳಿ ಪೂಜಾರಿ ಯಾಲಕ್ಕಯ್ಯ, ರಾಯಸಮುದ್ರ ಧನಂಜಯ, ಗೋಪಿನಾಥ್, ವೀಣಾ, ಹೊಸಹೊಳಲು ಸ್ವಾಮಿ ಸೇರಿದಂತೆ ಸಮಾಜದ ಹಲವು ಮುಖಂಡರು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:28.ಕೆ.ಆರ್.ಪಿ-05: ಕೆ.ಆರ್.ಪೇಟೆ: ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯ ಪೂರ್ವಭಾವಿ ಸಭೆಯು ಶಾಸಕರಾದ ಹೆಚ್.ಟಿ.ಮಂಜು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
– ಶ್ರೀನಿವಾಸ್ ಆರ್.
