ಕೆ.ಆರ್.ಪೇಟೆ,ಅ.29: ರಾಮಾಯಣ-ಮಹಾಭಾರತ(ಕುರುಕ್ಷೇತ್ರ) ಪೌರಾಣಿಕ ನಾಟಕಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬವಾಗಿದ್ದು, ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಸಂದೇಶವನ್ನು ಸಮಾಜಕ್ಕೆ ನೀಡುವ ಜೊತೆಗೆ ಒಬ್ಬ ಮನುಷ್ಯ ಹೇಗೆ ಜೀವನ ನಡೆಸಬೇಕು ಎಂಬ ಸಂದೇಶವನ್ನು ನಾಟಕಗಳಲ್ಲಿ ಬರುವ ಪಾತ್ರಗಳು ತಿಳಿಸಿಕೊಡುತ್ತವೆ ಎಂದು ಶಾಸಕ ಹೆಚ್.ಟಿ. ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಡಾ.ರಾಜಕುಮಾರ್ ಕಲಾ ಸಂಘವು ಆಯೋಜಿಸಿರುವ 21 ದಿನಗಳ ಪೌರಾಣಿಕ ನಾಟಕೋತ್ಸವ ಕಾರ್ಯಕ್ರಮದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಹಿರಿಯ ರಂಗಭೂಮಿ ಕಲಾವಿದರಾದ ಶ್ರೀರಾಮಚಂದ್ರ ಪಾತ್ರಧಾರಿ ಚಟ್ಟೇನಹಳ್ಳಿ ನಾಗರಾಜು ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಪೌರಾಣಿಕ ನಾಟಕಗಳು ನಮ್ಮ ನಿಜ ಜೀವನದ ಪ್ರತಿಬಿಂಬವಾಗಿದೆ.ನಮ್ಮ ಸುತ್ತಮುತ್ತಲಿನಲ್ಲಿ ನಮ್ಮ ಮದ್ಯದಲ್ಲಿಯೇ ಇರುವ ಕುತಂತ್ರಿಗಳ ಬಗ್ಗೆ ಎಚ್ಚರವಾಗಿರುವಂತೆ ಜಾಗೃತಿಯನ್ನು ಮೂಡಿಸುವ ಪಾತ್ರಗಳು ಪೌರಾಣಿಕ ನಾಟಕದಲ್ಲಿ ನಮ್ಮ ಕಣ್ಣು ಮುಂದೆ ಬರುತ್ತವೆ. ಶ್ರೀ ಕೃಷ್ಣ ಪರಮಾತ್ಮನ ಚಾಣಕ್ಯಶೀಲತೆ, ಧರ್ಮರಾಯನ ಸತ್ಯ ಸಂದತೆ, ಕರ್ಣನ ದಾನ ಶೂರತ್ವ, ಶಕುನಿ ಯ ಕುತಂತ್ರ ಹಾಗೂ ದುರ್ಯೋಧನನಂತೆ ಛಲ ಹೊಂದಿರುವ ಜನರು ನಮ್ಮ ನಡುವೆಯೇ ಜೀವನ ನಡೆಸುತ್ತಿದ್ದಾರೆ. ಅಸತ್ಯ ಅಧರ್ಮಕ್ಕೆ ತಾತ್ಕಾಲಿಕವಾಗಿ ಗೆಲುವು ಸಿಕ್ಕರೂ ಅಂತಿಮವಾಗಿ ವಿಜಯದ ನಗೆ ಬೀರುವುದು ನ್ಯಾಯ, ನೀತಿ ಹಾಗೂ ಧರ್ಮವಾದ್ದರಿಂದ ನಾವು ಸಾಧನೆ ಮಾಡಲು ಕಷ್ಟವಾದರೂ ಸತ್ಯದ ಮಾರ್ಗದಲ್ಲಿಯೇ ನಡೆಯುವ ಮೂಲಕ ಸಾಧನೆ ಮಾಡಬೇಕು ಎಂಬ ಸಂದೇಶವನ್ನು ಪೌರಾಣಿಕ ನಾಟಕಗಳು ಇಂದು ನಮಗೆ ನೀಡಿ ನಮ್ಮನ್ನು ಜಾಗೃತಗೊಳಿಸಿ ಸದಾ ಎಚ್ಚರವಾಗಿರುವಂತೆ ಪ್ರೇರೇಪಿಸಿ ಮುನ್ನಡೆಸುತ್ತಿವೆ ಎಂದು ತಿಳಿಸಿದ ಶಾಸಕ ಮಂಜು ಕೃಷ್ಣರಾಜಪೇಟೆ ತಾಲೂಕು ಪೌರಾಣಿಕ ನಾಟಕಗಳ ಪ್ರದರ್ಶನ ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ತವರೂ ರಾಗಿದೆ.
ಇಂದಿನ ಜಾಗತಿಕ ಜಗತ್ತಿನ ತಂತ್ರಜ್ಞಾನದ ಯುಗದಲ್ಲಿಯೂ ಸಾವಿರಾರು ಜನರು ಪ್ರತಿದಿನವೂ ಬಂದು ಪೌರಾಣಿಕ ನಾಟಕಗಳನ್ನು ಸಂತೋಷದಿಂದ ವೀಕ್ಷಿಸಿ ಕಣ್ತುಂಬಿ ಕೊಳ್ಳುವುದಲ್ಲದೆ ಕಲಾವಿದರನ್ನು ಪ್ರೋತ್ಸಾಹಿಸಿ ಉತ್ತೇಜಿಸುತ್ತಿದ್ದಾರೆ. ಡಾ. ರಾಜಕುಮಾರ್ ಕಲಾ ಸಂಘದ ನೇತೃತ್ವ ವಹಿಸಿರುವ ಎಲ್.ಐ.ಸಿ.ಕುಮಾರ್, ಜೈಭುವನೇಶ್ವರಿ ರಂಗಕಲಾ ಸಂಘದ ಅಧ್ಯಕ್ಷ ಡಾ. ಕೆ.ಎನ್.ತಮ್ಮಯ್ಯ ಹಾಗೂ ವಿಶ್ರಾಂತ ಶಿಕ್ಷಕರಾದ ಶಂಕರೇಗೌಡ ಅವರು ಕಲಾವಿದರನ್ನು ಒಗ್ಗೂಡಿಸಿ ರಾಜ್ಯದ ವಿವಿಧ ಭಾಗಗಳಿಂದ ಪೌರಾಣಿಕ ನಾಟಕ ತಂಡಗಳನ್ನು ಆಹ್ವಾನಿಸಿ 21 ದಿನಗಳ ಕಾಲ ಸತತವಾಗಿ ಪೌರಾಣಿಕ ನಾಟಕಗಳ ಪ್ರದರ್ಶನವನ್ನು ನಡೆಸುವ ಮೂಲಕ ರಂಗಭೂಮಿ ಚಟುವಟಿಕೆಗಳನ್ನು ಜೀವಂತವಾಗಿರಿಸಿರುವುದು ಸಂತೋಷ ತಂದಿದೆ ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ನೂತನ ಅಧ್ಯಕ್ಷ ತೆರ್ನೇನಹಳ್ಳಿ ಬಲದೇವ್, ಸಮಾಜ ಸೇವಕರಾದ ಆರ್ಟಿಓ ಮಲ್ಲಿಕಾರ್ಜುನ್, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಗ್ರಾ.ಪಂ.ಸದಸ್ಯ ಶೀಳನೆರೆ ಸಿದ್ದೇಶ್, ಮಾದೇಗೌಡ ಆಸ್ಪತ್ರೆಯ ವ್ಯವಸ್ಥಾಪಕ ಬೋರೇಗೌಡ, ಶೀಳನೆರೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಪ್ರಕಾಶ್, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಎಸ್.ಎಲ್.ಮೋಹನ್, ಪುರಸಭೆ ಮಾಜಿ ಅಧ್ಯಕ್ಷ ಚಂದ್ರೇಗೌಡ, ಹಿರಿಯ ರಂಗಭೂಮಿ ಕಲಾವಿದರಾದ ಹರಿಹರಪುರ ಮಹದೇವೇಗೌಡ, ಕೆ.ಕೆ.ಕೃಷ್ಣ, ಕಾಳಪ್ಪ, ಹೆಚ್.ಕೆ.ಸಿದ್ದರಾಜು, ಅಗ್ರಹಾರಬಾಚಹಳ್ಳಿ ಶಬ್ಬೀರ್ಅಹಮದ್, ಮಡುವಿನಕೋಡಿ ಚಂದ್ರಶೇಖರ್, ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಸಿ.ದಿವಿಕುಮಾರ್, ಸದಸ್ಯ ಆರ್ ಶ್ರೀನಿವಾಸ್ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಕಲಾಭಿಮಾನಿಗಳು ಸಂಪೂರ್ಣ ರಾಮಾಯಣ ನಾಟಕವನ್ನು ವೀಕ್ಷಿಸಲು ಆಗಮಿಸಿದ್ದು ವಿಶೇಷವಾಗಿತ್ತು.
– ಶ್ರೀನಿವಾಸ್ ಆರ್.

[…] […]