ಕೆ.ಆರ್.ಪೇಟೆ,ಸೆ.25: ಬುಧವಾರ ನಿಧನರಾದ ನಾಡಿನ ಹಿರಿಯ ಸಾಹಿತಿ, ವಿಶ್ವಖ್ಯಾತಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಿ ಗೌರವ ಸಲ್ಲಿಸಲಾಯಿತು.
ಡಾ.ಎಸ್.ಎಲ್.ಭೈರಪ್ಪ ಅವರಿಗೆ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಮಾತನಾಡಿದ ತಾಲ್ಲೂಕು ಕನ್ನಡ ಪರಿಷತ್ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರತೇಜಸ್ವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಮಾತನಾಡಿ ಹುಟ್ಟೂರಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಭೈರಪ್ಪ ಅವರು ತಮ್ಮ ಗ್ರಾಮದ ಕೆರೆಯ ಒಳಗಿರುವುದನ್ನು ಕಂಡು ಶತಾಯಗತಾಯ ಹೇಗಾದರೂ ಮಾಡಿ ಗ್ರಾಮದ ಕೆರೆಯನ್ನು ತುಂಬಿಸಲೇಬೇಕು ಎಂಬ ಛಲವನ್ನು ಹೊತ್ತು ಸರ್ಕಾರವನ್ನು ಕಾಡಿಬೇಡಿ ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿಸಿ ತಮ್ಮ ಗ್ರಾಮದ ಕೆರೆಯನ್ನು ತುಂಬಿಸುವ ಮೂಲಕ ಅಭಿನವ ಭಗೀರಥ ಎಂದು ಗ್ರಾಮಸ್ಥರಿಂದ ಹೆಸರು ಗಳಿಸಿದ್ದರು. ಭೈರಪ್ಪ ಅವರ ಮೇರು ವ್ಯಕ್ತಿತ್ವವು ಇಂದಿನ ಯುವ ಸಾಹಿತಿಗಳಿಗೆ ಮಾದರಿಯಾಗಿದ್ದು ಭೈರಪ್ಪ ಅವರು ರಚಿಸಿರುವ ಕಾದಂಬರಿಗಳನ್ನು ಓದಿ ಮನನ ಮಾಡಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಯುವ ಸಾಹಿತಿಗಳು ಭೈರಪ್ಪ ಅವರ ಮಾರ್ಗದಲ್ಲಿ ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಎಸ್.ಎಲ್.ಭೈರಪ್ಪ ಅವರು ಬರೆದಿರುವ ಪರ್ವ ಸೇರಿದಂತೆ ಹಲವಾರು ಕಾದಂಬರಿಗಳು ಇಡೀ ವಿಶ್ವದ ಹತ್ತಾರು ಭಾಷೆಗಳಿಗೆ ಭಾಷಾಂತರಗೊಂಡಿವೆ. ಗಟ್ಟಿ ಸಾಹಿತ್ಯ ಒಳಗೊಂಡ ಸಾಹಿತ್ಯವು ಮಾತ್ರ ಬೇರೆ ಭಾಷೆಗಳಿಗೆ ಭಾಷಾಂತರಗೊಳ್ಳುತ್ತವೆ. ಅಂತಹ ಉತ್ತಮ ಕಾದಂಬರಿಗಳನ್ನು ಭೈರಪ್ಪ ಅವರು ಬರೆದಿರುತ್ತಾರೆ. ಕಾಲ್ಪನಿಕ ಕಾದಂಬರಿಗಿಂತ ನೈಜ ಸನ್ನಿವೇಶಗಳನ್ನು ಕುರಿತು ಅತಿ ಹೆಚ್ಚು ಕಾದಂಬರಿಗಳನ್ನು ಭೈರಪ್ಪ ಅವರು ಬರೆದಿದ್ದಾರೆ. ಇಂತಹ ಶ್ರೇಷ್ಠ ಸಾಹಿತಿಗಳನ್ನು ಕಳೆದುಕೊಂಡು ಕನ್ನಡ ಕನ್ನಡ ಸಾರಸ್ವತ ಲೋಕ ಬಡವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರು ಕನ್ನಡ ಸರಸ್ವತ ಲೋಕದ ದಿಗ್ಗಜ ಶ್ರೇಷ್ಠ ಕಾದಂಬರಿಕಾರ ಪದ್ಮಭೂಷಣ, ನಡೋಜ ಎಸ್ ಎಲ್ ಭೈರಪ್ಪ ಅವರ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದ ಒಬ್ಬ ಸಾಮಾನ್ಯ ರೈತನ ಮಗನಾಗಿ ರೈತ ಕುಟುಂಬದಲ್ಲಿ ಜನಿಸಿದ ಭೈರಪ್ಪ ಅವರು, ಬಾಲ್ಯದಲ್ಲಿಯೇ ತಮ್ಮ ತಾಯಿಯನ್ನು ಕಳೆದುಕೊಂಡು, ಅತ್ಯಂತ ಬಡತನದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ನಾಡಿನ ಶ್ರೇಷ್ಠ ಕಾದಂಬರಿ ಕಾರರಲ್ಲಿ ಒಬ್ಬರಾಗಿ, ವಿಶ್ವ ಮಾನ್ಯವಾದ ಕಾದಂಬರಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಸರ್ವ ಶ್ರೇಷ್ಠ ಕೊಡುಗೆಯನ್ನು ನೀಡಿರುವ ಮಹಾನುಭಾವರಾಗಿದ್ದಾರೆ. ಬರುವ ಗೃಹಬಂಗ ತಬ್ಬಲಿಯು ನೀನಾದೆ ಮಗನೇ ಮತದಾನ ಮನ್ವಂತರ ಕಾದಂಬರಿಗಳು ವಿಶ್ವದ ಅನೇಕ ಭಾಷೆಗಳಿಗೆ ತರ್ಜುಮೆಗೊಂಡು ಅತಿಹೆಚ್ಚಿನ ಮುದ್ರಣವನ್ನು ಕಂಡು ಸಪ್ತಸಾಗರದ ಆಚೆಗೂ ಭೈರಪ್ಪ ಅವರ ಸಾಹಿತ್ಯದ ಕಂಪು ಹರಡಿದ್ದುದು ವಿಶೇಷವಾಗಿತ್ತು. ತಾಯಿ ಸರಸ್ವತಿಯ ವರಪುತ್ರರಾಗಿ ಸರಸ್ವತಿ ಸಮ್ಮಾನ್ ಸಾಹಿತ್ಯ ಲೋಕದ ಸರ್ವ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಭೈರಪ್ಪ ಬೆಂಕಿಯಲ್ಲಿ ಅರಳಿದ ಹೂವಿನಂತಿದ್ದರು . ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಭೈರಪ್ಪ ಅವರ ಕಾದಂಬರಿಗಳಿಗೆ ಸಲ್ಲುತ್ತದೆ. 94 ವರ್ಷಗಳ ತುಂಬು ಜೀವನವನ್ನು ಕಳೆದಿರುವ ಭೈರಪ್ಪ ಅವರ ಸಾವು, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೆ.ಬಿ. ಚಂದ್ರಶೇಖರ್ ಕಂಬನಿ ಮಿಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಪ್ರವೀಣ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಪ್ರಗತಿಪರ ಚಿಂತಕ ಕತ್ತರಘಟ್ಟ ವಾಸು, ಗಾನಗಂಧರ್ವ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ರವಿ ಶಿವಕುಮಾರ್, ಜಯಶ್ರೀ ಚಿಮ್ಮಲ್, ಗ್ಯಾಸ್ ರಾಜಶೇಖರ್, ಹೆಚ್.ಎಲ್.ಬಿ.ಸಿ ಪ್ರಕಾಶ್, ಟಿ.ಎನ್.ದಿವಾಕ್, ಬಳ್ಳೇಕೆರೆ ವಿಜಯ್ಕುಮಾರ್, ಗ್ರಾ.ಪಂ.ಸದಸ್ಯರಾದ ಆರ್ ಶ್ರೀನಿವಾಸ್, ಹೊನ್ನೇನಹಳ್ಳಿ ರವಿ, ಹೆಚ.ಎ.ಕೃಷ್ಣೇಗೌಡ, ರಂಗನಾಥಪುರ ಕ್ರಾಸ್ ಲಕ್ಷ್ಮಣ್, ದಲಿತ ಮುಖಂಡ ಬಸ್ತಿರಂಗಪ್ಪ ಸೇರಿದಂತೆ ಬೈರಪ್ಪ ಅವರ ನೂರಾರು ಅಭಿಮಾನಿಗಳು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.
