ಕೆ.ಆರ್.ಪೇಟೆ: ಸತ್ಯ,ಅಹಿಂಸೆ,ದಯೆ ಮತ್ತು ವ್ಯಸನ ಮುಕ್ತ ಜೀವನ ಸಂದೇಶ ಸಾರಿದ ಸೇವಾಲಾಲ್ ಅವರು ಸಮಾಜದ ಸುಧಾರಣೆಗೆ ಶ್ರಮಿಸಿದ ಮಹಾಚೇತನ.ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮತ್ತು ಶೈಕ್ಷಣಿಕ ಜಾಗೃತಿ ಮೂಡಿಸುವುದೇ ಸೇವಾಲಾಲ್ ಜಯಂತಿಯ ಉದ್ದೇಶವಾಗಿದೆ ಎಂದು ಎಸ್ಸಿ -ಎಸ್ಟಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹಳೆಯೂರು ಯೋಗೇಶ್ ತಿಳಿಸಿದರು.
287ನೇ ಶ್ರೀ ಸಂತ ಸೇವಾಲಾಲ್ ಜಯಂತಿ ಪ್ರಯುಕ್ತ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ತಾಲ್ಲೂಕಿನ ಗೋರ್ ಬಂಜಾರ ನೌಕರರ ಬಳಗದ ವತಿಯಿಂದ ಕೆ.ಆರ್.ಪೇಟೆ ತಾಲ್ಲೂಕು ಶಿಕ್ಷಕ ಭವನದಲ್ಲಿ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಿಸಿ ಮಾತನಾಡಿದರು.ಸಂತ ಸೇವಾಲಾಲ್ ಮಹಾರಾಜರ ಜಯಂತಿಯು ಬಂಜಾರ ಸಮಾಜದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಕೇತವಾಗಿದೆ.ಸಂತ ಸೇವಾಲಾಲ್ ಅವರು ಬಂಜಾರ ಸಮಾಜದ ಆರಾಧ್ಯ ದೈವ ದಾರ್ಶನಿಕ ಮತ್ತು ಸಮಾಜ ಸುಧಾರಕರು 1739 ಫೆಬ್ರವರಿ15ರಂದು ಜನಿಸಿದ ಅವರು ಸಮಾಜದಲ್ಲಿನ ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಲು ಶ್ರಮಿಸಿದ ಮಹಾನ್ ಪುರುಷರು,ಈ ನಮ್ಮ ದೇಶದ ನೆಲ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ್ದು ಈ ವೈವಿಧ್ಯತಾ ಸಂಸ್ಕೃತಿಗೆ ಹಲವಾರು ಸಾಂಸ್ಕೃತಿಕ ರಾಯಭಾರಿಗಳು ಕಾರಣೀಭೂತರು,ಭಾರತ ನೆಲದಲ್ಲಿ ಹಲವು ಸಂತರು, ಧರ್ಮ ಸುಧಾರಕರು, ತತ್ವಜ್ಞಾನಿಗಳು ಜನ್ಮ ತಾಳಿ ಜನರಲ್ಲಿನ ತಮಂಧತೆಯನ್ನು ಹೋಗಲಾಡಿಸಿದ್ದಾರೆ.ಇಂತಹ ಮಹಾನ್ ಸಂತರುಗಳಲ್ಲಿ ಸದ್ಗುರು ಸಂತ ಸೇವಾಲಾಲ್ ಮಹಾರಾಜರು ಒಬ್ಬರು ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ* ಸಂತ ಸೇವಾಲಾಲ್ ಅವರು ತತ್ವ ಮತ್ತು ಧರ್ಮದ ಮಾರ್ಗವನ್ನು ಬೋಧಿಸಿದರು. ವ್ಯಸನ ಮುಕ್ತ ಸಮಾಜ (ದಾರು ಗಾಂಜಾ ಮತ್ ಪೀವೋ) ಮತ್ತು ಅಹಿಂಸಾತ್ಮಕ ಜೀವನವನ್ನು ಪ್ರತಿಪಾದಿಸಿದರು. ಶಿಕ್ಷಣವೇ ಜ್ಞಾನದ ಕಣ್ಣು ಎಂದು ಸಮಾಜಕ್ಕೆ ಸಾರಿದರು.ಬಂಜಾರ ಸಮಾಜವು ಅಕ್ಷರ ಜ್ಞಾನ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು.ಸಮಾಜದಲ್ಲಿ ಸೋದರತ್ವವನ್ನು ಮೂಡಿಸಬೇಕು.ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಪ್ರಾಮಾಣಿಕವಾಗಿ ಜೀವನ ಮಾಡಬೇಕೆಂದು ಕರೆ ನೀಡಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪೂರ್ಣ ಚಂದ್ರ ತೇಜಸ್ವಿ,ಶಿಕ್ಷಣ ಸಂಯೋಜಕ ವೀರಭದ್ರಯ್ಯ,ಪ್ರಸನ್ನ ನಾಯಕ್,ಮಹಿಳಾ ಮಕ್ಕಳು ಇಲಾಖೆಯ ಮೇಲ್ವಿಚಾರಕಿ ಶಾಂತವ್ವ,ಮನ್ಮುಲ್ ಮೇಲ್ವಿಚಾರಕ ಮಾನ್ ಸಿಂಗ್,ರಂಗನಾಯಕ್,ಕೃಷ್ಣ ಕುಮಾರ್,ಬಂಜಾರ ಸಮುದಾಯದ ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
