ಕೆ.ಆರ್.ಪೇಟೆ/ಶ್ರವಣಬೆಳಗೊಳ:ಮಾ.04: ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ದಡಿಘಟ್ಟ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ(ದಡಿಘಟ್ಟದಮ್ಮ) ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಯ ಮಹಾರಥೋತ್ಸವವು ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ವಿವಿಧ ರೀತಿ ಹೂವು, ಹಾರ, ಬಾಳೆಗೊನೆ, ಮಾವಿನ ತೋರಣ, ಬಣ್ಣ ಬಣ್ಣದ ವಸ್ತ್ರಗಳಿಂದ ರಥವನ್ನು ಸಿಂಗರಿಸಲಾಗಿತ್ತು. ದಡಿಘಟ್ಟ ಗ್ರಾಮದ ಮುಖಂಡರು ರಥಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ನಂತರ ಭಕ್ತ ಸಮೂಹ ರಥ ಎಳೆದರು. ರಥದ ಮೇಲೆ ಭಕ್ತರು ದವನದ ಪತ್ರೆ, ಹೂವು, ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟಾರ್ಥ ಈಡೇರುವಂತೆ ಪ್ರಾರ್ಥಿಸಿದರು. ಬೆಟ್ಟದಹಳ್ಳಿ ಶ್ರೀ ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ದೇವರ ಪೂಜಾ ಕುಣಿತವು ರಥೋತ್ಸವಕ್ಕೆ ವಿಶೇಷ ಮೆರಗು ತಂದಿತ್ತು.

ಅನ್ನಧಾನ, ರಥೋತ್ಸವ ಮತ್ತು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಕೆ.ಆರ್.ಪೇಟೆ ಆರ್.ಟಿ.ಓ. ಮಲ್ಲಿಕಾರ್ಜುನ್ ಅವರು ದೇವಾಲಯಗಳು ನೆಮ್ಮದಿ ತಾಣ. ಪ್ರತಿಯೊಬ್ಬ ಭಕ್ತರು ದೇವಾಲಯ ಮೊರೆ ಹೋಗುತ್ತಿದ್ದಾರೆ. ಸನಾತನ ಧರ್ಮದಲ್ಲಿ ದೇವಾಲಯಗಳಿಗೆ ತನ್ನದೇ ಪಾಮುಖ್ಯತೆ ಇದೆ. ಪ್ರತಿಯೊಬ್ಬರು ಕೂಡಜಾತ್ರೆ, ಧಾರ್ಮಿಕಸಮಾರಂಭಗಳಲ್ಲಿ ಭಾಗವಹಿಸುವುದನ್ನು ಕಲಿಯಬೇಕು. ದೇವಾಲಯಗಳು ಶ್ರದ್ಧಾಕೇಂದ್ರಗಳು ಆಗಬೇಕು. ಭಕ್ತಿಯಿಂದ ಪೂಜಿಸಿದರೆ ಪರಮಾತ್ಮ ಎಲ್ಲರನ್ನೂ ಕಾಪಾಡುತ್ತಾನೆ. ದೇವರ ಮೇಲೆ ನಂಬಿಕೆ ಇಡಬೇಕೆಂದು ತಿಳಿಸಿದರು.
ಹಬ್ಬ, ಜಾತ್ರೆಯಂತಹ ಆಚರಣೆಗಳು ಬಂಧು-ಬಾಂಧವರನ್ನೆಲ್ಲ ಒಂದು ಮಾಡುತ್ತವೆ. ಆಗಾಗ್ಗೆ ಒಂದೆಡೆ ಕುಟುಂಬ ಸಮೇತ ಸೇರಿ ಅಭಿಪ್ರಾಯ ಹಂಚಿಕೊಳ್ಳಲು ನೆರವಾಗುತ್ತವೆ. ಜಾತ್ರೆಗಳು, ಹಬ್ಬಗಳು ಗ್ರಾಮದಲ್ಲಿ ಒಗ್ಗಟ್ಟು ಹಾಗೂ ಉತ್ತಮ ವಾತಾವರಣ ಸೃಷ್ಟಿಸುವ ವೇದಿಕೆಯನ್ನು ಜಾತ್ರೆಗಳು ಒದಗಿಸುತ್ತವೆ. ಯುವಪೀಳಿಗೆ ಧಾರ್ಮಿಕ ಆಚರಣೆಗಳನ್ನು ಅರಿತುಕೊಳ್ಳಲು ಸಹಕರಿಸುತ್ತವೆ. ಹಿರಿಯರ ಮಾರ್ಗದರ್ಶನ, ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು, ಜೀವನದಲ್ಲಿ ಮೌಲ್ಯಗಳನ್ನು ಧರ್ಮಾಧಾರಿತ ಬದುಕು ಸಾಗಿಸಿದಲ್ಲಿ ಸ್ವಾಭಿಮಾನಿ -ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ. ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಚನ್ನರಾಯಪಟ್ಟಣ ತಾಲ್ಲೂಕಿನ ದಡಿಘಟ್ಟ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ದೇವಿಯ ಮಹಾ ರಥೋತ್ಸವವು ಕೋವಿಡ್ ಸಂದರ್ಭದಲ್ಲಿಯೂ ನಿಲ್ಲದೇ, ತಲಾ ತಲಾಂತರಗಳಿಂದ ವೈಭವದಿಂದ ನಡೆಯುತ್ತಾ ಬಂದಿರುವುದು ದೇವಿಯ ಮಹಿಮೆಗೆ ಸಾಕ್ಷಿಯಾಗಿದೆ ಎಂದು ಆರ್.ಟಿ.ಓ ಮಲ್ಲಿಕಾರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬಾಯಿಬೀಗ, ಸಗಣಿ ಓಕಳಿಯಾಟ, ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ, ಜಾತ್ರೆ, ಕುರುಕ್ಷೇತ್ರ ನಾಟಕ ಪ್ರದರ್ಶನ, ಬೆಟ್ಟದಹಳ್ಳಿ ಶ್ರೀ ದೊಡ್ಡಯ್ಯ, ಚಿಕ್ಕಯ್ಯ, ಮೈಲಾರಲಿಂಗೇಶ್ವರ ಸ್ವಾಮಿಯವರ ಪೂಜಾ ಕುಣಿತ ಸೇರಿದಂತೆ ಹಲವು ಧಾರ್ಮಿಕಗಳು ಕಳೆದ ಗುರುವಾರದಿಂದ ಮಂಗಳವಾರದವರೆವಿಗೂ ವೈಭವದಿಂದ ನಡೆದವು. ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವ ನಾರಾಯಣಗೌಡ, ಧರ್ಮಪತ್ನಿ ದೇವಕಿ ನಾರಾಯಣಗೌಡ ಸೇರಿದಂತೆ ಗಂಧನಹಳ್ಳಿ, ಮಿರ್ಲೆ, ಸಾಲಿಗ್ರಾಮ, ಕಿಕ್ಕೇರಿ, ಲಕ್ಷ್ಮೀಪುರ, ಚಲ್ಯ, ಕುಂಭೇನಹಳ್ಳಿ, ದಡಿಘಟ್ಟ, ಬೆಟ್ಟದಹಳ್ಳಿ, ಜುಟ್ಟನಹಳ್ಳಿ, ಬ್ಯಾಡರಹಳ್ಳಿ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು. ದಡಿಘಟ್ಟ ಶ್ರೀ ಲಕ್ಷ್ಮೀದೇವಿ ಯುವಕರ ಸಂಘದಿಂದ ಭಕ್ತಾಧಿಗಳು ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
==============================
