ಕೆ.ಆರ್.ಪೇಟೆ,ಜ.03: ಕ್ರೀಡೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿವೆ. ಯಾರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಾರೋ ಅವರು ಹೆಚ್ಚು ಆರೋಗ್ಯವಂತರಾಗಿರುತ್ತಾರೆ ಹಾಗೂ ದೀರ್ಘಾಯುಷಿಗಳಾಗುತ್ತಾರೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಶಂಕರ್ ಸ್ಪೋಟ್ಸ್ ಅಕಾಡೆಮೆಯ ಒಳಾಂಗಣ ಕ್ರೀಡಾಂಗಣದಲ್ಲಿ ಕಿಕ್ಕೇರಮ್ಮ ರೂರಲ್ ಸ್ಪೋಟ್ಸ್ ಕ್ಲಬ್ ಮತ್ತು ಕಿಕ್ಕೇರಿ ಸುರೇಶ್ ಪ್ರೀಮಿಯರ್ ಲೀಗ್ ಸಂಯುಕ್ತ ಆಶ್ರಯದಲ್ಲಿ ಕೆಪಿಸಿಸಿ ಸದಸ್ಯರು ಹಾಗೂ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಕಿಕ್ಕೇರಿ ಸುರೇಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಎರಡು ದಿನಗಳ ತಾಲ್ಲೂಕು ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಎಲ್ಲಾ 8ತಂಡಗಳ ಆಟಗಾರರನ್ನು ಪರಿಚಯ ಮಾಡಿಕೊಂಡ ಶಾಸಕರು. ಷಟಲ್ ಬ್ಯಾಟ್ ಹಿಡಿದು ಯಶಸ್ವಿಯಾಗಿ ಆಟ ಆಡುವ ಮೂಲಕ ಕ್ರೀಡಾಪಟುಗಳ ಗಮನ ಸೆಳೆದರು. ಪ್ರಥಮ ಬಹುಮಾನ 40ಸಾವಿರ, ಎರಡನೇ ಬಹುಮಾನ 30ಸಾವಿರ, 3ನೇ ಬಹುಮಾನ 20ಸಾವಿರ, 4ನೇ ಬಹುಮಾನ 10ಸಾವಿರ ಜೊತೆಗೆ ಪಾರಿತೋಷಕವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. ಕ್ರೀಡೆಗಳು ಮನುಷ್ಯನ ಒತ್ತಡ ನಿವಾರಣೆ ಮಾಡಿ, ಆತ್ಮವಿಶ್ವಾಸ ಹೆಚ್ಚಿಸುತ್ತವೆ ಹಾಗೂ ಆರೋಗ್ಯಕರ ಜೀವನಶೈಲಿಗೆ ಅಡಿಪಾಯ ಹಾಕುತ್ತವೆ. ದೈಹಿಕವಾಗಿ ಸಕ್ರಿಯವಾಗಿಸುತ್ತದೆ. ಹಾಗೂ ಸ್ಕೂಲಕಾಯತೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಯುವಕರು ತಮ್ಮ ಇಷ್ಟದ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಕ್ರೀಡೆಯನ್ನು ರೂಢಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಹೆಚ್.ಟಿ.ಮಂಜು ಯುವಜನರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಂಕರ್ ಸ್ಪೋಟ್ಸ್ ಅಕಾಡೆಮೆ ಅಧ್ಯಕ್ಷ ಕೆ.ಟಿ.ಶಂಕರ್, ಕಾರ್ಯದರ್ಶಿ ದೀಪಶ್ರೀಶಂಕರ್, ಕೆಪಿಎಸ್ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಕಿಕ್ಕೇರಿ ಮಧು, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶೇಖರ್, ಉದ್ಯಮಿ ಪುರ ವಿಶ್ವನಾಥ್, ಪುರಸಭಾ ಮಾಜಿ ಸದಸ್ಯ ನಂದೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಹಾಗೂ ವಿವಿಧ ತಂಡಗಳ ಕ್ರೀಡಾಪಟಗಳು, ನೂರಾರು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
