ಕೆ.ಆರ್.ಪೇಟೆ,ಡಿ.27: ಕ್ರೀಡೆಗಳು ಕೇವಲ ಮನರಂಜನೆ ಮತ್ತು ದೈಹಿಕ ವ್ಯಾಯಾಮವಲ್ಲ; ಅವು ಆರೋಗ್ಯಕರ ದೇಹ ಮತ್ತು ಪ್ರಶಾಂತ ಮನಸ್ಸನ್ನು ನಿರ್ಮಿಸುವ ಶಕ್ತಿಯುತ ಸಾಧನಗಳಾಗಿವೆ ಹಾಗಾಗಿ ಯುವಕರು ದುಶ್ಚಟಗಳಿಂದ ದೂರವಿದ್ದು, ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಮಾಜ ಸೇವಕರು ಹಾಗೂ ಉದ್ಯಮಿ ಹೊಸಹೊಳಲು ನಂಜುಂಡಸ್ವಾಮಿ ಸಲಹೆ ನೀಡಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದ ಡೊಮೆಸ್ಟಿಕ್ ಕ್ರಿಕೆರ್ಸ್ ಮತ್ತು ಮುತ್ತು ಕಪ್ ಸೀಸನ್-2 ವತಿಯಿಂದ ಹೊಸಹೊಳಲು ಗ್ರಾಮದ ಅಕ್ಕಿಹೆಬ್ಬಾಳು ರಸ್ತೆಯ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯಕವಾಗಿವೆ. ನಮ್ಮನ್ನು ಸದೃಢವಾಗಿ, ಕ್ರಿಯಾಶೀಲವಾಗಿರಿಸುತ್ತವೆ. ಕ್ರೀಡೆಗಳು ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ, ಮೆದುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತವೆ. ಶಿಸ್ತು, ನಾಯಕತ್ವ, ತಂಡದ ಕೆಲಸದಂತಹ ಜೀವನ ಕೌಶಲ್ಯಗಳನ್ನು ಕಲಿಸುತ್ತವೆ. ಒತ್ತಡ ನಿವಾರಣೆ ಮಾಡಿ, ಆತ್ಮವಿಶ್ವಾಸ ಹೆಚ್ಚಿಸುತ್ತವೆ ಮತ್ತು ಆರೋಗ್ಯಕರ ಜೀವನಶೈಲಿಗೆ ಅಡಿಪಾಯ ಹಾಕುತ್ತವೆ. ದೈಹಿಕವಾಗಿ ಸಕ್ರಿಯವಾಗಿರಿಸುವುದರಿಂದ ಸ್ಕೂಲಕಾಯತೆ ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರವು ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕಡ್ಡಾಯವಾಗಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕು ಈ ಮೂಲಕ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅವಕಾಶ ಕಲ್ಪಿಸಬೇಕು. ಯುವಕರು ಮೊಬೈಲ್ ಗೀಳಿನಿಂದ ಹೊರಬಂದು ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕ್ರೀಡೆಯ ಮಹತ್ವವನ್ನು ತಿಳಿಸಿದರು.
ಈ ನಿಟ್ಟಿನಲ್ಲಿ ನಮ್ಮ ಹೊಸಹೊಳಲು ಗ್ರಾಮದ ಡೊಮೆಸ್ಟಿಕ್ ಕ್ರಿಕೆರ್ಸ್ ಯುವಕರ ಬಳಗದವರು ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಂಡು ಯುವಕರಲ್ಲಿ ಒಗ್ಗಟ್ಟು ಮೂಡಿಸುತ್ತಿರುವುದು ಶ್ಲಾಘನೀಯ. ಅಲ್ಲದೆ ಯುವಕರನ್ನು ದುಶ್ಚಟದಿಂದ ದೂರ ಮಾಡಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರ ನೀಡುತ್ತಿರುವುದು ಅತ್ಯಂತ ಶ್ಲಾಘನೀಯವಾದ ಕೆಲಸವಾಗಿದೆ ಎಂದು ಉದ್ಯಮಿ ನಂಜುಂಡಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್, ಕಾರ್ಯಕ್ರಮ ಆಯೋಜಕರಾದ ಶಿವು, ಕೃಷ್ಣ, ರವಿ, ಶ್ರೀನಿವಾಸ್, ಮಂಜು, ಮಹೇಶ್, ಸತೀಶ್, ಪಮ್ಮಿ, ಪ್ರದೀಪ್, ಹರೀಶ್, ಪುನಿ, ಕೃಷ್ಣರಾಜ್, ಕಿಚ್ಚ, ಮನೋಜ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಿದ್ದು, ಶನಿವಾರ ಮತ್ತು ಭಾನುವಾರ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ತೀರ್ಪುಗಾರರಾಗಿ ಮಂಜು ಮತ್ತು ಮಹೇಶ್ ಭಾಗವಹಿಸಿದ್ದಾರೆ.
– ಶ್ರೀನಿವಾಸ್ ಆರ್.
