ಕೆ.ಆರ್.ಪೇಟೆ: ಸರ್ವಕಾಲಕ್ಕೂ ಆದರ್ಶ ಎನಿಸುವ ಶ್ರೀರಾಮನ ಬದುಕು ಹೇಳುವುದಕ್ಕೆ ಮತ್ತು ಕೇಳುವುದಕ್ಕೆ ಮಾತ್ರವಲ್ಲ. ಆ ಆದರ್ಶಗಳನ್ನು ನಾವೆಲ್ಲರೂ ಬದುಕಿನಲ್ಲಿ ಅವಳಡಿಸಿಕೊಳ್ಳಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಕೆ ಆರ್ ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ನೂತನ ಶ್ರೀ ರಾಮಮಂದಿರದ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ರಾಮ ಒಳ್ಳೆಯ ಚಾರಿತ್ರ್ಯಸಂಪನ್ನ, ಧರ್ಮವೀರ, ಕೃತಜ್ಞತಾ ಭಾವನೆ, ಸತ್ಯವಂತ, ವಿದ್ವಾಂಸ ಹೀಗೆ ಎಲ್ಲ ಗುಣಗಳನ್ನು ಹೊಂದಿದ್ದರು.ರಾಮಾಯಣದಲ್ಲಿರುವ ಸಾವಿರಾರು ಶ್ಲೋಕಗಳ ಪೈಕಿ ಪ್ರತಿಯೊಂದು ಬದುಕಿನ ಅರ್ಥವನ್ನು ಸಾರುತ್ತವೆ. ಮನುಷ್ಯನಿಗೆ ಎಲ್ಲ ಶಕ್ತಿಗಳನ್ನು ಕೊಡುವುದು, ಸಂಕಷ್ಟಗಳನ್ನು ದೂರ ಮಾಡುವುದು ವಾಯುಸ್ತುತಿ. ಇದನ್ನು ನಿತ್ಯ ಪಠಿಸಬೇಕು ಎಂದರು.ರಾಮ, ಲಕ್ಷ್ಮಣರು ಕಾಡಿಗೆ ಹೋದ ಪ್ರಸಂಗ, ಕಲ್ಲಿಗೂ ಜೀವ ತುಂಬಿದ ರಾಮನ ಶಕ್ತಿ, ಸೀತಾ ಸ್ವಯಂವರ ಹೀಗೆ ರಾಮಾಯಣದ ಹಲವು ಪ್ರಸಂಗಗಳನ್ನು ಮನಮುಟ್ಟುವಂತೆ ತಿಳಿಸಿ ರಾಮನ ಬದುಕಿನ ಕಥೆ ಸಮುದ್ರವಿದ್ದ ಹಾಗೆ. ಹೇಳಿದಷ್ಟೂ ಸಾಗುತ್ತಲೇ ಹೋಗುತ್ತದೆ. ಅವರ ವ್ಯಕ್ತಿತ್ವ ಹಾಗೂ ಬದುಕಿದ ರೀತಿ ಎಲ್ಲರಿಗೂ ಇಷ್ಟವಾಗುತ್ತದೆ. ವನವಾಸಕ್ಕೆ ಹೋಗುವ ಸಮಯದಲ್ಲಿ ರಾಮನ ವ್ಯಕ್ತಿತ್ವ ಸೂಕ್ಷ್ಮಕಣ್ಣಿನಿಂದ ಗಮನಿಸಬೇಕು ಎಂದು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಬೇಬಿಬೆಟ್ಟದ ಶ್ರೀ ಶಿವಬಸವ ಸ್ವಾಮೀಜಿ ರಾಮಾಯಣ ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ಅದರ ಅಂತಃಸತ್ವ ತಿಳಿದುಕೊಳ್ಳಬೇಕಿದೆ. ರಾಮಾಯಣ ಕೇಳಿದರೆ, ಜೀವನ ಶುದ್ಧವಾಗುತ್ತದೆ. ಅಂತಹ ಶಕ್ತಿ ‘ರಾಮ’ ಶಬ್ದದಲ್ಲಿದೆ. ಅಕ್ಷರತೆ, ಅಧ್ಯಯನಶೀಲತೆ, ಸಾಹಿತ್ಯಾಸಕ್ತಿ, ತಾತ್ವಿಕ ಚಿಂತನೆ ಇರುವ ಕಡೆಗಳಲ್ಲಿ ಶ್ರೀರಾಮರ ಶಕ್ತಿ ತೆರೆದುಕೊಳ್ಳುತ್ತದೆ.ಪ್ರೀತಿಯಿಂದ ಉತ್ತರಿಸುವ ಮೃದು ಸ್ವಭಾವ ರಾಮರದ್ದಾಗಿತ್ತು. ಉಪಕಾರ ಸ್ಮರಣೆ, ಪ್ರಜೆಗಳಿಗೆ ಮಕ್ಕಳಂತೆ ನೋಡಿಕೊಳ್ಳುವ ಗುಣ ಅವರಲ್ಲಿತ್ತು. ವಿಷಯ ಮಂಡನೆಯಲ್ಲಿ ರಾಮ ಬೃಹಸ್ಪತಿಯಾಗಿದ್ದರು. ಅವರ ಪ್ರಬುದ್ಧ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.
ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಬೂಕನಕೆರೆ ವಿಜಯ್ ರಾಮೇಗೌಡ ನಮ್ಮ ಗ್ರಾಮಕ್ಕೆ ಇತಿಹಾಸವಿದ್ದರೂ ಎಲ್ಲ ಕಾಲಮಾನದಲ್ಲೂ ಆದರ್ಶಪ್ರಾಯವಾಗುವ ಮಹನ್ ಮರ್ಯಾದ ಪುರುಷ ಶ್ರೀ ರಾಮರ ದೇಗುಲ ಇರಲಿಲ್ಲ. ಗ್ರಾಮದ ಹಿರಿಯ ಮುಖಂಡರು ದಾನಿಗಳ ಸಹಕಾರದಿಂದ ನೂತನ ಶ್ರೀ ರಾಮ ಮಂದಿರ ನಿರ್ಮಾಣಗೊಂಡು ಶ್ರೀಗಳ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿದೆ. ಯುವಕರು ಕೂಡ ಶ್ರೀ ರಾಮನ ತತ್ವ ಮೈಗೂಡಿಸಿಕೊಂಡು ಸದೃಢ ಸಮಾಜಕ್ಕೆ ಚಿಂತಿಸಬೇಕು ಎಂದರು.
ಶ್ರೀ ರಾಮ ಭಾವಚಿತ್ರ ಪ್ರಾಣ ಪ್ರತಿಷ್ಠಾಪನೆಯ ನಂತರ ವಿಶೇಷ ಪೂಜೆ, ಶ್ರೀರಾಮನ ಭಜನೆ-ಕೀರ್ತನೆಗಳು ಹಾಗೂ ಹಾರತಿ ನಡೆಯಿತು. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಜವರಾಯಿಗೌಡ,ಬೂಕನಕೆರೆ ವಿ.ಎಸ್.ಎಸ್.ಎನ್ ಅಧ್ಯಕ್ಷ ಪ್ರಕಾಶ್, ಮಾ. ತಾ.ಪಂ.ಅಧ್ಯಕ್ಷೆ ಮೀನಾಕ್ಷಿ ಪುಟ್ಟರಾಜು, ಮಾ. ತಾ.ಪಂ.ಸದಸ್ಯ ಕೃಷ್ಣೇಗೌಡ,ಗ್ರಾ.ಪಂ ಅಧ್ಯಕ್ಷ ಶ್ಯಾಮ್ ಪ್ರಸಾದ್,ಕೆ.ಡಿ.ಪಿ.ಸದಸ್ಯ ಮಲ್ಲಿಕಾರ್ಜುನ,ಹಾ. ಉ. ಸ. ಸಂ. ಬೂಕನಕೆರೆ ನಾಗೇಶ್,ವಿಠಲಪುರ ಸುಬ್ಬೆಗೌಡ,ಪಿಡಿಓ ನರಸಿಂಹರಾಜು,ಡಾ: ಶ್ರೀನಿವಾಸ್,ಡಾ: ವೆಂಕಟೇಶ್,ಡಾ: ಅರುಣಾನಂದ,ಗ್ರಾಮದ ಮುಖಂಡರಾದ ಮಳ್ಳೇಗೌಡ,ರಾಮೇಗೌಡ, ಶಿವಲಿಂಗೇಗೌಡ, ಗಾಯತ್ರಿ, ವಿಜಯ ರಾಮೇಗೌಡ ರ ಆಪ್ತ ಸಹಾಯಕ ಬಸವರಾಜು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
