ಕೆ.ಆರ್.ಪೇಟೆ,ಅ.12: ಜಾಗತಿಕ ಜಗತ್ತಿನ ಸ್ಪರ್ಧೆಯನ್ನು ಎದುರಿಸಲು ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಪಠ್ಯದ ಜೊತೆಗೆ ವಿದ್ಯಾರ್ಥಿಗಳ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಸಕರಾದ ಹೆಚ್.ಟಿ.ಮಂಜು ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ಹಾಗೂ 70ನೇ ಕನ್ನಡ ರಾಜ್ಯೋತ್ಸವವನ್ನು ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ, ಜ್ಯೋತಿ ಬೆಳಗಿಸಿ ಕಾರ್ಯಕ್ರಮಮ ಉದ್ಘಾಟಿಸಿ ಮಾತನಾಡಿದರು.

ನಾನು ಡಿಗ್ರಿ ವಿದ್ಯಾಭ್ಯಾಸ ಮಾಡಿದ ಈ ಕಾಲೇಜಿನ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ. ಅವರುಗಳಿಗೆ ಪ್ರಾಧ್ಯಾಪಕರ ಮಾರ್ಗದರ್ಶನವು ಬಹಳ ಮುಖ್ಯವಾಗಿದೆ. ಪಿಯುಸಿ ಹಂತವನ್ನು ದಾಟಿ ಪದವಿಗೆ ಸೇರಿದಾಗಲೆ ಅವರಲ್ಲಿನ ಮನೋಭಾವವು ಬದಲಾವಣೆಯನ್ನು ಕಂಡಿರುತ್ತದೆ. ಬದುಕಿನ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಂಡಿರುತ್ತಾರೆ. ಆದ್ದರಿಂದ ಪ್ರಾಧ್ಯಾಪಕರು ಕೇವಲ ಕೊಠಡಿ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು.

ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಪೋಷಕರ ನೆರವನ್ನು ಪಡೆದು ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಿಕೊಡಬೇಕು. ಇಂದು ಸ್ಪರ್ಧಾತ್ಮಕ ಪರೀಕ್ಷೆಗಳು ಸದಾ ಒಂದಿಲ್ಲೊಂದು ಇಲಾಖೆಯಿಂದ ನಡೆಯುತ್ತಲೆ ಇರುತ್ತವೆ. ಇವುಗಳನ್ನು ವಿದ್ಯಾರ್ಥಿ ಸಮೂಹಕ್ಕೆ ಪರಿಚಯಿಸುವ ಕೆಲಸವನ್ನು ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.

ನಮ್ಮ ತಾಲೂಕಿನಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಹಿಡಿದು ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಪದವಿಯವರೆಗೆ ಶಿಕ್ಷಣ ದೊರೆಯುತ್ತಿದೆ. ಇದು ಗ್ರಾಮೀಣ ಮಕ್ಕಳಿಗೆ ವರದಾನ. ಶಿಕ್ಷಣವು ವ್ಯಕ್ತಿಯ ಭವಿಷ್ಯವನ್ನೆ ಬದಲಿಸುತ್ತದೆ. ನಾನು ಕೂಡಾ ಇದೇ ಕಾಲೇಜಿನ ಗ್ರಾಮೀಣ ವಿದ್ಯಾರ್ಥಿ. ಹರಳಹಳ್ಳಿ ಎಂಬ ಪುಟ್ಟ ಗ್ರಾಮದಿಂದ ಬಂದ ನಾನು ಶಾಸಕನಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಇದಕ್ಕೆ ಕಾರಣ ಶಿಕ್ಷಣ. ಆದ್ದರಿಂದ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಸಮಯವನ್ನು ವ್ಯರ್ಥಮಾಡಬೇಡಿ. ನಿಮ್ಮ ತಂದೆ ತಾಯಿಗಳು ನಿಮ್ಮಗಳ ಬಗ್ಗೆ ಅಪಾರ ಕನಸು ಕಂಡಿರುತ್ತಾರೆ. ಆದ್ದರಿಂದ ಬೇರೆಡಗೆ ಆಕರ್ಷಣೆಗೆ ಒಳಗಾಗದೇ ಉತ್ತಮ ಶಿಕ್ಷಣ ಪಡೆದು ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಇದ್ದಲ್ಲಿ ನಮ್ಮ ಸಂಪರ್ಕ ಮಾಡಬೇಕು. ನಿಮ್ಮ ಜೊತೆ ಸದಾ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ನಾನಿರುತ್ತೇನೆ. ಒಳ್ಳೆಯ ಹಾದಿಯಲ್ಲಿ ನಡೆಯಲು ಬೇಕಾದ ಮಾರ್ಗವನ್ನು ಹಾಕಿಕೊಡುತ್ತೇವೆ. ಇದರಲ್ಲಿ ನಡೆದು ಜೀವನದ ಗುರಿಯನ್ನು ಮುಟ್ಟಿ ಎಂದು ಶಾಸಕ ಹೆಚ್.ಟಿ.ಮಂಜು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಡಾ.ವಿ.ವಿ.ಜಗದೀಶ್ ಮಾತನಾಡಿ ಕೆ.ಆರ್.ಪೇಟೆ ಕಾಲೇಜಿನಲ್ಲಿ ಐದು ವಿಷಯಗಳಿಗೆ ಸ್ನಾತಕೋತ್ತರ ತರಗತಿಗಳನ್ನು ನಡೆಸುತ್ತಿದ್ದು ಅಧ್ಯಯನ ಕೇಂದ್ರವನ್ನು ತೆರೆಯಲು ಅವಕಾಶವಿದೆ. ಆದ್ದರಿಂದ ನೀವು ನಮ್ಮ ಜೊತೆ ಕೈ ಜೋಡಿಸಬೇಕು ಹಾಗೂ ನಮ್ಮ ಕಾಲೇಜಿನ ಸಮಸ್ಯೆಗಳನ್ನು ತಮಗೆ ಲಿಖಿತ ರೂಪದಲ್ಲಿ ನೀಡಲಾಗಿದ್ದು ಅವುಗಳನ್ನು ಪರಿಹರಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಮಟ್ಟದ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಿವೃತ್ತ ಕನ್ನಡ ಪ್ರಾಧ್ಯಾಪಕ ಎಂ.ಎಸ್.ಸಂಪತ್ಕುಮಾರ್ ಕನ್ನಡ ನಾಡು ನುಡಿಯ ಬಗೆಗೆ ವಿಶೇ಼ ಉಪನ್ಯಾಸವನ್ನು ನೀಡಿದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ಚನ್ನರಾಜು, ತಿಬ್ಬೇಗೌಡ, ವಸಂತಕುಮಾರ್, ಕೆ.ಬಿ.ಮಧು, ಬಿ.ಎ.ಮಂಜುನಾಥ, ಅಲೋಕ್ಚಂದ್ರು, ಪ್ರಾಧ್ಯಾಪಕರುಗಳಾದ ಡಾ.ಜಯಕೀರ್ತಿ, ಡಾ.ಮಹೇಶ್, ಬೋರೇಗೌಡ, ಉಮೇಶ್, ಸವಿತಾ, ಪತ್ರಾಂಕಿತ ವ್ಯವಸ್ಥಾಪಕಿ ಜೆ.ಭುವನೇಶ್ವರಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಿ.ಬಿ.ಚೇತನ್ಕುಮಾರ್, ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್, ಶಾಸಕರ ಆಪ್ತ ಸಹಾಯಕ ಪ್ರತಾಪ್, ಪತ್ರಕರ್ತರಾದ ಮೊಸಳೆಕೊಪ್ಪಲು ದಿನೇಶ್, ಸೈಯದ್ ಖಲೀಲ್, ಹೊನ್ನೇನಹಳ್ಳಿ ಎಸ್.ರವಿ, ಸೇರಿದಂತೆ ಎಲ್ಲಾ ಪ್ರಾಧ್ಯಾಪಕರುಗಳು, ಆಡಳಿತ ಸಿಬ್ಬಂದಿ ವರ್ಗದ ಸದಸ್ಯರುಗಳು, ಮತ್ತಿತರರು ಇದ್ದರು.
-ಶ್ರೀನಿವಾಸ್ ಆರ್.
====================================
