ಕೆ.ಆರ್.ಪೇಟೆ: ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ವತಿಯಿಂದ ಕೆ.ಆರ್.ಪೇಟೆ ಪಟ್ಟಣದ ಪುರಸಭಾ ಕಚೇರಿಯ ಮುಂದೆ ತಾಲ್ಲೂಕು ಘಟಕದ ಅಧ್ಯಕ್ಷ ಸಮೀರ್ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪುರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಅಲ್ಪಸಂಖ್ಯಾತರಿಗೆಂದು ಕಟ್ಟಿದ್ದ ಸಮುದಾಯ ಭವನವನ್ನು ಪುರಸಭಾ ಕಚೇರಿಯನ್ನಾಗಿ 7ವರ್ಷಗಳ ಹಿಂದೆ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಆದರೂ ಬಡ ಅಲ್ಪಸಂಖ್ಯತರು ಹಾಗೂ ಹಿಂದುಳಿದ ವರ್ಗಗಳ ಬಡವರಿಗೆ ಮಧುವೆ ಸೇರಿದಂತೆ ಶುಭ ಕಾರ್ಯಕ್ರಮವನ್ನು ಮಾಡಲು ಬದಲಿ ವ್ಯವಸ್ಥೆ ಮಾಡಿರುವುದಿಲ್ಲ ಇದರಿಂದ ತಾಲ್ಲೂಕಿನ ಬಡವರಿಗೆ ತೀವ್ರ ತೊಂದರೆಯಾಗಿರುತ್ತದೆ ಕೂಡಲೇ ಪುರಸಭೆ ಕಚೇರಿ ಸಮೀಪವೇ ಇರುವ ಖಾಲಿ ನಿವೇಶನದಲ್ಲಿ ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ಸಮುದಾಯದ ಭವನ ನಿರ್ಮಿಸಿಕೊಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಪುರಸಭಾ ಅಧಿಕಾರಿಗಳನ್ನು ಒತ್ತಾಯ ಮಾಡಿದರು. ಈ ಸಂಬಂಧ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು, ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ತುರ್ತು ಗಮನ ಹರಿಸಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಸಮುದಾಯ ಭವನ ನಿರ್ಮಿಸಿಕೊಡಲು ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಈ ಬೇಡಿಕೆಯನ್ನು ಆದಷ್ಟೂ ಶೀಘ್ರವಾಗಿ ಈಡೇರಿಸದೇ ಇದ್ದಲ್ಲಿ ಪುರಸಭಾ ಕಚೇರಿಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸಮೀರ್, ಪ್ರಧಾನ ಕಾರ್ಯದರ್ಶಿ ಸಂತೇಬಾಚಹಳ್ಳಿ ಮಂಜುನಾಥ್, ಕಾನೂನು ಘಟಕದ ತಾಲ್ಲೂಕು ಜಿಲ್ಲಾಧ್ಯಕ್ಷ ಆರ್.ಎನ್.ದೇವಾನಂದ್, ಆಟೋ ಘಟಕದ ಅಧ್ಯಕ್ಷ ಕೆ.ಎನ್.ವಾಸುದೇವ್, ಮುಖಂಡರಾದ ನಯಾಜ್ ಪಾಷಾ, ದಯಾನಂದ್, ಅಂಗಡಿ ಸಲ್ಮಾನ್ಖಾನ್, ಇಬ್ರಾಹಿಂ, ಸಯ್ಯದ್ ಅನ್ಸರ್, ಅಹಮದ್ ಶೇಖ್, ಪ್ರಭಾಕರ್.ಕೆ.ಜಿ, ಸೇರಿದಂತೆ ಹಲವು ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯ ನಂತರ ಪುರಸಭಾ ಪ್ರಭಾರಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
– ಶ್ರೀನಿವಾಸ್ ಆರ್.
