ಕೆ.ಆರ್.ಪೇಟೆ,ಅ.30: ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ನಮ್ಮ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಬೆಲೆ ಏರಿಕೆಯಿಂದ ಮುಕ್ತಿ ನೀಡಿ, ಎರಡೂವರೆ ವರ್ಷಗಳಿಂದ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಿವೆ ಎಂದು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಹೇಳಿದರು.
ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ನಂತರ ಜನತೆ ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಮಹಿಳಾ ಪ್ರಯಾಣಿಕರಿಗೆ ಬಸ್ ವೆಚ್ಚ ಉಳಿತಾಯವಾಗುತ್ತಿದೆ. ಉಚಿತವಾಗಿ ಪಡಿತರ ವಸ್ತುಗಳನ್ನು ನೀಡಲಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಿಂದಾಗಿ ಮನೆ ಅಡುಗೆ ಮನೆ ನಿರ್ವಹಣೆಗೆ ಖರ್ಚುಗಳನ್ನು ಗಂಡಸರಿಂದ ಕೇಳುವುದು ತಪ್ಪಿದೆ. ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದ್ದು, ಇದು ನಿರುದ್ಯೋಗಿಗಳು ಖಾಯಂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಫೀಸ್ ಮತ್ತು ಅರ್ಜಿ ಸಲ್ಲಿಸುವ ಕೆಲಸಕ್ಕೆ ಓಡಾಟದ ಖರ್ಚಿಗೆ ತಂದೆ-ತಾಯಿಗಳಿಂದ ಕೇಳಿ ಪಡೆಯುವುದು ತಪ್ಪಿದೆ. ಹೀಗೆ ಪ್ರತಿ ತಿಂಗಳು ಸುಮಾರು ಏಳೆಂಟು ಸಾವಿರ ರೂಪಾಯಿಗಳಷ್ಟು ಪ್ರತಿ ಕುಟುಂಬಕ್ಕೆ ನಮ್ಮ ಗ್ಯಾರಂಟಿ ಯೋಜನೆಯಿಂದ ಅನುಕೂಲವಾಗುತ್ತಿದೆ.

2026ನೇ ಸಂಕ್ರಾಂತಿಯಿಂದ ಪಡಿತರ ಆಹಾರ ದಾನ್ಯಗಳನ್ನು ಇಂದಿರಾ ಕಿಟ್ ನಲ್ಲಿ ನೀಡಲಾಗುತ್ತಿದೆ. ಇಂತಹ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜನಪರ ಕಾರ್ಯಕ್ರಮಗಳನ್ನು ನಕಲು ಮಾಡಿ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಘೋಷಣೆ ಮಾಡುತ್ತಿದೆ ಹಾಗಾಗಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ನೈತಿಕತೆ ಬಿಜೆಪಿ ಪಕ್ಷಕ್ಕಿಲ್ಲ ಎಂದು ಎ.ಬಿ.ಕುಮಾರ್ ಹೇಳಿದರು.

ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್ ಮಾತನಾಡಿ ಪಡಿತರ ಚೀಟಿಗಳಿಗೆ ಹೆಸರು ಸೇರ್ಪಡೆ ಮಾಡಲು ತಿಂಗಳಿಗೊಮ್ಮೆ ಒಂದು ದಿನ ಅವಕಾಶ ನೀಡಲಾಗುತ್ತಿದೆ. ಈ ಬಗ್ಗೆ ತಮ್ಮ ಸಮೀಪದ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಅಥವಾ ಆಹಾರ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಅಗತ್ಯ ಇರುವವರು ಪಡಿತರ ಚೀಟಿಗಳಿಗೆ ತಮ್ಮ ನೊಂದಾಯಿಸಬಹುದು ಎಂದು ಮಾಹಿತಿ ನೀಡಿದರು.

ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ ಮಾತನಾಡಿ ಬಾಡಿಗೆ ಮನೆಯಲ್ಲಿ ವಾಸಿಸುವ ವಿದ್ಯುತ್ ಗ್ರಾಹಕರು ಬೇರೆ ಬಾಡಿಗೆ ಮನೆಗೆ ಹೋದಾಗ ಅಲ್ಲಿನ ವಿದ್ಯುತ್ ಆರ್.ಆರ್. ನಂಬರ್ ನೀಡಿ ಗೃಹಜ್ಯೋತಿ ಯೋಜನೆಗೆ ಹೊಸದಾಗಿ ನೊಂದಾಯಿಸಲು ಅವಕಾಶ ಇರುತ್ತದೆ ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಇದನ್ನು ಓದಿ: ಕೆ.ಆರ್.ಪೇಟೆ- ವಿರೋಧ ಪಕ್ಷದ ಶಾಸಕರಿಗೆ ಅನುಧಾನದಲ್ಲಿ ತಾರತಮ್ಯ- ಶಾಸಕ ಹೆಚ್.ಟಿ. ಮಂಜು ಬೇಸರ
ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ವಿದ್ಯಾವತಿ ಮಾತನಾಡಿ ಗೃಹಲಕ್ಷ್ಮೀ ಯೋಜನೆಯ ಹಣ ಸರಿಯಾಗಿ ಡಿಬಿಟಿ ಮೂಲಕ ಜಮಾ ಆಗದೇ ಇರುವ ಫಲಾನುಭವಿಗಳು ನಮ್ಮ ಸಿಡಿಪಿಓ ಕಚೇರಿಯನ್ನು ಕಚೇರಿ ಅವಧಿಯಲ್ಲಿ ಬೇಟಿ ಮಾಡಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಚೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ಎಂ.ನಟರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿದ್ಯಾವತಿ, ಜಿಲ್ಲಾ ಉದ್ಯೋಗಾಧಿಕಾರಿ ವಿ.ನವೀನ್ಕುಮಾರ್, ಡಿಪೋ ಟ್ರಾಪಿಕ್ ಇನ್ಸ್ಪೆಕ್ಟರ್ ಗವಿಸಿದ್ದಪ್ಪ ಅವರು ತಮ್ಮ ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಮಂಡಿಸಿದರು.

ಸಭೆಯಲ್ಲಿ ಮಂಡ್ಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಐಚನಹಳ್ಳಿ ಶಿವಣ್ಣ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಸುಷ್ಮ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಸದಸ್ಯರಾದ ಸಿ.ಆರ್.ಪಿ.ಕುಮಾರ್, ಬೂಕನಕೆರೆ ರೂಪಾಚಂದ್ರಶೇಖರ್, ಬೊಮ್ಮೇನಹಳ್ಳಿ ಲತಾಹರೀಶ್, ಕನಕದಾಸನಗರ ಶಿವಮ್ಮ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್(ಉಮೇಶ್), ಹಾಫೀಜ್ ಉಲ್ಲಾ, ಗೋವಿಂದನಹಳ್ಳಿ ಶ್ಯಾಮಣ್ಣ, ಬೂಕನಕೆರೆ ಬಿ.ಸಿ.ಮಾಧು, ದೊಡ್ಡತಾರಹಳ್ಳಿ ಸೋಮಶೇಖರ್, ಶಿವಲಿಂಗಪ್ಪ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
