ಕೆ.ಆರ್.ಪೇಟೆ,ಡಿ.28: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಇದೇ ಡಿ.30ರಂದು ಮಂಗಳವಾರ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಂಗಳವಾರ ಮುಂಜಾನೆ 5ಗಂಟೆಯಿಂದ ರಾತ್ರಿ 8ಗಂಟೆಯವರೆವಿಗೂ ಶ್ರೀ ಚನ್ನಕೇಶವಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ.
ವೈಕುಂಠ ಏಕಾದಶಿ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಹಾಲು, ಮೊಸರು, ಎಳನೀರು, ಜೇನು, ತುಪ್ಪ ಸೇರಿದಂತೆ ವಿವಿಧ ಬಗೆಯ ಅಭಿಷೇಕ, ಪಂಚಾಮೃತ ಅಭಿಷೇಕ ಮಾಡಲಾಗುವುದು. ನಂತರ ಬಗೆ ಬಗೆಯ ಪುಷ್ಪಾಲಂಕಾರ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆಯಿಂದಲೇ ವೈಕುಂಠ ದ್ವಾರ ದರ್ಶನ ಇರುತ್ತದೆ.
ರಾತ್ರಿ 8ಗಂಟೆಗೆ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ. ಗಾಯಕರಾದ ಅಬಾರಾಶೆ ಚಂದ್ರಶೇಖರ್ ತಂಡವರಿಂದ ಭಕ್ತಿ ಗೀತ ಗಾಯನ ಕಾರ್ಯಕ್ರಮ ಹಾಗೂ ರಾತ್ರಿ 8ಗಂಟೆಗೆ ಹರಿಕಥೆ ಕಾರ್ಯಕ್ರಮ ನಡೆಯಲಿದೆ ಹಾಗಾಗಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಕುಂಠ ಏಕಾದಶಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಆರ್
