ಕರ್ನಾಟಕ ಸರ್ಕಾರದ ಸಚಿವಾಲಯದ ಎಲ್ಲಾ ಇಲಾಖೆಗಳು, ನಿಗಮಗಳು ಮತ್ತು ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇನ್ಮುಂದೆ KAAMS (Karnataka Advanced Attendance Management System) ಮೊಬೈಲ್ ಆಪ್ ಮೂಲಕ ಹಾಜರಾತಿ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬಯೋಮೆಟ್ರಿಕ್ ಯಂತ್ರಗಳ ನಿರ್ವಹಣಾ ಅವಧಿಯು ಮುಗಿದಿರುವ ಹಿನ್ನೆಲೆಯಲ್ಲಿ, ಆಧುನಿಕ ತಂತ್ರಜ್ಞಾನ ಆಧಾರಿತ KAAMS ಆಪ್ ಅನ್ನು ಜಾರಿಗೆ ತರಲಾಗಿದೆ.2025-26ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 451 ರ ಅನ್ವಯ ಈ ಹೊಸ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು.
ಡೌನ್ಲೋಡ್ ವಿಧಾನ : ಸಿಬ್ಬಂದಿಗಳು ಪ್ಲೇಸ್ಟೋರ್ (Play Store) ಅಥವಾ ಆಪಲ್ ಸ್ಟೋರ್ (Apple Store) ನಿಂದ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಕ್ಷಣವೇ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಕಡ್ಡಾಯ ಪಾಲನೆ: ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೌಕರರು ಈ ತಂತ್ರಾಂಶವನ್ನು ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದಾಖಲೆ 1: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಟಿಪ್ಪಣಿ (ದಿನಾಂಕ: 19-02-2026)
- ವಿಷಯ: ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS) ಅನ್ನು ಕರ್ನಾಟಕ ಸರ್ಕಾರದ ಅಧಿಕಾರಿ/ಸಿಬ್ಬಂದಿಗಳಿಗೆ ಕಡ್ಡಾಯಗೊಳಿಸುವ ಕುರಿತು.
- ಉಲ್ಲೇಖ: ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಟಿಪ್ಪಣಿ ಸಂಖ್ಯೆ: ಮುಕಾ/ಇ-11646554/2026, ದಿನಾಂಕ: 08-01-2026.
- ಸಾರಾಂಶ: ಬಯೋಮೆಟ್ರಿಕ್ ಯಂತ್ರಗಳ ಅವಧಿ ಮುಗಿದಿರುವುದರಿಂದ, ಎಲ್ಲಾ ಇಲಾಖೆಗಳ ನೌಕರರು ಕೂಡಲೇ KAAMS ಮೊಬೈಲ್ ಆಪ್ ಬಳಸಲು ಪ್ರಾರಂಭಿಸಬೇಕು ಎಂದು ಜಯಸುಧಾ ಡಿ., ಸರ್ಕಾರದ ಅಧೀನ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ದಾಖಲೆ 2: ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಟಿಪ್ಪಣಿ (ದಿನಾಂಕ: 08-01-2026)
- ವಿಷಯ: KAAMS ಆಪ್ ಅಭಿವೃದ್ಧಿಪಡಿಸಲಾಗಿದ್ದು, ಜನವರಿ 3, 2026 ರವರೆಗೆ ದಾಖಲಾದ ಮಾಹಿತಿಯನ್ನು ಪರಿಶೀಲಿಸಲಾಗಿದೆ.
- ಸೂಚನೆ: ಇನ್ನೂ ಅನೇಕ ನೌಕರರು ಆಪ್ನಲ್ಲಿ ನೋಂದಾಯಿಸಿಕೊಳ್ಳದಿರುವುದು ಕಂಡುಬಂದಿದೆ. ಆದ್ದರಿಂದ ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ನೌಕರರಿಗೆ ಈ ಕುರಿತು ಅಗತ್ಯ ಸೂಚನೆ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ.

